ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಪುರಸಭೆಯ ₹ 1.25 ಕೋಟಿ ಆಸ್ತಿ ಕಬಳಿಕೆಗೆ ಯತ್ನ

ಸಕಲೇಶಪುರದಲ್ಲಿ ದಾಖಲೆ ತಿದ್ದಿ ಪುರಸಭೆ ಭೂಮಿ ಖಾಸಗಿಯವರ ಒಡೆತನಕ್ಕೆ: ಆರೋಪ
Last Updated 23 ಜನವರಿ 2021, 1:36 IST
ಅಕ್ಷರ ಗಾತ್ರ

ಸಕಲೇಶಪುರ: ಪಟ್ಟಣದ ಸರಸ್ವತಿಪುರ ಬಡಾವಣೆ (ಬಾಳೇಗದ್ದೆ)ಯಲ್ಲಿ ಸುಮಾರು ₹ 1.25 ಕೋಟಿ ಮೌಲ್ಯದ 4,200 ಚದರ ಅಡಿ ಪುರಸಭೆ ನಿವೇಶನವನ್ನು ಪುರಸಭೆ ಹಿಂದಿನ ಅಧಿಕಾರಿ ಹಾಗೂ ಕೆಲ ನೌಕರರು ದಾಖಲೆ ತಿದ್ದಿ ಖಾಸಗಿಯವರ ಹೆಸರಿಗೆ ದಾಖಲೆ ಸೃಷ್ಟಿ ಮಾಡಿದ್ದಾರೆಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ತೇಜಸ್ವಿ ಚಿತ್ರಮಂದಿರ ಪಕ್ಕದಲ್ಲಿರುವ ಪುರಸಭೆ ನಿವೇಶನದಲ್ಲಿ ಅನಧಿಕೃತವಾಗಿ ಮಳಿಗೆಯೊಂದನ್ನು ನಿರ್ಮಾಣ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ನಾಗರಿಕರ ಗಮನ ಸೆಳೆದಿದೆ.

ವಿವರ: ನಿವೇಶನ/ ಅಸೆಸ್‌ಮೆಂಟ್‌ 179/161ರಲ್ಲಿ ಎರಡು ನಿವೇಶನಗಳು ಇದ್ದು, ಆಸ್ತಿ ತೆರಿಗೆ ರಿಜಿಸ್ಟರ್ ಪ್ರಕಾರ ಒಂದನೇ ನಿವೇಶನದ ವಿಸ್ತೀರ್ಣ ಮೂಲತಃ 75X100 ಮತ್ತು ಎರಡನೇ ನಿವೇಶನ 100X160 ಎಂದು ದಾಖಲಾಗಿರುತ್ತದೆ. 2009ರ ಜ. 7ರಂದು ಆಸ್ತಿ ತೆರಿಗೆ ಮೇಲೆ ಪುರಸಭಾ ಮುಖ್ಯಾಧಿಕಾರಿಗಳು ಅಳತೆ ಮತ್ತು ಅಸೆಸ್‌ಮೆಂಟ್‌ ರಿಜಿಸ್ಟರ್‌ನಲ್ಲಿ ಅಳತೆಯಂತೆ ಅಸೆಸಿಂಗ್ ಅಧಿಕಾರಿ ತಪ್ಪಾಗಿ ದಾಖಲು ಮಾಡಿದ್ದನ್ನು ಸರಿಪಡಿಸಿ 110X160 ಎಂದು ದಾಖಲು ಮಾಡಿರುವುದಾಗಿ ಆದೇಶ ಮಾಡಿದ್ದಾರೆ.

ಈ ಹಿಂದೆ ತಪ್ಪಾಗಿ ದಾಖಲಾಗಿದ್ದ 100X160–ಅನ್ನು ಸೊನ್ನೆ ಸುತ್ತಿ 110X160 ನಮೂದು ಮಾಡಿದ್ದಾರೆ. ಆದರೆ, ಇನ್ನೊಂದು ನಿವೇಶನ 75X100 ಅನ್ನು ಯಾವುದೇ ಆದೇಶ ಇಲ್ಲದೆ, 2009 ಜ. 7ರ ನಂತರ 75X100 ಇದ್ದದ್ದನ್ನು ಸೊನ್ನೆ ಸುತ್ತಿ ನಿವೇಶನದ ವಿಸ್ತೀರ್ಣ 90X130 ಎಂದು 1,600 ಚದುರ ಅಡಿ ಹೆಚ್ಚು ದಾಖಲು ಮಾಡಿರುತ್ತಾರೆ.

‘ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ 100X160 ರ ನಿವೇಶನವನ್ನು ಸೊನ್ನೆ ಸುತ್ತಿ ಆದೇಶದಂತೆ 110X160 ಬರೆದಿರುವ ಬರವಣಿಗೆಗೂ, ಯಾವುದೇ ಆದೇಶ ಇಲ್ಲದೆ 75X100 ಅನ್ನು ಸೊನ್ನೆ ಸುತ್ತಿ ಅದರ ಪಕ್ಕದಲ್ಲಿ 90X130 ಎಂದು ದಾಖಲು ಮಾಡಿರುವ ಬರವಣಿಗೆ ಅಜಗಜಾಂತರ ವ್ಯತ್ಯಾಸ ಇರುವುದು ಕಂಡು ಬರುತ್ತದೆ. ಆಸ್ತಿ ತೆರಿಗೆ ನೋಂದಣಿಯ ಮುಖ್ಯ ಕಾಲಂಗಳಲ್ಲಿ ಯಾವುದೇ ತಿದ್ದುಪಡಿಯಾಗಲಿ, ರದ್ದುಪಡಿಸುವಿಕೆಗೆ ಆಗಬೇಕಾದರೆ ಮುಖ್ಯಾಧಿಕಾರಿ ಆದೇಶ ಇರಲೇಬೇಕು. ಮುಖ್ಯಾಧಿಕಾರಿ ಆದೇಶವೇ ಇಲ್ಲ, ಹೀಗಾಗಿ ಇದು ಅಕ್ರಮ ಎನ್ನುವುದು ಮೇಲುನೋಟಕ್ಕೆ ಕಂಡು ಬರುತ್ತದೆ’ ಎಂದು ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯಾವುದೇ ಆದೇಶ ಇಲ್ಲದೆ, ಹೆ‌ಚ್ಚುವರಿಯಾಗಿ 4,200 ಚದುರ ಅಡಿ ಪುರಸಭೆ ಜಾಗವನ್ನು ಖಾತೆದಾರರಿಗೆ ಸಹಾಯ ಮಾಡುವ ದೃಷ್ಟಿಯಿಂದಲೇ ತಿದ್ದುಪಡಿ ಮಾಡಿರುವುದು ದಾಖಲೆಯಲ್ಲಿ ಸ್ಪಷ್ಟವಾಗಿದೆ’ ಎನ್ನುತ್ತಾರೆ ಅಣ್ಣೇಗೌಡ.

ದಾಖಲೆ ರದ್ದತಿಗೆ ಆಗ್ರಹ
‘ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಾಗಕ್ಕೆ ಇಂದಿನ ಮಾರುಕಟ್ಟೆ ಬೆಲೆ ಚದರ ಅಡಿಗೆ ₹ 3 ಸಾವಿರ ಆದರೂ 1.25 ಕೋಟಿ ಆಗುತ್ತದೆ. ಪುರಸಭೆ ಆಸ್ತಿ ಖಾಸಗಿಯವರಿಗೆ ಮಾಡಿಕೊಟ್ಟಿರುವ ಹಿಂದೆ ಅನೇಕರ ಕೈವಾಡ ಇದೆ. ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ದಾಖಲೆಯಲ್ಲಿ ಹೆಚ್ಚುವರಿ ಮಾಡಿರುವುದನ್ನು ರದ್ದುಗೊಳಿಸಬೇಕು’ ಎಂದು ಪುರಸಭೆ ಸದಸ್ಯ ಪ್ರಜ್ವಲ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT