ಶನಿವಾರ, ಅಕ್ಟೋಬರ್ 1, 2022
20 °C

ಅರಕಲಗೂಡು: ಸರ್ಕಾರದ ಅನುದಾನ ದುರಪಯೋಗ, ರಸ್ತೆಗೆ ಗೇಟ್‌ ಹಾಕಿಕೊಂಡ ಬಿಜೆಪಿ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಸಿಮೆಂಟ್ ರಸ್ತೆ ಅಕ್ರಮಿಸಿಕೊಂಡು ಗೇಟ್ ಅಳವಡಿಸಿ ಸಾರ್ವಜನಿಕರು ಓಡಾಡದಂತೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಗೇಟ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಪಟ್ಟಣದ ಜಿಪಂ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ಶನಿವಾರಸಂತೆ ರಸ್ತೆಯಿಂದ ಮಲ್ಲಿಪಟ್ಟಣ ಕೆರೆ, ಜಮೀನು ಕಡೆಗೆ ಹಾದು ಹೋಗುವ ರಸ್ತೆಗೆ ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿದ ಸಿಮೆಂಟ್ ಕಾಂಕ್ರಿಟ್ ರಸ್ತೆಗೆ ಬಿಜೆಪಿ ಮುಖಂಡ ನಟೇಶ್ ಕುಮಾರ್ ಅಡ್ಡಲಾಗಿ ಗೇಟ್ ಅಳವಡಿಸಿ ಸಾರ್ವಜನಿಕರು ಓಡಾಡದಂತೆ ತಡೆಯೊಡ್ಡಿದ್ದಾರೆ. ಇದಕ್ಕೆ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮಲ್ಲಿಪಟ್ಟಣ ಗ್ರಾಮದ ಮಗೆ ಕೆರೆ ಮತ್ತು ದಕ್ಷಿಣದ ಕೆರೆ ಕೋಡಿಗೆ ಹಾಗೂ ಇದೇ ಮಾರ್ಗದಲ್ಲಿ ಮಲ್ಲಿಪಟ್ಟಣ- ಶನಿವಾರಸಂತೆ ಮುಖ್ಯ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಭೂಮಿಯನ್ನು ಬಿಡಲು ಸಿದ್ಧರಿದ್ದೇವೆ ಮತ್ತು ರಸ್ತೆ ನಿರ್ಮಾಣವಾದ ಬಳಿಕ ಆ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡುವುದಾಗಿ ನಟೇಶ್ ಕುಮಾರ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು.

ಅದರಂತೆ ಸರ್ಕಾರದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿದೆ. ಆದರೆ ಇತ್ತೀಚೆಗೆ ಏಕಾಏಕಿ ಸಿಮೆಂಟ್ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಾಣ ಮಾಡಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧ ಹೇರಲಾಗಿದೆ. ಗೇಟ್ ತೆರೆವುಗೊಳಿಸುವಂತೆ ಗ್ರಾಮಸ್ಥರು ಕೇಳಲು ಮುಂದಾದರೆ ಬೆದರಿಕೆ ಹಾಕಲಾಗುತ್ತಿದೆ.

ಈ ಕುರಿತು ಜಿ.ಪಂ. ಎಂಜಿನಿಯರ್ ಗಮನಕ್ಕೆ ತಂದು ಗೇಟ್ ತೆರವುಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಎಂಜಿನಿಯರ್ ಕೂಡ ಅಕ್ರಮದಲ್ಲಿ ಶಾಮೀಲಾಗಿ ಗೇಟ್ ತೆರವುಗೊಳಿಸದೆ ಸಬೂಬು ಹೇಳುತ್ತಿದ್ದು ಕಚೇರಿಗೆ ಅಲೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿದರು.

ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ರಸ್ತೆ ಅಕ್ರಮಿಸಿ ಗೇಟ್ ನಿರ್ಮಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಗ್ರಾಮದ ಉಮೇಶ್, ಸುರೇಶ್, ಪುಟ್ಟರಾಜು, ರವಿಕುಮಾರ್, ಅರುಣ್, ಟೈಲರ್ ಮಂಜು, ಗಿರೀಶ್, ವೆಂಕಟೇಶ್, ಮಂಜುನಾಥ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು