ಶುಕ್ರವಾರ, ನವೆಂಬರ್ 22, 2019
20 °C
ಈ ವರ್ಷ ಅತಿಯಾದ ಮಳೆ: ಕೈಗೆ ಸಿಗದ ಫಸಲು

ಹೊಲದಲ್ಲೇ ಕೊಳೆಯುತ್ತಿದೆ ರಾಗಿ ಬೆಳೆ

Published:
Updated:

ಹಳೇಬೀಡು: ಅತಿಯಾದ ಮಳೆಯಿಂದ ಹಳೇಬೀಡು ಭಾಗದಲ್ಲಿ ರಾಗಿ ಬೆಳೆ ಮುರುಟಿ ಹೋಗುತ್ತಿದೆ. ಕಳೆದ ವಾರ ಸುರಿದ ಮಳೆಗೆ ರಾಗಿ ಸೇರಿದಂತೆ ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.

ರೈತರು ಕೊಯ್ಲು ಮಾಡಿದ ರಾಗಿ ಬೆಳೆ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ. ತೆನೆ ಭರ್ತಿ ಹಾಲು ತುಂಬಿದ ರಾಗಿ ಮೊಳಕೆ ಒಡೆಯುತ್ತಿದೆ. ಮೋಡದ ವಾತಾವರಣಕ್ಕೆ ರಾಗಿ ಫಂಗಸ್‌ನಿಂದಲೂ ನಲುಗಿದೆ. ಕಟಾವು ಮಾಡಿದ ರಾಗಿ ಬೆಳೆಯನ್ನು ಕಂತೆ ಕಟ್ಟಿ ಗುಡ್ಡೆ ಹಾಕುವುದಕ್ಕೂ ಮಳೆ ಬಿಡುವು ಕೊಡುತ್ತಿಲ್ಲ. ಸಾಕಷ್ಟು ರೈತರಿಗೆ ರಾಗಿ ಕಟಾವು ಮಾಡುವುದಕ್ಕೂ ಆಗಿಲ್ಲ.

‘ಮುಂಗಾರಿನಲ್ಲಿ ಮಳೆ ಇಲ್ಲದೆ ಯಾವ ಬೆಳೆಯೂ ಕೈಹಿಡಿಯಲಿಲ್ಲ. ಈಗ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದೆ. ಈ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ರೈತರು ಸೋತು ಹೋಗಿದ್ದಾರೆ. ಜಾನುವಾರುಗಳ ಮೇವಿಗೆ ಹುಲ್ಲು, ಜನರ ಆಹಾರಕ್ಕೆ ರಾಗಿ ದೊರಕುತ್ತದೆ ಎಂದು ರಾಗಿ ಬೆಳೆ ಮಾಡಿದ್ದೇವು. ಈಗ ಹುಲ್ಲು ರಾಗಿ ಎರಡೂ ಇಲ್ಲದಂತಾಗಿದೆ. ಬಿತ್ತನೆಯಿಂದ ಕಟಾವಿನವರೆಗೆ ₹ 10ರಿಂದ 15 ಸಾವಿರದವರೆಗೆ ವೆಚ್ಚವಾಗುತ್ತಿದೆ. ಈಗ ಬೆಳೆ ಹಣವನ್ನು ಕಳೆದುಕೊಂಡು ಬರಿಗೈನಲ್ಲಿದ್ದೇವೆ. ಮಳೆ ಬಂದರೂ ಮುಂದಿನ ಜೀವನಕ್ಕಾಗಿ ಪಡಬಾರದ ಕಷ್ಟ ಅನುಭವಿಸುವಂತಾಗಿದೆ’ ಎಂದು ರಾಜಗೆರೆ ಚಂದ್ರಯ್ಯ ಅಳಲು ತೋಡಿಕೊಂಡರು.

ಕಾಳು ಕಟ್ಟುವ ಸಮಯದಲ್ಲಿ ಮೋಡ ಕಟ್ಟಿದ್ದರಿಂದ ಕೆಲವು ಜಮೀನಿನಲ್ಲಿ ರಾಗಿ ಸಮರ್ಪಕವಾಗಿ ಕಾಳು ಕಟ್ಟದೆ ಜೊಳ್ಳಾಗಿದೆ. ಇಂತಹ ಫಸಲನ್ನು ಕಟಾವು ಮಾಡಿ ಒಕ್ಕಣೆ ಮಾಡಿದರೂ ಒಂದು ಎಕರೆ ಒಂದು ಚೀಲ ರಾಗಿಯೂ ದೊರಕುವುದಿಲ್ಲ ಎಂದು ರೈತ ಕುಮಾರಸ್ವಾಮಿ ಸಮಸ್ಯೆಯನ್ನು ಬಿಚ್ಚಿಡುತ್ತಾರೆ.

ಟೊಮೊಟೊ, ಎಲೆಕೋಸು ಮೊದಲಾದ ತರಕಾರಿ ಬೆಳೆಗಳಿಗೂ ಮಳೆಯಿಂದ ಹಾನಿಯಾಗಿದೆ. ಟೊಮೊಟೊ ಹೂವು ಉದುರುತ್ತಿದೆ. ತುಂತುರು ಮಳೆ ಹಾಗೂ ಮೋಡದ ವಾತಾವರಣದಿಂದ ಫಸಲಿಗೂ ರೋಗ ತಗುಲುವ ಭೀತಿ ರೈತರನ್ನು ಕಾಡುತ್ತಿದೆ.

ಈ ವರ್ಷ ರಾಗಿ ಹಾಗೂ ಒಣಹುಲ್ಲು ಕೊರತೆಯಾಗುವ ಸಾಧ್ಯತೆ ಇದೆ. ಮಳೆ ಬಂದಿರುವುದಿಂದ ಹೊಲದ ಬದು ಹಾಗೂ ಬಯಲಿನಲ್ಲಿ ಬೆಳೆದ ಹುಲ್ಲನ್ನು ದನಗಳಿಗೆ ಮೇಯಿಸಿಕೊಂಡು ಕಾಲ ದೂಡುವ ಪರಿಸ್ಥಿತಿ ಬಂದಿದೆ ಎಂದು ರೈತಮುಖಂಡ ಗುರುಶಾಂತಪ್ಪ ಎಂದರು.

ಪ್ರತಿಕ್ರಿಯಿಸಿ (+)