ಮೋದಿ ಬಿಟ್ಟರೆ ಯಾರೊಬ್ಬರೂ ಪ್ರಧಾನಿ ಆಗೋರು ಇಲ್ಲವೇ: ಎಚ್‌.ಡಿ.ದೇವೇಗೌಡ

ಸೋಮವಾರ, ಏಪ್ರಿಲ್ 22, 2019
31 °C
ಮೊಮ್ಮಗ ಪ್ರಜ್ವಲ್‌ ಪರವಾಗಿ ಪ್ರಚಾರ

ಮೋದಿ ಬಿಟ್ಟರೆ ಯಾರೊಬ್ಬರೂ ಪ್ರಧಾನಿ ಆಗೋರು ಇಲ್ಲವೇ: ಎಚ್‌.ಡಿ.ದೇವೇಗೌಡ

Published:
Updated:

ಹಾಸನ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತವರು ಜಿಲ್ಲೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು.

ಚನ್ನರಾಯಪಟ್ಟಣ ತಾಲ್ಲೂಕು ಯಲಿಯೂರಿನ ದೇವೀರಮ್ಮ ಹಾಗೂ ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಗೌಡರು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲರೂ ಸೇರಿ ಪ್ರಜ್ವಲ್ ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

‘ದೇಶದಲ್ಲಿ ಮೋದಿ ಬಿಟ್ಟರೆ ಬೇರೆ ಯಾರೊಬ್ಬರೂ ಪ್ರಧಾನಿ ಆಗೋರು ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ ಗೌಡರು, ಬೆಂಗಳೂರಿನಲ್ಲಿ ಬಿಜೆಪಿ ಮೂರು ಸ್ಥಾನ ಗೆಲ್ಲಲು ಬಿಡುವುದಿಲ್ಲ’ ಎಂದು ಶಪಥ ಮಾಡಿದರು.

‘ನಾನು-ಸಿದ್ದರಾಮಯ್ಯ ಸೇರಿ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಬಿಜೆಪಿ ಬಲ ಕುಗ್ಗಿಸಲು ಹೋರಾಟ ಮಾಡುವುದಾಗಿ’ ಎಚ್ಚರಿಕೆ ನೀಡಿದರು.

‘ಮೋದಿ 5 ವರ್ಷ ದೇಶ ಆಳಿದ್ದರೆ, ವಾಜಪೇಯಿ 6 ವರ್ಷ ಆಡಳಿತ ನಡೆಸಿದ್ದಾರೆ. ಇವರಂತೆ ವಾಜಪೇಯಿ ಎಂದೂ ಆಡಲಿಲ್ಲ. ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸಿದರು. ಪ್ರಾದೇಶಿಕ ಪಕ್ಷಗಳ ಮನೆಗೆ ಏಕೆ ಹೋಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ ಗೌಡರು, ಹೋದ ಕಡೆ, ಬಂದ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷ ತೊಲಗಿಸುವ ಮಾತುಗಳನ್ನಾಡುತ್ತಿದ್ದಾರೆ’ ಎಂದು ಗುಡುಗಿದರು.

ಮಾಧ್ಯಮಗಳೂ ಕೂಡ, ಮೋದಿ ಬಿಟ್ಟರೆ ಬೇರೆ ಯಾರೂ ದೇಶ ಆಳರು ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಮಾಯವತಿಗೆ, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಹಾಗೂ ರಾಹುಲ್ ಗಾಂಧಿಗೆ ಈ ದೇಶ ಆಳುವ ಸಾಮರ್ಥ್ಯ ಇಲ್ಲವೇ ಎಂದು ಪ್ರಶ್ನಿಸಿದರು.

‘ನಾನೇ ಎಲ್ಲಾ ಎನ್ನುತ್ತಿದ್ದ ಮೋದಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ರಾಜ್ಯಗಳು ಕೈ ತಪ್ಪಿದ ನಂತರ ಐಟಿ, ಇಡಿ ದಾಳಿ ಮೂಲಕ ಸಣ್ಣ ಸಣ್ಣ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ’ ಎಂದು ಮೋದಿ ಕಾರ್ಯವೈಖರಿ ಯನ್ನು ಟೀಕಿಸಿದರು.

‘ಚುನಾವಣೆಗೆ ನಿಲ್ಲಲ್ಲ ಎಂದು ಲೋಕಸಭೆಯಲ್ಲೇ ಹೇಳಿದ್ದೆ. ಆದರೆ, ಮತ್ತೊಮ್ಮೆ ಲೋಕಸಭೆಗೆ ಬರಬೇಕು ಎಂದು ಅನೇಕರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಯಿತು. ಆದರೆ ನನ್ನ ನಿರ್ಧಾರ ಬದಲಿಸುವ ವೇಳೆಗೆ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಗೌಡರು ಸ್ಪಷ್ಟಪಡಿಸಿದರು.

‘ಮತ್ತೊಮ್ಮೆ ಪ್ರಧಾನಿಯಾಗೋದು ಸೇರಿದಂತೆ ನನಗೆ ಯಾವುದೇ ಅಧಿಕಾರ ವ್ಯಾಮೋಹ ಇಲ್ಲ. ನಾನು, ಸಿದ್ದರಾಮಯ್ಯ ಒಟ್ಟಾಗಿ ಸೇರಿ ಮಂಡ್ಯ, ಮೈಸೂರು ಸೇರಿ ಎಲ್ಲೆಡೆ ಪ್ರಚಾರ ಮಾಡುತ್ತೇವೆ. ಬಿಜೆಪಿಯನ್ನು ಸಂಪೂರ್ಣ ತೆಗೆಯುತ್ತೇವೆ ಎಂದು ಹೇಳಲ್ಲ. ಆದರೆ, ಇರುವ ಸ್ಥಾನ ಖಂಡಿತಾ ಕಡಿಮೆ ಮಾಡುತ್ತೇವೆ’ ಎಂದರು.

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 1

  Frustrated
 • 12

  Angry

Comments:

0 comments

Write the first review for this !