ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

ಬೆಳಗ್ಗೆ 7ರಿಂದ 6ರವರೆಗೆ ಮತದಾನ, ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಪೊಲೀಸ್‌ ಭದ್ರತೆ
Last Updated 16 ಏಪ್ರಿಲ್ 2019, 15:00 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಏ. 18ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಸಿದ್ದಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 1985 ಮತಗಟ್ಟೆಗಳಿಗೆ ಒಟ್ಟು 8734 ಸಿಬ್ಬಂದಿ ನಿಯೋಜಿಸಲಾಗಿದೆ.
ಮತದಾನ ಪ್ರಕ್ರಿಯೆಯಲ್ಲಿ ವಿಧಾನಸಭಾ ಕ್ಷೇತ್ರಗಳ 10 ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು 237 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರಿಗೆ ಮ್ಯಾಜಿಸ್ಟ್ರಿಯಲ್ ಅಧಿಕಾರ ನೀಡಲಾಗಿದೆ ಎಂದು ವಿವರಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪಾಳಿ ಆಧಾರದ ಮೇಲೆ ದಿನದ 24*7 ಕರ್ತವ್ಯ ನಿರ್ವಹಿಸಲು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನೇಮಿಸಲಾಗಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತಿಮ 48 ಗಂಟೆಗಳಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಲು ಆಯಾ ವ್ಯಾಪ್ತಿಗಳಲ್ಲಿ ಕರ್ತವ್ಯ ನಿರ್ವಹಿಸಲು 28 ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಿದ್ದು, ಕ್ಷೇತ್ರದ ವ್ಯಾಪ್ತಿಯ ಗಡಿ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿನ ಚೆಕ್ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಕಣ್ಗಾವಲು ಪಡೆ ರಚಿಸಲಾಗಿದೆ ಎಂದು ಹೇಳಿದರು,.

ದುರ್ಬಲ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರ ಅರೆ ಸೇನಾ ಪಡೆ ನಿಯೋಜನೆ ಜತೆಗೆ ವಿಡಿಯೊ ಚಿತ್ರೀಕರಣ, ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಮತಗಟ್ಟೆ ವ್ಯಾಪ್ತಿಯಲ್ಲಿ ನಡೆಯುವ ಘಟನೆಗಳು, ಇತರೆ ಮಾಹಿತಿ ಪಡೆಯಲು ಜಿಲ್ಲಾ ಕೇಂದ್ರ, ಸಹಾಯಕ ಕೇಂದ್ರ, ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು, ಮತದಾರರು ಜಿಲ್ಲಾ ಕೇಂದ್ರ ಹಾಗೂ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಸಹಾಯಕ ಕೇಂದ್ರ, ಕಂಟ್ರೋಲ್ ರೂಂಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಗೆ ದೂರು ಹಾಗೂ ಸಲಹೆ ನೀಡಬಹುದು ಎಂದು ನುಡಿದರು.

ಸ್ವೀಪ್‌ ಸಮಿತಿ ಅಧ್ಯಕ್ಷ ವಿಜಯ ಪ್ರಕಾಶ್‌ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 15339 ಅಂಗವಿಕಲರ ಪೈಕಿ 2074 ಮಂದಿ ತೀವ್ರ ಅಂಗವಿಕಲತೆ ಹೊಂದಿದ್ದಾರೆ. ಮತಕೇಂದ್ರಕ್ಕೆ ಬಂದು ಮತ ಚಲಾಯಿಸಲು ಗಾಲಿ ಕುರ್ಚಿ ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ವಾಹನ ವ್ಯವಸ್ಥೆ ಸಹ ಮಾಡಲಾಗಿದೆ. ಮಂದ ದೃಷ್ಟಿ ಹೊಂದಿರುವವರಿಗೆ ಭೂತ ಗಾಜಿನ ಸೌಲಭ್ಯ. ಎಲೆಕ್ರ್ಟಾನಿಕ ಮತ ಯಂತ್ರಗಳಲ್ಲಿ ಬ್ರೈಲ್ ಲಿಪಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಟನೆ ಸಂಬಂಧಿಸಿದಂತೆ ಒಟ್ಟು 16 ಪ್ರಕರಣ ದಾಖಲಿಸಲಾಗಿದೆ. ಈವರೆಗೆ ₹22,28,3000 ನಗದು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕುಕ್ಕರ್‌, ಸೀರೆ, 41 ದ್ವಿಚಕ್ರ, ಆಟೊ, ಎರಡು ಕಾರು, ಎರಡು ಲಾರಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 34392 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದರು.

ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಸುಗಮವಾಗಿ ನಡೆಸುವ ಉದ್ದೇಶದಿಂದ ಏ. 16 ರ ಸಂಜೆ 6ರಿಂದ ಏ. 19 ರ ಬೆಳಿಗ್ಗೆ 6ರಿಂದ ಮತ್ತು ಮೇ 22ರ ಮಧ್ಯರಾತ್ರಿ 12 ರಿಂದ 24 ರ ಬೆಳಿಗ್ಗೆ 6 ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT