ನಕಲಿ ಮದ್ಯ ಮಾರಿದರೆ ಜೈಲು: ಸಚಿವ ಎಚ್‌.ಡಿ.ರೇವಣ್ಣ ಸೂಚನೆ

7
‘ಅಬಕಾರಿ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಿ’

ನಕಲಿ ಮದ್ಯ ಮಾರಿದರೆ ಜೈಲು: ಸಚಿವ ಎಚ್‌.ಡಿ.ರೇವಣ್ಣ ಸೂಚನೆ

Published:
Updated:
Deccan Herald

ಹಾಸನ: ಜಿಲ್ಲೆಯಲ್ಲಿ ಅಕ್ರಮ ಮತ್ತು ನಕಲಿ ಮದ್ಯ ಮಾರಾಟ ಮಾಡುವವರನ್ನು ಮುಲಾಜಿಲ್ಲದೆ ಜೈಲಿಗೆ ಕಳುಹಿಸುವಂತೆ ಸಚಿವ ಎಚ್‌.ಡಿ.ರೇವಣ್ಣ ಅವರು ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆ ನಕಲಿ ಮದ್ಯ ತಯಾರಿಸಿ, ಬಾಟಲ್‌ಗಳ ಮೇಲೆ ವಿವಿಧ ಬ್ರಾಂಡ್‌ನ ಲೇಬಲ್‌ ಅಂಟಿಸಿ ಮಾರಲಾಗುತ್ತಿದೆ. ಮಹಿಳೆಯರು ಮಾಂಗಲ್ಯ ಸರ ಮಾರುವ ಸ್ಥಿತಿ ಬಂದಿದೆ. ಹೆಣ್ಣುಮಕ್ಕಳು ಸಂಪಾದಿಸಿದ ಕೂಲಿ ಹಣವನ್ನು ಗಂಡಸರು ಕಿತ್ತುಕೊಂಡು ಮದ್ಯಕ್ಕೆ ಸುರಿಯುತ್ತಿದ್ದಾರೆ. ಹಣ ನೀಡದಿದ್ದರೆ ಅವರ ಮೇಲೆ ಹಲ್ಲೆ ನಡೆಸುತ್ತಾರೆ. ಯುವಕರು ಕಂಠ ಪೂರ್ತಿ ಮದ್ಯ ಸೇವಿಸಿ ಬೈಕ್‌ ಗಳನ್ನು ವೇಗವಾಗಿ ಓಡಿಸಿ ಅಪಘಾತ ಮಾಡುತ್ತಾರೆ. ಇಸ್ಪೀಟ್‌  ಹಾಗೂ ಬೆಟ್ಟಿಂಗ್ ದಂದೆಯಿಂದ ಹಲವರು ಮನೆ, ಮಠ ಹಾಳು ಮಾಡಿಕೊಂಡಿದ್ದಾರೆ. ನಮ್ಮದೇ ನಗರಸಭೆ ಮಾಜಿ ಅಧ್ಯಕ್ಷರೊಬ್ಬರು ಬೆಟ್ಟಿಂಗ್ ದಂದೆಯಲ್ಲಿ ತೊಡಗಿ ಲಕ್ಷಾಂತರ ಕಣ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಸರ್ಕಾರದ ಆದಾಯಕ್ಕೆ ನಷ್ಟ ಆಗದಂತೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಅಗತ್ಯವಿದ್ದರೆ ಎಂಎಸ್‌ಐಎಲ್‌ಗಳಿಗೆ ಅವಕಾಶ ನೀಡಿ. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆ 10.30ಕ್ಕಿಂತ ಮುಂಚೆ ತೆಗೆಯುವ ಬಾರ್, ವೈನ್‌ಸ್ಟೋರ್‌ ಮಾಲೀಕರು ಹಾಗೂ ಅಬಕಾರಿ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಿ’ ಎಂದು ಎಸ್‌ಪಿ ಹಾಗೂ ಅಬಕಾರಿ ಉಪ ಆಯುಕ್ತ ಗೋಪಾಲಗೌಡರಿಗೆ ನಿರ್ದೇಶನ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಶಿವಲಿಂಗೇಗೌಡ, ‘ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕಾರಣ ಅಮಾಯಕರು ಬೀದಿ ಪಾಲಾಗುತ್ತಿದ್ದಾರೆ. ಹರಾಜಿನಲ್ಲಿ ಪಡೆದು ಮದ್ಯ ಮಾರುತ್ತಾರೆ. ಸಾಲ ಕೊಟ್ಟು ಕುಡುಕರನ್ನಾಗಿ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಶಾಸಕ ಬಾಲಕೃಷ್ಣ, ‘ಮದ್ಯದಂಗಡಿಗಳಲ್ಲಿ ಮಾರಾಟ ಮಾಡುವ ಬಾಟಲ್‌ ನೀರು ಅಶುದ್ಧವಾಗಿದೆ. ಕುಡಿದ ಮತ್ತಿನಲ್ಲಿ ಯಾವುದೇ ನೀರು ಕೊಟ್ಟರು ಕುಡಿಯುತ್ತಾರೆಂಬ ಕಾರಣಕ್ಕೆ ಅಶುದ್ಧ ನೀರು ಕುಡಿದು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಪ್ರೀತಂ ಗೌಡ, ‘ಹಾಸನದ ಪವನಪುತ್ರ ರೆಸಾರ್ಟ್‌ ಸೇರಿದಂತೆ ನಗರದ ಕ್ಲಬ್‌ಗಳಲ್ಲಿ ಇಸ್ಪೀಟ್‌ ದಂದೆ ಜೋರಾಗಿ ನಡೆಯುತ್ತಿದೆ. ಬೆಳಿಗ್ಗೆ 7.30ಕ್ಕೆ ಮದ್ಯದಂಗಡಿ ತೆರೆಯಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಿ’ ಎಂದು ಸಚಿವರಿಗೆ ಮನವಿ ಮಾಡಿದರು.

ಕೃಷಿ ಚಟುವಟಿಕೆ ಕುರಿತು ಮಾಹಿತಿ ನೀಡಿದ ಜಂಟಿ ನಿರ್ದೇಶಕ ಮದುಸೂದನ್‌, ‘ 2.21 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದ ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 23 ಸಾವಿರ ಹೆಕ್ಟೇರ್‌ನಲ್ಲಿ ಶೇಕಡಾ 33ಕ್ಕೂ ಹೆಚ್ಚು ಹಾನಿಯಾಗಿದೆ. ₹ 16 ಕೋಟಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌, ‘ ಅತಿವೃಷ್ಟಿಯಿಂದಾಗಿ ₹ 40 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಅದರಲ್ಲೂ ಆಲೂಗೆಡ್ಡೆ, ಕಾಳು ಮೆಣಸು ಹೆಚ್ಚು ಹಾನಿ. ₹ 15. 42 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಆಲೂಗೆಡ್ಡೆ ಬಿತ್ತನೆ ಬೀಜವನ್ನು ಹೊರಗಿನಿಂದ ತರುವುದು ಬೇಡ. ರೈತರಿಗೆ ಶೇಕಡಾ 50 ರಷ್ಟು ಸಬ್ಸಿಡಿ ನೀಡಿದರೆ ಬೇಕಾದ ಕಡೆಯಿಂದ ತರುತ್ತಾರೆ. ಪ್ರತಿ ತಾಲ್ಲೂಕಿನಲ್ಲಿ ಐದು ಪಂಚಾಯಿತಿ ಆಯ್ಕೆ ಮಾಡಿಕೊಂಡು ತೆಂಗು, ಅಡಿಕೆ, ಬಾಳೆ ಬೆಳೆಸಬೇಕು. ಕೆಲಸ ಮಾಡದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊರಗೆ ಹಾಕಿ’ ಎಂದು ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌, ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್‌, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್‌.ಲಿಂಗೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !