ಇದು ಮೈತ್ರಿ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಅಗ್ನಿ ಪರೀಕ್ಷೆ: ದೇವೇಗೌಡ

ಬುಧವಾರ, ಏಪ್ರಿಲ್ 24, 2019
31 °C
ಸಣ್ಣಪುಟ್ಟ ಗೊಂದಲ ಬಗೆಹರಿಸಿಕೊಳ್ಳುತ್ತೇವೆ: ಎಚ್‌.ಡಿ.ದೇವೇಗೌಡ

ಇದು ಮೈತ್ರಿ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಅಗ್ನಿ ಪರೀಕ್ಷೆ: ದೇವೇಗೌಡ

Published:
Updated:
Prajavani

ಹಾಸನ: ಕಳೆದ ನಾಲ್ಕೈದು ವರ್ಷಗಳಿಂದ ಲೋಕಸಭೆಯಲ್ಲಿ ಭಾಷಣ ಮಾಡಲು ಸ್ಪೀಕರ್‌ ಅವಕಾಶ ನೀಡದಿರುವುದು ಮನಸ್ಸಿಗೆ ನೋವು ಉಂಟು ಮಾಡಿದೆ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

‘ಸ್ಪೀಕರ್‌ ನಡವಳಿಕೆಯಿಂದ ತೀವ್ರ ಆಘಾತವಾಗಿದೆ. ಮಾಜಿ ಪ್ರಧಾನಿ ಎಂಬ ಕನಿಷ್ಠ ಗೌರವವೂ ಇಲ್ಲದಂತೆ ಸ್ಪೀಚ್ ಬರೆದುಕೊಡಿ ಎನ್ನುತ್ತಾರೆ. ಇದರಿಂದ ಮನನೊಂದು ಕಡೆಯ ಭಾಷಣ ಎಂದು ಹೇಳಿದ್ದೆ. ಅನಿವಾರ್ಯ ಸ್ಥಿತಿಯಲ್ಲಿ ಪುನಃ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ತುಮಕೂರು ಸಂಪೂರ್ಣ ಉಸ್ತುವಾರಿಯನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ವಹಿಸಿಕೊಂಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಅಗ್ನಿ ಪರೀಕ್ಷೆ ತಮಗೆ ಮತ್ತು ಸಿದ್ದರಾಮಯ್ಯ ಅವರಿಗೆ ಎದುರಾಗಿದೆ. ಚಿಕ್ಕ,ಪುಟ್ಟ ಗೊಂದಲಗಳಿದ್ದರೂ ನಾವೇ ಬಗೆ ಹರಿಸಿಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರಾಭವಗೊಂಡರು. ಆಗ ನಾನು ಅಲ್ಲಿಗೆ ಚುನಾವಣಾ ಪ್ರಚಾರಕ್ಕೆ ಹೋಗಿರಲಿಲ್ಲ. ಜಿ.ಟಿ.ದೇವೇಗೌಡರು ಕಾರಣರಲ್ಲ. ಅದು ಜನಾದೇಶ. ರಾಜಕೀಯದಲ್ಲಿ ನನಗೂ ಸೋಲಿನ ಅನುಭವ ಆಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರಿಗೆ ನಾನು ಸಿ.ಎಂ ಮಾಡಲಿಲ್ಲ ಎಂಬ ಅಸಮಾಧಾನ, ನೋವು ಇರಬಹುದು. ನಮ್ಮ ಪಕ್ಷದಲ್ಲಿ ಜೆ.ಎಚ್.ಪಟೇಲರು ಹಿರಿಯರು ಇದ್ದ ಕಾರಣ ಅವರನ್ನು ಸಿ.ಎಂ ಮಾಡಲಾಯಿತು. ಈ ವಿಷಯದಲ್ಲಿ ಯಾರನ್ನು ನಿಂದನೆ ಮಾಡುವುದಿಲ್ಲ ಎಂದು ನುಡಿದರು.

ಎಲ್.ಕೆ.ಅಡ್ವಾಣಿ ಇಲ್ಲದಿದ್ದರೆ ನರೇಂದ್ರ ಮೋದಿ ಅವರು ಮೂಲೆ ಗುಂಪಾಗುತ್ತಿದ್ದರು. ಗುಜರಾತ್‌ ಕೋಮುಗಲಭೆಯಲ್ಲಿ ರಾಜಧರ್ಮ ಪಾಲಿಸಿಲ್ಲ ಎಂದು ವಾಜಪೇಯಿ ಅಸಮಾಧಾನ ಗೊಂಡಿದ್ದರು. ಆಗ ನೆರವಿಗೆ ಬಂದಿದ್ದು ಅಡ್ವಾಣಿ. ಪ್ರಾದೇಶಿಕ ಪಕ್ಷಗಳು ಹಾಗೂ ಮೋದಿ ವಿರೋಧಿ ಪಾಳೆಯವನ್ನ ಲೂಟಿಕೋರರು ಎಂದು ಟೀಕಿಸುತ್ತಲೇ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ನನ್ನ ಜನ್ಮ ಭೂಮಿ, ಕರ್ಮ ಭೂಮಿಯೂ ಹಾಸನ, ನನ್ನ ಕಳೆಬರಹ ಕೂಡ ಹಾಸನಕ್ಕೆ ಬರಲಿದೆ. ಜಿಲ್ಲೆಯನ್ನು ಬಿಟ್ಟು ಹೋಗಿಲ್ಲ. ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರಜ್ವಲ್‍ಗೆ ಬಿಟ್ಟುಕೊಟ್ಟು ಕಣದಿಂದ ಹಿಂದೆ ಸರಿದಾಗ ಗುಲಾಂ ನಬಿ ಅಜಾದ್, ಮಮತಾ ಬ್ಯಾನರ್ಜಿ, ಚಂದ್ರ ಬಾಬು ನಾಯ್ದು ಸೇರಿದಂತೆ ಹಲವರು ತಮ್ಮ ಮೇಲೆ ಒತ್ತಡ ತಂದ ಪರಿಣಾಮ ಸ್ಪರ್ಧಿಸಬೇಕಾಯಿತು ಎಂದು ವಿವರಿಸಿದರು.

ಸಿದ್ದರಾಮಯ್ಯ ಜತೆ ಪ್ರವಾಸ
ಜಿಲ್ಲೆಯಲ್ಲಿ ಎರಡು ದಿನ ಪ್ರವಾಸ ಮಾಡಿ ಪ್ರಜ್ವಲ್‌ ರೇವಣ್ಣ ಪರ ಮತಯಾಚಿಸಿದ್ದೇನೆ. ಗುರುವಾರ, ಶುಕ್ರವಾರ ಮಂಡ್ಯದಲ್ಲಿ ಪ್ರವಾಸ ಮಾಡಲಾಗುವುದು. ಏ.8ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆ ಪ್ರಚಾರದಲ್ಲಿ ಪಾಲ್ಗೊಳ್ಳಲಾಗುವುದು. ಏ. 9 ರಿಂದ 12ರವರೆಗೆ ಸಿದ್ದರಾಮಯ್ಯನವರ ಜತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.

ಜಾತಿ ರಾಜಕಾರಣ ಮಾಡಿಲ್ಲ
‘ನನ್ನ ಹೆಸರಿನಲ್ಲಿ ‘ಗೌಡ’ ಇರಬಹುದು. ಆದರೆ, ರಾಜಕೀಯ ಜೀವನದಲ್ಲಿ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಸಮುದಾಯದವರಿಗೂ ಸಮಾನ ಅವಕಾಶ ಕಲ್ಪಿಸಿದ್ದೇನೆ. 2004ರಲ್ಲಿ ಎಸ್‌.ಎಂ.ಕೃಷ್ಣ ಅವರು ಈ ಸಂಜೆ ವೆಂಕಟೇಶ್‌ ಅವರೊಂದಿಗೆ ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿ, ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಮಾಡುವಂತೆ ಕೋರಿದರು. ಒಕ್ಕಲಿಗ ಎಂಬ ಕಾರಣಕ್ಕೆ ಒಪ್ಪಿಕೊಳ್ಳಲಿಲ್ಲ. ದೇವರಾಜ ಅರಸು ಅವರು ಒಕ್ಕಲಿಗರಿಗೆ ಶೇಕಡಾ 9ರಷ್ಟು ಮೀಸಲಾತಿ ಕೊಡುತ್ತೇವೆ ಎಂದಿದ್ದರು. ಅದಕ್ಕೆ ಒಪ್ಪಲಿಲ್ಲ. ಆದರೆ, ಹಾವನೂರು ಕಮಿಷನ್ ಒಕ್ಕಲಿಗರಿಗೆ ಶೇಕಡಾ 4 ಮೀಸಲಾತಿ ನೀಡಿತು ಎಂದು ದೇವೇಗೌಡರು ತಿಳಿಸಿದರು.

‘ಜೆಡಿಎಸ್‌ಗೆ ಮತ ಹಾಕಲು ಒಕ್ಕಲಿಗರ ಸಂಘದ ಚುನಾವಣೆಯಲ್ಲ’ ಎಂಬ ಬಿಜೆಪಿ ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಅವರ ಹೇಳಿಕೆಗೆ, ಮಂಡ್ಯದಲ್ಲಿಯೇ ಉತ್ತರಿಸುವೆ ಎಂದು ಪ್ರತಿಕ್ರಿಯಿಸಿದರು.

ರಾಜಕೀಯಕ್ಕೆ ಐಟಿ ಬಳಕೆ 
ಆದಾಯ ತೆರಿಗೆ, ಜಾರಿ ನಿರ್ದೇಶನಾಲಯವನ್ನು ನರೇಂದ್ರ ಮೋದಿ ಅವರು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಮಂಡ್ಯದ ಸಜ್ಜನ ರಾಜಕಾರಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಆತ್ಮಾನಂದ ಅವರು ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಕಾರಣಕ್ಕೆ ಐಟಿ ದಾಳಿ ಮಾಡಿಸಿದ್ದರಲ್ಲ ನ್ಯಾಯವೇ ಎಂದು ಪ್ರಶ್ನಿಸಿದರು.

ಮೋದಿ ಅವರು 13 ಪಕ್ಷಗಳನ್ನು ಒಗ್ಗೂಡಿಸಿಕೊಂಡು ಚುನಾವಣೆಗೆ ಸಿದ್ಧರಾಗಿದ್ದಾರೆ. ಮಂಡ್ಯ, ಹಾಸನ ಭಾಗದಲ್ಲಿ ಹೆಚ್ಚು ಐಟಿ ದಾಳಿಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*
‘ನನ್ನ ಜನ್ಮ ಭೂಮಿ, ಕರ್ಮ ಭೂಮಿಯೂ ಹಾಸನ, ನನ್ನ ಕಳೆಬರಹ ಕೂಡ ಹಾಸನಕ್ಕೆ ಬರಲಿದೆ. ಜಿಲ್ಲೆಯನ್ನು ಬಿಟ್ಟು ಹೋಗಿಲ್ಲ.</p>
-ಎಚ್‌.ಡಿ.ದೇವೇಗೌಡ, ಸಂಸದ

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 11

  Angry

Comments:

0 comments

Write the first review for this !