ಶನಿವಾರ, ಡಿಸೆಂಬರ್ 7, 2019
22 °C
ಪಾಪದ ಕೆಲಸ ಮಾಡಲು ಯಡಿಯೂರಪ್ಪ ಸಿ.ಎಂ ಆಗಿರಬೇಕಾ: ರೇವಣ್ಣ ಪ್ರಶ್ನೆ

ನೆರೆ ಸಂತ್ರಸ್ತರ ಹಣಕ್ಕೆ ಬ್ರೇಕ್‌ ಹಾಕಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ರಾಜ್ಯದಲ್ಲಿ ರೇವಣ್ಣ ಕಾಮಗಾರಿಗಳಿಗೆ ಬೇಕಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಬ್ರೇಕ್‌ ಹಾಕಿಕೊಳ್ಳಲಿ, ಆದರೆ, ನೆರೆ ಸಂತ್ತಸ್ತರ ಪರಿಹಾರದ ಹಣ ಬಿಡುಗಡೆಗೆ ಬ್ರೇಕ್‌ ಹಾಕುವುದು ಬೇಡ’ ಎಂದು ಶಾಸಕ ಎಚ್.ಡಿ.ರೇವಣ್ಣ ಸರ್ಕಾರಕ್ಕೆ ಮನವಿ ಮಾಡಿದರು.

‘ರಾಜ್ಯದ 12 ಜಿಲ್ಲೆಗಳಲ್ಲಿ ನೆರೆಯಿಂದಾಗಿ ಸಂತ್ರಸ್ತರ ಬದುಕು ಬೀದಿಗೆ ಬಂದಿದೆ. ಹನ್ನೆರಡು ಜಿಲ್ಲೆಗಳಲ್ಲಿ ಮಳೆಯಿಂದ ₹ 32 ಸಾವಿರ ಕೋಟಿ ನಷ್ಟವಾಗಿದೆ. ಆದರೆ, ಕೇಂದ್ರದಿಂದ ನೆರವು ಪಡೆಯಲು ಆಗದ ರಾಜ್ಯ ಸರ್ಕಾರ, ₹ 500 ಕೋಟಿ ರಸ್ತೆ ದುರಸ್ತಿಗೆ ಹಾಗೂ ₹ 1000 ಕೋಟಿ ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳ ನಂತರ ಪರಿಹಾರದ ಹಣ ಬಿಡುಗಡೆಗೆ ಮುಂದಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ರಾಜ್ಯದಲ್ಲಿ ಬೆಳೆ ಹಾಗೂ ಮನೆಗಳ ಹಾನಿಯಿಂದ ₹ 15-20 ಸಾವಿರ ಕೋಟಿ‌ ನಷ್ಟವಾಗಿದೆ. ಹಾಸನ ಜಿಲ್ಲೆಯಲ್ಲಿಯೇ ರಸ್ತೆ ಹಾನಿಯಿಂದ ₹ 300 ಕೋಟಿ ನಷ್ಟವಾಗಿದೆ. ಮನೆ ನಿರ್ಮಾಣಕ್ಕೆ ₹ 1 ಲಕ್ಷ ನೀಡಿದರೆ ಯಾವುದಕ್ಕೂ ಸಾಲುವುದಿಲ್ಲ. ರೈತರ ಬೆಳೆ ಪರಿಹಾರಕ್ಕೆ ಬಿಡಿಗಾಸು ನೀಡಿಲ್ಲ. ರೈತರು ಈ ವರ್ಷ ಯಾವುದೇ ಬೆಳೆ ಬೆಳೆಯುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ‌ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನೆರೆ ಸಂತ್ರಸ್ತರು ಕೈ ಹಿಡಿಯುವ ಆಶಾಭಾವನೆ ಹೊಂದಿದ್ದರು. ಈಗ ಅದಕ್ಕೆ ತಣ್ಣೀರು ಸುರಿದಿದ್ದಾರೆ. ಇಪ್ಪತ್ತೈದು ಬಿಜೆಪಿ ಸಂಸದರನ್ನು ರಾಜ್ಯದ ಜನ ಆಯ್ಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕನಿಷ್ಠ ₹ 15 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು. ಪ್ರಧಾನಿ ಮೋದಿ ಭೇಟಿಗೆ ಯಡಿಯೂರಪ್ಪಗೆ ಅವಕಾಶ ನೀಡುತ್ತಿಲ್ಲ ಎಂದರು.

‘ಬಿಜೆಪಿ ಸರ್ಕಾರಕ್ಕೆ ನೆರೆ ಹಾನಿ, ರೈತರ ಸಂಕಷ್ಟ ಮನೆ ಕಳೆದುಕೊಂಡವರ ಪುನಶ್ಚೇತನ ಬೇಕಿಲ್ಲ. ಬೇಕಿದ್ದರೆ ನನ್ನ ಕಾಮಗಾರಿಗೆ ಬ್ರೇಕ್ ಹಾಕಿಕೊಳ್ಳಲಿ, ನೆರೆ ಸಂತ್ರಸ್ತರ ಪರಿಹಾರಕ್ಕೆ ಬ್ರೇಕ್ ಹಾಕುವುದು ಬೇಡ, ಅವರಿಂದ ಹಣ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಅತ್ತ ಗಮನಹರಿಸುತ್ತಿಲ್ಲ’ ಎಂದು ಕಿಡಿಕಾರಿದರು.

ವಿವಿಧ ಇಲಾಖೆಗಳ ಮುಖ್ಯ ಎಂಜಿನಿಯರ್‌ಗಳ ಪದೋನ್ನತಿ ಕಡತವನ್ನು ಎರಡು ತಿಂಗಳುಗಳಿಂದ ವಿಲೇವಾರಿ ಮಾಡದೆ ಇರಿಸಿಕೊಂಡಿದ್ದ ಸಿಎಂ, ಬಿಡ್ ಮಾಡಿ, 24 ಮುಖ್ಯ ಇಂಜಿನಿಯರ್ ಗಳಿಗೆ ಪದೋನ್ನತಿ ನೀಡುವ ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಭ್ರಷ್ಟಾಚಾರ ಮಾಡಲು ಎಪ್ಪತ್ತೈದು ವರ್ಷ ದಾಟಿದವರಿಗೆ ಹುದ್ದೆ ಇಲ್ಲ ಎಂಬ ಬಿಜೆಪಿ ನಿಯಮದಿಂದ ಬಿ.ಎಸ್‌.ಯಡಿಯೂರಪ್ಪಗೆ ವಿನಾಯಿತಿ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಪರ್ಸೆಂಟೆಜ್‌ ಸರ್ಕಾರ ಎಂದು ಮೋದಿ ಟೀಕಿಸಿದ್ದರು. ಈಗ ರಾಜ್ಯ ಸರ್ಕಾರ ಒಂದೊಂದು ಹುದ್ದೆಗೂ ಇಂತಿಷ್ಟು ವಸೂಲಿ ಮಾಡುತ್ತಿರುವುದಕ್ಕೆ ಮೋದಿ ಉತ್ತರ ಕೊಡಬೇಕು. ದ್ವೇಷದ ರಾಜಕಾರಣ ಮಾಡುವವರಿಗೆ ದೇವರು ಶಿಕ್ಷೆ ಕೋಡುವ ಕಾಲ ಬರುತ್ತದೆ. ಈ‌ ಪಾಪದ ಕೆಲಸ ಮಾಡಲು ಯಡಿಯೂರಪ್ಪ ಮುಖ್ಯಮಂತ್ರಿ ಆಗಿರಬೇಕಾ’ ಎಂದು ಖಾರವಾಗಿ ಪ್ರಶ್ನಿಸಿದರು.

ಕಳೆದ ವರ್ಷ ನೆರೆ ಸಂತ್ರಸ್ತರಿಗೆ ಎಚ್. ಡಿ. ಕುಮಾರಸ್ವಾಮಿ ಮನೆ ಕಟ್ಟಲು ಹಣ ಹಾಗೂ ತಾತ್ಕಾಲಿಕ ವಸತಿಗಾಗಿ ಬಾಡಿಗೆ ಹಣ ನೀಡಿದ್ದರು. ಆದರೆ, ಈಗ ಸರ್ಕಾರ ಕೇವಲ ನಾಮ್ ಕೆ ವಾಸ್ತೆಗೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಕೂಡಲೇ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಇದ್ದರು.

 

ಪ್ರತಿಕ್ರಿಯಿಸಿ (+)