ಕೊಣನೂರು: ‘ನಮ್ಮ ರಕ್ತ ನೀಡಿ ಮತ್ತೊಬ್ಬರ ಜೀವ ಉಳಿಸುವುದು ಮಾನವೀಯತೆ, ನಾವು ನೀಡುವ ರಕ್ತ ಕಷ್ಟದಲ್ಲಿರುವವರಿಗೆ ಜೀವಾಮೃತ’ ಎಂದು ಶಾಸಕ ಎ.ಮಂಜು ತಿಳಿಸಿದರು.
ಇಲ್ಲಿನ ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಎನ್ಎಸ್ಎಸ್ ಘಟಕ, ರೆಡ್ ಕ್ರಾಸ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅರಕಲಗೂಡು ತಾಲ್ಲೂಕು ಘಟಕ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸಮುದಾಯ ಆರೋಗ್ಯ ಕೇಂದ್ರ ಕೊಣನೂರು, ಅರಕಲಗೂಡು ರೋಟರಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ನಮ್ಮ ಅಳಿವಿನ ನಂತರವೂ ನಮ್ಮ ಸೇವೆಗಳು ಶಾಶ್ವತ. ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಮಾನವೀಯತೆ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿದರೆ ನಿಮ್ಮ ಭವಿಷ್ಯ ಮತ್ತು ಬದುಕು ಸುರಕ್ಷಿತವಾಗಿರುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಭವಿಷ್ಯವನ್ನು ಮೊಬೈಲ್ ಕಸಿದುಕೊಳ್ಳುತ್ತದೆ’ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 40ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. 150ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ 4 ಮಂದಿ ವೈದ್ಯಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮಾಧ್ಯಮ ದಿನಾಚರಣೆ ಅಂಗವಾಗಿ ವರದಿಗಾರರನ್ನು ಸನ್ಮಾನಿಸಲಾಯಿತು. ಅರಕಲಗೂಡು ರೋಟರಿ ಮಿಡ್ ಟೌನ್ ಸಂಸ್ಥೆಯಿಂದ ನಾಲ್ಕು ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಡಿಸಿ ಉಪಾಧ್ಯಕ್ಷ ಎಸ್.ಸಿ. ಚೌಡೇಗೌಡ, ಸದಸ್ಯ ಎಸ್. ನಾಗರಾಜು, ಪ್ರಾಂಶುಪಾಲ ಬಸವರಾಜು, ತಾಲ್ಲೂಕು ರೆಡ್ ಕ್ರಾಸ್ ಘಟಕದ ಅಧ್ಯಕ್ಷ ವಿ. ನಂಜುಂಡಸ್ವಾಮಿ, ಗ್ರಾ.ಪಂ ಅಧ್ಯಕ್ಷೆ ಮಿಜ್ಬಾ ರಿಜ್ವಾನ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನಿಲ್, ಅರಕಲಗೂಡು ರೋಟರಿ ಸಂಸ್ಥೆ ಮಿಡ್ ಟೌನ್ ಅಧ್ಯಕ್ಷ ಬಿ.ಆರ್. ರಾಜೀವ್, ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ದೀಪಕ್, ಡಾ. ಸ್ವಾಮಿಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.