ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಫಾ’ ಮುಂಜಾಗ್ರತೆ ವಹಿಸಿ, ಜಾಗೃತಿ ಮೂಡಿಸಿ

ನಿಗಾವಹಿಸುವಂತೆ ಅಧಿಕಾರಿಗಳಿಗೆ ಸಿಇಒ ವಿಜಯಪ್ರಕಾಶ್‌ ನಿರ್ದೇಶನ
Last Updated 7 ಜೂನ್ 2019, 13:50 IST
ಅಕ್ಷರ ಗಾತ್ರ

ಹಾಸನ: ನೆರೆ ರಾಜ್ಯದಲ್ಲಿ ಕಂಡು ಬಂದಿರುವ ನಿಫಾ ವೈರಸ್‌ ಸೋಂಕು ಪತ್ತೆಯಾಗಿರುವ ಶಂಕೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿಯೂ ಸಾರ್ವಜನಿಕರು ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಕೆ.ಎನ್.ವಿಜಯ್‍ಪ್ರಕಾಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ, ಕೃಷಿ, ಅಬಕಾರಿ, ಅರಣ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ನಗರಸಭೆ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ಅನಾರೋಗ್ಯದ ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸುವುದು, ಬಾವಲಿಗಳ ಪ್ರವೇಶ ತಪ್ಪಿಸಲು, ತೆರದ ಬಾವಿಗಳಿಗೆ ಜಾಲರಿ ಅಳವಡಿಸಿಕೊಳ್ಳುವಂತಹ ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ತಲುಪುವಂತೆ ಗಮನಹರಿಸಬೇಕು ಎಂದು ಹೇಳಿದರು.

ಅರಣ್ಯ ಹಾಗೂ ಮಲೆನಾಡು ಪ್ರದೇಶ, ಅಂಗನವಾಡಿ ಕೇಂದ್ರ, ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ನಿಫಾ ವೈರಸ್‌ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಬೇಕಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ನಿಫಾ ವೈರಸ್‌ ಸೋಂಕು ತಡೆಗಟ್ಟಲು ಹೆಚ್ಚಾಗಿ ಅಂಗನವಾಡಿ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಈ ಬಗ್ಗೆ ಪ್ರತಿ ಮನೆ ಮನೆಗೂ ಕರಪತ್ರಗಳು ತಲುಪಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಮಾತನಾಡಿ, ಬಾವಲಿಗಳು ಬಿಸಾಡಿದ ಹಣ್ಣು ಸೇವಿಸುವುದರ ಮೂಲಕ ಇತರೆ ಪ್ರಾಣಿಗಳಿಗೆ, ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಮತ್ತು ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ರೋಗ ಮನುಷ್ಯರಿಗೆ ಹರಡಲಿದೆ. ಸೋಂಕಿತ ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ವಿಶೇಷ ಆರೈಕೆ ವೇಳೆ ಮಾಸ್ಕ್‌ ಉಪಯೋಗಿಸಬೇಕು. ಸಾರ್ವಜನಿಕರು ಈ ಬಗ್ಗೆ ಎಚ್ಚರ ಹಾಗೂ ವಿಶೇಷ ಕಾಳಜಿ ವಹಿಸಬೇಕು ಎಂದು ಅವರು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಮೂರ್ತಿ, ನಗರಸಭೆ ಆಯುಕ್ತೆ ರೂಪಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT