ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

7
ಆರೋಗ್ಯ ನಿರೀಕ್ಷಕ ಅಮಾನತ್ತಿಗೆ ಆಗ್ರಹ

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

Published:
Updated:
Deccan Herald

ಹಾಸನ: ‘ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ಪೌರ ಕಾರ್ಮಿಕರು ಕೆಲಸ ನಿಲ್ಲಿಸಿ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಅಧಿಕಾರಿ ವಿರುದ್ಧ ಘೋಷಣೆ ಕೂಗಿ, ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕುವಂತೆ ಪಟ್ಟು ಹಿಡಿದರು.

ಬೆಳಿಗ್ಗೆ ಕೆಲಸಕ್ಕೆ ಬಂದ ಪೌರ ಕಾರ್ಮಿಕರಾದ ಮಾರ, ಸಣ್ಣಪ್ಪಯ್ಯ ಹಾಗೂ ಮುನಿಯಪ್ಪ ಅವರನ್ನು ಕರೆದು, ‘ನನ್ನ ಮೇಲೆ ದೂರು ನೀಡಿದ್ದೀರಾ . ಕೆಲಸದಿಂದ ತೆಗೆಸುತ್ತೇನೆ’ ಎಂದು ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು.

ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್, ‘20 ವರ್ಷದಿಂದ ಆರೋಗ್ಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ಪ್ರಕಾಶ್‌, ಪೌರ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಚಾಲಕ ನಾಗರಾಜ್ ಹೆತ್ತೂರು, ‘ನಿತ್ಯ ನಗರದ ಬೀದಿ ಗುಡಿಸುವ , ಚರಂಡಿ ಬಾಚುವ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಆಯುಕ್ತರು ಮತ್ತು ಅಧ್ಯಕ್ಷರಿಗೆ ಕೊಡಬೇಕೆಂದು ಹೇಳಿ ₹ 3 ಸಾವಿರ ಲಂಚ ಕೇಳುತ್ತಿದ್ದಾರೆ. ಮನೆ ಕೆಲಸಕ್ಕೆ ಬಳಸಿಕೊಳ್ಳುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ’ ಎಂದು ಆರೋಪಿಸಿದರು.

ಸಂಘದ ಕಾರ್ಯದರ್ಶಿ ಪರಶುರಾಮ್ ಮಾತನಾಡಿ, ‘ನಗರಸಭೆಯಿಂದ ಆರೋಗ್ಯ ಭಾಗ್ಯ ಸವಲತ್ತು ಸಿಗದೆ ಪೌರ ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಆಯುಕ್ತ ಬಿ.ಎ. ಪರಮೇಶ್, ‘ಇಂದಿನಿಂದಲೇ ಸ್ಟೀಫನ್ ಪ್ರಕಾಶ್ ಅವರನ್ನು ಪೌರಕಾರ್ಮಿಕರ ಉಸ್ತುವಾರಿಯಿಂದ ತೆಗೆಯಲಾಗುವುದು. ವರ್ಗಾವಣೆ ಮಾಡುವ ಅಧಿಕಾರ ತಮಗಿಲ್ಲ’ ಎಂದು ಮನವರಿಕೆ ಮಾಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆದರು.

ಪ್ರತಿಭಟನೆಯಲ್ಲಿ ಗೌರವ ಸಲಹೆಗಾರ ವಿಮಲ್ ಕುಮಾರ್ ಶೀಗೋಡು, ಸಂಘದ ಅಧ್ಯಕ್ಷ ಲೋಕೇಶ್, ಮಾರ, ನಲ್ಲಪ್ಪ, ಮುನಿಯಪ್ಪ, ಬಾಬು, ನರಸಿಂಹ, ದೇವರಾಜು, ಶಿವಸ್ವಾಮಿ , ನಾಗಭೂಷಣ, qಡ್ರೈವರ್ ರಂಗೇಗೌಡ, ಯೋಗೇಶ್ ಪುಟ್ಟರಾಜು, ಮಂಜುಳಾ, ರಾಮಕ್ಕ, ಭಾಗ್ಯಮ್ಮ, ಮಂಜುಳಾ, ಸಣ್ಣಮ್ಮ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !