ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಧಿಕಾರ ಹಿಡಿದ ಮರುದಿನ ಸಮ್ಮಿಶ್ರ ಸರ್ಕಾರ ಪತನ: ಎ.ಮಂಜು ಭವಿಷ್ಯ

Last Updated 2 ಮೇ 2019, 15:38 IST
ಅಕ್ಷರ ಗಾತ್ರ

ಹಾಸನ: ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವುದು ಬಹುತೇಕ ಖಚಿತ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದರು.

ಕೇಂದ್ರದಲ್ಲಿ ಮೋದಿ ಅಧಿಕಾರ ಹಿಡಿಯವುದು ನಿಶ್ಚಿತ. ಚುನಾವಣೆ ಹಿನ್ನೆಲೆಯಲ್ಲಿ ಹಲವು ಶಾಸಕರು ತಟಸ್ಥವಾಗಿದ್ದರು. ಆದರೆ ಅವರ ಅಭಿಪ್ರಾಯವೂ ಇದೆ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

"ಕಳೆದ ಚುನಾವಣೆಯಲ್ಲಿ ಎಂಟು ಕ್ಷೇತ್ರದಿಂದ‌ ಬಿಜೆಪಿಗೆ ಮೂರು ಲಕ್ಷ‌ ಮತಗಳು ಚಲಾವಣೆಯಾಗಿದ್ದವು. ಈ ಬಾರಿ 12 ಲಕ್ಷ ಮತ ಚಲಾವಣೆ ಆಗಿದ್ದು, 5.70 ಲಕ್ಷ ಮತಗಳು ನನ್ನ‌ ಪರವಾಗಿದೆ. ಮತ್ತೊಂದು ಅವಧಿಗೆ ಮೋದಿ ಪ್ರಧಾನಿ ಆಗಬೇಕು ಎಂದು ಜನತೆ ಬಯಸಿದ್ದಾರೆ. ಅಲ್ಲದೇ 80 ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದು, ಅವರೆಲ್ಲಾ ಬಿಜೆಪಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಹಾಗೂ ಕ್ಷೇತ್ರದ ಮತದಾರರು ಸಂಪೂರ್ಣ ಸಹಕಾರ ನೀಡಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ಪಿ ಕೂಡ ಗಣನೀಯ ಮತಗಳನ್ನು ಪಡೆಯಲಿದೆ. ಯಡಿಯೂರಪ್ಪ ಪ್ರಚಾರ ಮಾಡಿದ್ದು ಸಹಕಾರಿಯಾಗಿದೆ ಎಂದರು.

‘ದೇವೇಗೌಡರು ಜಿಲ್ಲೆಯಲ್ಲಿಯೇ ‌ಸ್ಪರ್ಧಿಸಬೇಕೆಂಬುದು ಎಲ್ಲರ ಬಯಕೆಯಾಗಿತ್ತು. ಆದರೆ, ಅವರು ಬೇರೆ ಜಿಲ್ಲೆಗೆ ಹೋಗುವ ಮೂಲಕ ಜಿಲ್ಲೆಯ ಮತದಾರರಿಗೆ ತಪ್ಪು ಮಾಡಿದರು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಜಿಲ್ಲೆಯ ಜನರು ಗೌಡರನ್ನು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿ ಯಾಗಿ ಮಾಡಿದರು. ಆದರೆ, ಕೊನೆ ಚುನಾವಣೆಯಲ್ಲಿ ತವರು ಕ್ಷೇತ್ರಬಿಟ್ಟು ಬೇರೆ ಜಿಲ್ಲೆಯಿಂದ ಸ್ಪರ್ಧೆ ಮಾಡಬಾರದಾಗಿತ್ತು’ ಎಂದು ಅಭಿಪ್ರಾಯಪಟ್ಟರು.

‘ಶಾಸಕ ಪ್ರೀತಂ ಗೌಡ ನೀಡಿರುವ ಹೇಳಿಕೆಗಳು ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಚುನಾವಣೆಗೂ ಮುನ್ನ ಮಾತನಾಡಿದ್ದು ಎಂಬುದನ್ನುಅವರೇ ಒಪ್ಪಿಕೊಂಡಿದ್ದರೆ. ಅದು ನಮ್ಮಿಬ್ಬರ ನಡುವೆ ವೈಮನಸ್ಸು ಉಂಟು ಮಾಡಲು ಬೇರೆಯವರು ಮಾಡಿದ ಪೂರ್ವ ನಿಯೋಜಿತ ಸಂಚು. ಇದರಿಂದ ಯಾವುದೇ ವ್ಯತ್ಯಾಸ ಆಗಿಲ್ಲ’ ಎಂದು ಸಮರ್ಥಿಸಿಕೊಂಡರು.

ಕಡ್ಡಾಯ ಮತದಾನ ಕುರಿತು ಸಂವಿಧಾನದಲ್ಲಿ ಕಾನೂನು ಇಲ್ಲ. ಆದರೆ ಮತದಾನ ಕಡ್ಡಾಯ ಮಾಡುವ‌ ಕುರಿತು ಪ್ರಜೆಗಳು ಚಿಂತಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT