ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶೀಯ ವೈದ್ಯಕೀಯ ಶಿಕ್ಷಣ, ಸಂಶೋಧನೆಗೆ ಒತ್ತು’

ಶಾರ್ಙ್ಗಧರ ಸಂಹಿತೆ ಗ್ರಂಥದ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆ ಮಾಡಿದ ಆಯುಷ್ ಇಲಾಖೆ ಸಚಿವ
Last Updated 9 ಜನವರಿ 2021, 4:27 IST
ಅಕ್ಷರ ಗಾತ್ರ

ಹಾಸನ: ‘ಆಯುಷ್ ಇಲಾಖೆ ದೇಶೀಯ ವೈದ್ಯಕೀಯ ಶಿಕ್ಷಣದ ಸುಧಾರಣೆ ಹಾಗೂ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಿದೆ. ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ದೇಶದ 2,500 ಆಯುರ್ವೇದ ಆಸ್ಪತ್ರೆಗಳನ್ನು ಸೇರಿಸಲಾಗಿದ್ದು, ಆರೋಗ್ಯ ಕ್ಷೇತ್ರವನ್ನು ಬಲಗೊಳಿಸಲಾಗುತ್ತಿದೆ’ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಹೇಳಿದರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಶಾರ್ಙ್ಗಧರ ಸಂಹಿತೆ ಗ್ರಂಥದ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಶತಮಾನಗಳ ಹಿಂದೆ ರಚನೆಯಾಗಿರುವ ಆಯುರ್ವೇದ ಗ್ರಂಥಗಳ ಮರುರಚನೆ ಸೇರಿದಂತೆ ಆಯುಷ್ ವಿಭಾಗದ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ’ ಎಂದರು.

‘ಹೊಸ ರೋಗಗಳು ಕಾಣಿಸಿಕೊಂಡಾಗಲೆಲ್ಲ ಹೊಸ ಸಂಶೋಧನೆಗಳು ನಡೆದು, ಪರಿಹಾರ ಕಂಡು ಹಿಡಿಯಲಾಗಿದೆ. 13ನೇ ಶತಮಾನದಲ್ಲಿ ಆಚಾರ್ಯ ಶಾರ್ಙ್ಗಧರ ರಚಿತ ಶಾರ್ಙ್ಗಧರ ಸಂಹಿತೆ ಅತ್ಯುತ್ತಮವಾದ ಆಯುರ್ವೇದ ಗ್ರಂಥವಾಗಿದೆ. ಇದು 32 ಅಧ್ಯಾಯ, 2600 ಶ್ಲೋಕಗಳನ್ನು ಒಳಗೊಂಡಿದೆ. ಔಷಧಗಳ ಪ್ರಮಾಣ, ಗುಣ, ನಾಡಿ ಪರೀಕ್ಷೆ, ಕರ್ಮ, ಕಾಯಿಲೆಗಳ ಸಂಖ್ಯೆ, ಶಾರೀರ ರಚನೆ ಮತ್ತು ಶಾರೀರ ಕ್ರಿಯಾಗಳ ವಿವರಗಳನ್ನು ಒಳಗೊಂಡಿದೆ. ಈ ಗ್ರಂಥ ಆಯುರ್ವೇದ ಔಷಧಗಳ ತಯಾರಿಕೆ, ಗಿಡಮೂಲಿಕೆಗಳ ಬಳಕೆ ಬಗ್ಗೆ ಅಗಾಧವಾದ ಮಾಹಿತಿ ನೀಡುತ್ತದೆ. ಇಂಥ ಗ್ರಂಥವನ್ನು ಇಂಗ್ಲಿಷ್‍ಗೆ ಅನುವಾದ ಮಾಡಿರುವ ವೈದ್ಯ ಡಾ.ಶ್ರೀರಾಮ ಎಸ್.ಸಾವ್ರೀಕರ್ ಅವರ ಕಾರ್ಯ ಶ್ಲಾಘನೀಯ’ ಎಂದರು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್.ಸಚ್ಚಿದಾನಂದ್ ಮಾತನಾಡಿ, ಶಾರ್ಙ್ಗಧರ ಸಂಹಿತೆ ಇಂಗ್ಲಿಷ್ ಅವತರಣಿಕೆ ಆಯುರ್ವೇದ ಶಿಕ್ಷಣ ಹಾಗೂ ಚಿಕಿತ್ಸೆಯನ್ನು ಮತ್ತಷ್ಟು ಸರಳಗೊಳಿಸಲು ಸಹಾಯ ಮಾಡಲಿದೆ. ಆಯುಷ್ ಚಿಕಿತ್ಸಾ ಪದ್ಧತಿಗಳನ್ನು ಜನಸಾಮಾನ್ಯರಿಗೆ ದೊರಕಿಸುವಲ್ಲಿ ಎಸ್‍ಡಿಎಂ ಸಂಸ್ಥೆ ಪ್ರಮುಖ ಪಾತ್ರವಹಿಸುವ ಮೂಲಕ ತನ್ನದೇ ಬ್ರಾಂಡ್ ಸೃಷ್ಟಿಸಿದೆ ಎಂದು ಹೇಳಿದರು.

ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ಗೌಡ, ಆಯುರ್ವೇದ ತಜ್ಞ, ಲೇಖಕ ಡಾ. ಶ್ರೀರಾಮ್ ಎಸ್.ಸಾವ್ರೀಕರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಯೋಜನಾ ನಿರ್ದೇಶಕ ಡಿ.ಶ್ರೇಯಸ್ ಕುಮಾರ್, ಎಸ್‍ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಪ್ರಸನ್ನ ಎನ್. ರಾವ್ ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT