ಗುರುವಾರ , ಜನವರಿ 27, 2022
27 °C

ಬೆತ್ತಲೆ ಮೆರವಣಿಗೆ: ತನಿಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ಮಂಗಳವಾರ ಯುವಕನನ್ನು ಥಳಿಸಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‍ಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷಯ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ತೆರಳಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಆ ನಂತರ ಯುವಕ ನೀಡಿದ ಹೇಳಿಕೆ ಆಧರಿಸಿ ದೂರು ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ. ಘಟನಾ ಸ್ಥಳದಲ್ಲಿದ್ದ ಎಲ್ಲರನ್ನೂ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಡೀ ಘಟನೆಗೆ ಕಾರಣ ಎನ್ನಲಾದ ಪ್ರವೀಣ್‍ಗೌಡ ಎಂಬಾತನನ್ನು ಈಗಾಗಲೇ ಗುರುತಿಸಿ, ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದರು.

ಹಲ್ಲೆಗೆ ಒಳಗಾಗಿರುವ ಯುವಕ ಹೊರತು ಪಡಿಸಿ, ಯಾರೊಬ್ಬರೂ ಘಟನೆ ಸಂಬಂಧ ದೂರು ನೀಡಿಲ್ಲ. ಯುವಕನ ದೂರು ಆಧರಿಸಿ ಈಗಾಗಲೇ ಕಲಂ 341, 504, 506, 294 ಅಡಿ ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ಹುಡುಗಿ ಮುಂದೆ ಬಂದು ದೂರು ನೀಡಿಲ್ಲ. ಘಟನೆ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹುಡುಗಿಯೇ ಬಂದು ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಗೂಂಡಾಗಿರಿ ಮಾಡಿರುವವರ ವಿರುದ್ಧ ಸಂಬಂಧಪಟ್ಟ ಕಾನೂನು ಅಡಿ ಕ್ರಮ ಜರುಗಿಸಲಾಗುವುದು. ನೈತಿಕ ಪೊಲೀಸ್‌ ಗಿರಿ ಯಾರೇ ಮಾಡಿದರೂ ಅದು ತಪ್ಪು. ಯಾರೇ ಆಗಲಿ, ತಮಗೆ ತಿಳಿದ ಯಾವುದೇ ವಿಷಯ ಅಥವಾ ಆಕ್ಷೇಪಣೆ ಇದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಅಥವಾ 112 ಕ್ಕೆ ಕರೆ ಮಾಡಿದರೆ ತುರ್ತಾಗಿ  ಸ್ಪಂದಿಸುತ್ತೇವೆ. ಅದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಹುಡುಗಿ ಚುಡಾಯಿಸಿಲ್ಲ; ಮೇಘರಾಜ್
‘ಮೂರು ವರ್ಷಗಳ ಹಿಂದೆ ಹಾಸನಕ್ಕೆ ಬಂದು ಬಸ್ತಿಹಳ್ಳಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದೇನೆ. ಬೈಪಾಸ್ ಹತ್ತಿರ ಇರುವ ಬೊಮ್ಮನಾಯಕನ ಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ  ಮಹಾರಾಜ ಪಾರ್ಕ್ ಹತ್ತಿರ ಹೋಗಿದ್ದ ವೇಳೆ ಹುಡುಗಿ ಚುಡಾಯಿಸಿದನೆಂದು ನಾಲ್ವರು ಗುಂಪು ಸೇರಿ ಹಲ್ಲೆ ಮಾಡಿದರು. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಮಾಡುತ್ತೇವೆ ಎಂದು ವಿವಸ್ತ್ರಗೊಳಿಸಿದರು. ಅವರ ಹೆಸರು ಗೊತ್ತಿಲ್ಲ’ ಎಂದು ಹಲ್ಲೆಗೊಳಗಾದ ಮೇಘರಾಜ್‌ ದೂರಿನಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು