ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೋಡ್ ಶೋ

ಭಾನುವಾರ, ಏಪ್ರಿಲ್ 21, 2019
26 °C
ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರು ಭಾಗಿ

ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೋಡ್ ಶೋ

Published:
Updated:
Prajavani

ಹಾಸನ: ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಮಂಗಳವಾರ ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್‌ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಗರದಲ್ಲಿ ರೋಡ್ ಶೋ, ಬೈಕ್ ರ‍್ಯಾಲಿ ನಡೆಸಿದರು.

ಮೈತ್ರಿ ಅಭ್ಯರ್ಥಿ ಪರ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ಮತಯಾಚಿಸಿದರು. ಒಂಬತ್ತು ತಿಂಗಳ ಮೈತ್ರಿ ಸರ್ಕಾರದ ಆಡಳಿತದ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು, ಮೈತ್ರಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

ಸಚಿವ ರೇವಣ್ಣ, ಪತ್ನಿ ಭವಾನಿ ಅವರೊಂದಿಗೆ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ಕಾಂಗ್ರೆಸ್ ಮುಖಂಡರು ವಾಹನದಲ್ಲಿ ರೋಡ್ ಶೋ ನಡೆಸಿದರೆ, ಪಕ್ಷದ ಕಾರ್ಯಕರ್ತರು, ಮುಖಂಡರು ಬೈಕ್ ರ‍್ಯಾಲಿ ನಡೆಸಿದರು.

ಸುಡುವ ಬಿಸಿಲು ಲೆಕ್ಕಿಸದೆ ಮಧ್ಯಾಹ್ನ 12 ರ ವೇಳೆಗೆ ಆರಂಭವಾದ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಪ್ರಜ್ವಲ್ ಪರ ಘೋಷಣೆ ಕೂಗಿದರು.

ಪ್ರಮುಖ ರಸ್ತೆಯಲ್ಲಿ ಸಾಗಿದ್ದರಿಂದ ವಾಹನ ಸಂಚಾರ ವ್ಯತ್ಯಯವಾಯಿತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿದರು.

ರ‍್ಯಾಲಿಯ ನಡುವೆ ಬಿಸಿಲ ತಾಪಕ್ಕೆ ಬಾಯಾರಿದ ಪ್ರಜ್ವಲ್ ಎಳನೀರು ಸೇವಿಸಿ ದಾಹ ತಣಿಸಿಕೊಂಡರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡ ಎಚ್.ಕೆ.ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸ್ವರೂಪ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !