ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ; ಹಲವೆಡೆ ಅಂಗಡಿ ಬಂದ್‌
Last Updated 27 ಸೆಪ್ಟೆಂಬರ್ 2021, 15:42 IST
ಅಕ್ಷರ ಗಾತ್ರ

ಹಾಸನ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ಬಸ್‌ ನಿಲ್ದಾಣ ರಸ್ತೆ, ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಮಾತ್ರ ವ್ಯಾಪಾರಿಗಳು ಹಾಗೂ ರೈತರು ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ ಬಂದ್‌ ಗೆ ಬೆಂಬಲ ನೀಡಿದರು. ಬಹುತೇಕ ಕಡೆ ಅಂಗಡಿ, ಹೋಟೆಲ್‌, ರೆಸ್ಟೋರೆಂಟ್, ಪೆಟ್ರೋಲ್ ಬಂಕ್‌, ಔಷಧ ಮಳಿಗೆ, ಆಸ್ಪತ್ರೆ, ಶಾಲಾ,ಕಾಲೇಜುಗಳು, ಹಾಲಿನ ಕೇಂದ್ರ ತೆರೆದಿದ್ದವು.

ಕೆಲ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಬಾಗಿಲುಮುಚ್ಚಿದ್ದರು. ಬಸ್‌, ಆಟೋ, ಸರಕು ಸಾಗಣೆ ವಾಹನ ಸಂಚಾರ ಸಾಮಾನ್ಯವಾಗಿತ್ತು.

ರೈತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸಂಚರಿಸಿ ಅಂಗಡಿಗಳನ್ನು ಬಂದ್ ಮಾಡಿ ಬಂದ್‌ಗೆ ಬೆಂಬಲ ನೀಡುವಂತೆ ಮಾಡಿದರು. ಕಾಂಗ್ರೆಸ್, ಜೆಡಿಎಸ್‌ ಕಾರ್ಯಕರ್ತರು, ರೈತ ಸಂಘ, ದಲಿತ ಸಂಘರ್ಷ ಸಮಿತಿ, ಮಹಿಳಾ ಸಂಘಟನೆಗಳು, ಬಾಳೆಹಣ್ಣು ವರ್ತಕರ ಸಂಘ, ಕೆಪಿಆರ್‌ಎಸ್‌, ಸಿಐಟಿಯು, ಪೌರಕಾರ್ಮಿಕರು ನಗರದಲ್ಲಿ ಮೆರವಣಿಗೆ ನಡೆಸಿದರು.ಹೇಮಾವತಿ ವೃತ್ತ, ತಾಲ್ಲೂಕು ಕಚೇರಿ ವೃತ್ತದಲ್ಲಿ ರಸ್ತೆತಡೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ರೈತ ವಿರೋಧಿ, ಕರಾಳ ಕಾಯ್ದೆಗಳನ್ನ ತಕ್ಷಣವೇ ರದ್ದು ಮಾಡಬೇಕು. ವಿದ್ಯುತ್‌ ತಿದ್ದುಪಡಿಯನ್ನುವಾಪಸ್ ಪಡೆಯಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಮಾಡಬಾರದು ಎಂದುಪ್ರತಿಭಟನಕಾರರು ಆಗ್ರಹಿಸಿದರು.

ನಗರದ ಬಸ್ ನಿಲ್ದಾಣದ ಬಳಿ ಅಂಗಡಿ ಬಂದ್‌ ಮಾಡಲು ಮಾಲೀಕ ನಿರಾಕರಿಸಿದ ವೇಳೆಪ್ರತಿಭಟನಾಕಾರರು ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನಾ ನಿರತರು ಕೆಲ ಕಾಲ ಧರಣಿ ನಡೆಸಿ, ಸ್ಥಳದಲ್ಲಿಯೇ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಆನೆಕೆರೆ ರವಿ ಮಾತನಾಡಿ, ರೈತ ವಿರೋಧಿ ಕಾಯ್ದೆ ರದ್ದು ಮಾಡಬೇಕೆಂದು ಆಗ್ರಹಿಸಿದೆಹಲಿಯಲ್ಲಿ ಹತ್ತು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ ಮೋದಿಗಂಭೀರವಾಗಿ ಪರಿಗಣಿಸಿಲ್ಲ. ದೇಶದ ರೈತರ ಕೂಗು ಕೇಳುತ್ತಿಲ್ಲ. ಅದಾನಿ, ಅಂಬಾನಿ ಅವರಿಗೆ ಹಣಮಾಡಿ ಕೊಡುವ ಕೆಲಸ ಮಾತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಆರ್‌ಎಸ್‌ ನನವೀನ್ ಕುಮಾರ್ ಮಾತನಾಡಿ, ದೇಶದಲ್ಲಿ ಕೆಟ್ಟ ಆರ್ಥಿಕ ನೀತಿಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದನ್ನು ಮರೆಮಾಚುವ ಉದ್ದೇಶ ದಿಂದ ಬೇಕಾಬಿಟ್ಟಿ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ ಎಂದು ದೂರಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಬೆಲೆ ಕುಸಿಯುತ್ತಿದ್ದರೂ ಪೆಟ್ರೋಲ್‌ ಬೆಲೆ ಹೆಚ್ಚಳವಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ತೈಲ ಬೆಲೆ ಇಳಿಸಬೇಕು. ರೈತರ ಬೆಳೆದ ವೈಜ್ಞಾನಿಕಬೆಳೆಗಳಿಗೆ ಬೆಲೆ ಸಿಗುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಮಹೇಶ್‌, ದೇವರಾಜೇಗೌಡ, ತಾರಾ ಚಂದನ್‌,ಪೀರ್‌ಸಾಬ್,
ನಾರಾಯಣಸ್ವಾಮಿ, ಜೆಡಿಎಸ್ ಮುಖಂಡ ಅಗಿಲೆ ಯೋಗೇಶ್‌, ಸಿಐಟಿಯು ಸಂಘಟನೆಯ ಪೃಥ್ವಿ, ಅಕ್ಮಲ್ ಜಾವೀದ್, ಕರ್ನಾಟಕ ರಕ್ಷಣಾ ವೇದಿಕೆಯ ಸತೀಶ್ ಪಟೇಲ್‌, ಅರವಿಂದ, ರೈತ ಸಂಘದ ಬಾಬು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT