ನಿವೇಶನ ಆಸೆಗೆ ಮುಗಿಬಿದ್ದ ಜನರು

7
ಪ್ರಧಾನ ಮಂತ್ರಿ ಅವಾಸ್‌ ಯೋಜನೆ

ನಿವೇಶನ ಆಸೆಗೆ ಮುಗಿಬಿದ್ದ ಜನರು

Published:
Updated:
Prajavani

ಹಾಸನ: ಪ್ರಧಾನ ಮಂತ್ರಿ ಹೆಸರಿನ ಯೋಜನೆಯಡಿ ₹ 60 ಪಾವತಿಸಿ ಆನ್ ಲೈನ್ ಮೂಲಕ ಅರ್ಜಿ ಹಾಕಿದರೆ ನಿವೇಶನ ಸಿಗಲಿದೆಯೆಂದು ಇಂಟರ್ ನೆಟ್ ಸೆಂಟರ್ ಎದುರು ಜನರು ಸಾಲುಗಟ್ಟಿ ನಿಂತಿದ್ದಾರೆ.

ಪ್ರಧಾನಿ ಮೋದಿ ಹೆಸರಿನ pmaymis.gov.in ಹೆಸರಿನ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿ ಹಾಕಿದರೆ ಸೈಟ್ ಸಿಗಲಿದೆ ಎಂಬ ವಿಷಯ ಬಾಯಿಂದ ಬಾಯಿಗೆ ಹರಡಿ ಜಿಲ್ಲೆಯ ವಿವಿಧೆಡೆಗಳಿಂದ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಜನರು, ಮುಗಿಬಿದ್ದು ಅರ್ಜಿ ಹಾಕುತ್ತಿದ್ದಾರೆ. ನಗರದ ನಿವಾಸಿಗಳು ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆಗಳಿಂದಲೂ ತಂಡೋಪ ತಂಡವಾಗಿ ಜನ ಬರುತ್ತಿದ್ದಾರೆ.

‘ಕೇವಲ ₹ 60 ಪಾವತಿಸಿ ಅರ್ಜಿ ಹಾಕಿದರೆ ಸೈಟ್ ಸಿಗುತ್ತದೆ ಎಂದು ಯಾರೋ ಹೇಳಿದರು. ₹ 60 ಎಲ್ಲಿ ಹೋಗಿ, ಎಲ್ಲಿ ಬರುತ್ತೋ? ಅದಕ್ಕಾಗಿ ಅರ್ಜಿ ಹಾಕುತ್ತಿದ್ದೇವೆ. ನಿವೇಶನ ಸಿಗಲಿದೆ ಎಂಬ ಆಸೆಯಿಂದ ಅರ್ಜಿ ಹಾಕುತ್ತಿದ್ದೇವೆ’ ಎಂದು ಅರ್ಜಿದಾರ ಶ್ರೀಕಾಂತ್‌ ಹೇಳಿದರು.

‘ಸೈಟ್ ಸಿಗಲಿದೆ ಅಂತ ನಾವೇನೂ ಪ್ರಚಾರ ಮಾಡಿಲ್ಲ. ಆನ್‌ಲೈನ್ ಶುಲ್ಕ ಮಾತ್ರ ಪಡೆಯುತ್ತೇವೆ. ಕೇಂದ್ರ ಕೊಳಚೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಯೋಜನೆ ಇದಾಗಿದ್ದು ಯಾರು, ಎಲ್ಲಿ ಬೇಕಾದರೂ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು’ ಎಂದು ಇಂಟರ್ ನೆಟ್ ಸೆಂಟರ್ ಮಾಲೀಕ ದೀಪಕ್ ಸ್ಪಷ್ಟಪಡಿಸಿದರು.

ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಇಂಟರ್ ನೆಟ್ ಅಂಗಡಿ ಬಂದ್ ಮಾಡಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಾಸ್ತವವಾಗಿ ಇದು ಗುಡಿಸಲು ಮುಕ್ತ ಯೋಜನೆಯಾಗಿದ್ದು, ಹೊಸದಾಗಿ ಮನೆ ಕಟ್ಟಿಕೊಳ್ಳುವವರು ಅರ್ಜಿ ಸಲ್ಲಿಸಬಹುದು.

‘ಪ್ರಧಾನ ಮಂತ್ರಿ ಅವಾಸ್ ಯೋಜನೆ ಹೆಸರಿನಲ್ಲಿ ಆನಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬಂದಿದೆ. ಈ ಯೋಜನೆಯಲ್ಲಿ ಅರ್ಜಿದಾರರಿಗೆ ಮನೆ ಕಟ್ಟಲು ಮಾತ್ರ ಸಬ್ಸಿಡಿ ನೀಡಲಾಗುತ್ತದೆ. ಬಡವರಿಗೆ ನಿವೇಶನ ನೀಡುವ ಯೋಜನೆ ಸದ್ಯಕ್ಕಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಕೊಂಡ ನಂತರ ಅರ್ಜಿ ಸಲ್ಲಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !