ರೈತರ ಸಾಲ ಮನ್ನಾ: ಮುಂದಿನ ವಾರ ಕಾರ್ಯಾದೇಶ ಎಂದ ಸಿ.ಎಂ

7
ಗೊಂದಲಕ್ಕೆ ತೆರೆ

ರೈತರ ಸಾಲ ಮನ್ನಾ: ಮುಂದಿನ ವಾರ ಕಾರ್ಯಾದೇಶ ಎಂದ ಸಿ.ಎಂ

Published:
Updated:
Deccan Herald

ಹೊಳೆನರಸೀಪುರ: ‘ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳ ಈಗಾಗಲೇ ಘೋಷಿಸಿರುವ ರೈತರ ಸಾಲಮನ್ನಾ ಸಂಬಂಧ ಆ. 16ರಂದು ಕಾರ್ಯಾದೇಶ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಹುಟ್ಟೂರು ಹರದನಹಳ್ಳಿಯಲ್ಲಿ ಕುಲದೇವರು ಶಿವನ ದೇಗುಲ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಪ್ರತಿಪಕ್ಷದ ನಾಯಕರು ಇಲ್ಲ, ಸಲ್ಲದ ಟೀಕೆ ಮಾಡುತ್ತಿದ್ದಾರೆ. ಅವರನ್ನು ಎಂದೂ ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಸಾಲಮನ್ನಾ ವಿಷಯದಲ್ಲಿ ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿಲ್ಲ’ ಎಂದು ಹೇಳಿದರು.

ಸಾಲಮನ್ನಾದ ಹೊರೆ ಕಡಿಮೆ ಮಾಡುವ ಸಂಬಂಧ ಈಗಾಗಲೇ ಹಣಕಾಸು ಕ್ರೋಡೀಕರಣಕ್ಕೂ ಚಾಲನೆ ನೀಡಲಾಗಿದೆ. ಮೂರು ತಿಂಗಳಲ್ಲಿ ಶೇ 32 ರಷ್ಟು ವಿವಿಧ ರೂಪದಲ್ಲಿ ಆದಾಯ ಕ್ರೋಡೀಕರಣವಾಗಿದೆ ಎಂದು ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಕೋಮಾದಲ್ಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ಸೇರಿ ₹ 45 ಸಾವಿರ ಕೋಟಿ ಸಾಲಮನ್ನಾ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಾಲದ ಮೇಲಿನ ಬಡ್ಡಿಮನ್ನಾಕ್ಕೆ ಕೆಲ ಬ್ಯಾಂಕ್‌ಗಳು ಒಪ್ಪಿವೆ. ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾಕ್ಕೆ ಈ ವರ್ಷ ಬಜೆಟ್‌ನಲ್ಲಿ ₹ 6500 ಕೋಟಿ ಇಡಲಾಗಿದೆ. ನಾಲ್ಕು ಹಂತಗಳಲ್ಲಿ ಸಾಲಮನ್ನಾಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಪ್ರಮಾಣವಚನ ಸಂದರ್ಭದ ಖರ್ಚಿನ ಲೆಕ್ಕದ ಚರ್ಚೆಗೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ‘ಹಿಂದೆ ಯಡಿಯೂರಪ್ಪ, ಪ್ರಧಾನಿ ಮೋದಿ ಅವರು ಖರ್ಚು ಮಾಡಿರುವ ಬಗ್ಗೆ ಲೆಕ್ಕ ಕೊಡಲಿ. ಪ್ರಧಾನಿ ನರೇಂದ್ರಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿದೆ ಎಂಬ ಪಟ್ಟಿ ತರಿಸಿ ಬಿಡುಗಡೆ ಮಾಡುವೆ’ ಎಂದರು.

ಮರಳುದಂಧೆಗೆ ಕಡಿವಾಣ ಹಾಕಲು ಮುಂದಿನ ವಾರ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಆಶ್ರಯ ಮನೆ, ಕೊಟ್ಟಿಗೆ, ಶೌಚಾಲಯ ನಿರ್ಮಿಸಲು ಸುಲಭವಾಗಿ ಮರಳು ಸಿಗುವಂತೆ ನಿಯಮ ಬದಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಜಾರಿಗೆ ತರಲು ಪ್ರತಿ ತಿಂಗಳು ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ರೈತರ ಜೊತೆ ಚರ್ಚಿಸಲಾಗುವುದು. ಅತಿವೃಷ್ಟಿ ಹಾನಿ ಹಿನ್ನೆಲೆಯಲ್ಲಿ ಆ. 30ರ ನಂತರ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ್ಯ ಹೂಡಲಾಗುವುದು ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !