ಶನಿವಾರ, ಡಿಸೆಂಬರ್ 7, 2019
22 °C
ಅರೇಮಾದನಹಳ್ಳಿ ವಿಶ್ವಕರ್ಮ ಪೀಠಾಧ್ಯಕ್ಷರ ನಿರ್ಧಾರ

‘ದಾನದ ಜಾಗ ಹಿಂದಿರುಗಿಸಲು ಶ್ರೀಗಳ ಒಪ್ಪಿಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ಅರೆಮಾದನಹಳ್ಳಿ ಮಠಕ್ಕೆ ದಾನ ನೀಡಿದ್ದ ಜಮೀನನ್ನು ಸ್ಥಳೀಯ ಸಮಾಜಕ್ಕೆ ನೀಡಬೇಕು ಎಂದು ಕೆಲವರು ಒತ್ತಾಯ ಮಾಡುತ್ತಿರುವುದರಿಂದ ಮನನೊಂದು ಮೂಲ ದಾನಿಗಳಾದ ನಮಗೆ ಮರಳಿಸಲು ಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ ಮುಂದಾಗಿದ್ದಾರೆ ಎಂದು ದಾನಿಗಳಾದ ಪ್ರೇಮಾ ಚಂದ್ರಾಚಾರಿ ಮತ್ತು ಅವರ ಪುತ್ರ ಅರವಿಂದ್‌ ಶುಕ್ರವಾರ ತಿಳಿಸಿದರು.

ಪಟ್ಟಣದ ನಾಗಮಂಗಲ ಮಾರ್ಗದ ಸಾಣೇನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಾ, ‘ನನ್ನ ಪತಿ ದಿವಂಗತ ಎಸ್‌.ಎಂ.ಚಂದ್ರಾಚಾರಿ ಅವರು ಸಮಾಜದ ಏಳಿಗೆಗಾಗಿ ವಿದ್ಯಾ ಸಂಸ್ಥೆ, ವಿದ್ಯಾರ್ಥಿನಿಲಯ ಸಮುದಾಯ ಭವನ, ಶಾಖಾ ಮಠ ಸಂಸ್ಥೆ ತೆರೆಯಲು ತಮ್ಮ ಸ್ವಯಾರ್ಜಿತ ಆಸ್ತಿ 34 ಗುಂಟೆಯನ್ನು ವಿಶ್ವಕರ್ಮ ಸಮಾಜದ ಶಿವಸುಜ್ಞಾನ ಮೂರ್ತಿ ಶ್ರೀಗಳ ಹೆಸರಿಗೆ ದಾನ ಪತ್ರದ ಮುಖಾಂತರ ನೀಡಿದ್ದರು. ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಈವರೆಗೂ ನಡೆದಿಲ್ಲ. ಅಲ್ಲದೇ ಜಮೀನನ್ನು ಕಬಳಿಸಲು ಸಮಾಜದ ಕೆಲವರು ಯತ್ನಿಸುತ್ತಿರುವುದರಿಂದ ಬೇಸತ್ತು ನಮ್ಮ ಪೂರ್ವಿಕರ ಆಸ್ತಿಯನ್ನು ನಮಗೆ ವಾಪಸ್ ನೀಡುತ್ತಿದ್ದಾರೆ’ ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಉಪಾಧ್ಯಕ್ಷ ಶ್ರೀಕಂಠಾಚಾರ್‌ ಮಾತನಾಡಿ, ‘ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿಯ ಕೆಲಸ ಕಾರ್ಯಗಳು ಆಗದೇ ಇರುವುದರಿಂದ ಶ್ರೀಗಳು ಬೇಸತ್ತು ಜಾಗವನ್ನು ಮೂಲ ದಾನಿಗಳಿಗೆ ಮರಳಿಸಲು ಒಪ್ಪಿಗೆ ಸೂಚಿಸಿದ್ದಾರೆ‘ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಲತಾ ರಮೇಶ್‌, ಗ್ರಾ.ಪಂ.ಸದಸ್ಯ ಎಸ್‌.ವಿ.ಲೋಕೇಶ್‌, ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಉಮೇಶ್‌, ತಾಲ್ಲೂಕು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಹಾಲಿ ಉಪಾಧ್ಯಕ್ಷ ಶ್ರೀಕಂಠಾಚಾರ್‌, ಹೋಬಳಿಯ ವಿ.ಕ.ಸಮಾಜದ ಮಾಜಿ ಅಧ್ಯಕ್ಷ ಎ.ಕೆ.ಶ್ರೀಕಂಠ, ಚಂದ್ರಾಚಾರಿಯವರ ಪುತ್ರ ಅರವಿಂದ್‌ ಮುಖಂಡರುಗಳಾದ ಮಾಜಿ ಗ್ರಾ. ಪಂ.ಅಧ್ಯಕ್ಷೆ ಮಂಜುಳಾ ಪರಮೇಶ್‌, ಎಚ್‌.ಎಂ.ಶಿವಣ್ಣ, ತಮ್ಮಣ್ಣ, ಪರಮೇಶ್‌, ರವಿ, ಪಾಂಡು ಇದ್ದರು.

ಪ್ರತಿಕ್ರಿಯಿಸಿ (+)