ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ಕಳೆದುಕೊಳ್ಳುತ್ತಿರುವ ಗ್ರಾಮೀಣ ಜನ

ಹಿರೀಸಾವೆ ಹೋಬಳಿಯ ಹಲವು ರಸ್ತೆಗಳಿಗೆ ಸೇತುವೆಯ ಕೊರತೆ
Last Updated 6 ಜುಲೈ 2022, 3:56 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯಲ್ಲಿ ಮಳೆ ಜೋರಾಗಿ ಬಂದ ದಿನಗಳಲ್ಲಿ ಹಿರೀಸಾವೆ, ಮತಿಘಟ್ಟ, ಬಾಳಗಂಚಿ ಕೆರೆಗಳು ಕೋಡಿ ಬಿದ್ದು, ಹಳ್ಳಗಳಲ್ಲಿ ನೀರು ತುಂಬುತ್ತವೆ. ಸೇತುವೆ ಇಲ್ಲದ ಕೆಲವು ಕಡೆ, ರಸ್ತೆಯ ಮೇಲೆ ನೀರು ಹರಿಯುವುದರಿಂದ 10 ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಳ್ಳುತ್ತಿವೆ.

ಹೋಬಳಿಯ ಮತಿಘಟ್ಟ ಕೆರೆಯ ನೀರು, ಬಿ.ಜಿ.ಕೊಪ್ಪಲು– ಸೋರೆಕಾಯಿಪುರದಿಂದ ರಾಜ್ಯ ಹೆದ್ದಾರಿ 8 ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಹರಿಯುತ್ತದೆ. ಇಲ್ಲಿ ಸೇತುವೆ ಇಲ್ಲದೇ ಇರುವುದರಿಂದ ಇದರಿಂದ ಆಯರಹಳ್ಳಿ, ಚೊಳ್ಳಂಬಳ್ಳಿ ಮತ್ತು ಬಿಂಡಿಗನವಿಲೆ ಹೋಬಳಿಯ ಕೆಲವು ಹಳ್ಳಿಯವರು ಈ ಮಾರ್ಗದಲ್ಲಿ ಸಂಚರಿಸಲು ಆಗುತ್ತಿಲ್ಲ.

ಕಳೆದ ತಿಂಗಳು 10ಕ್ಕೂ ಹೆಚ್ಚು ದಿನ ಹಳ್ಳದಲ್ಲಿ ಹೆಚ್ಚು ನೀರು ಹರಿದಿದ್ದರಿಂದ ಹೋಬಳಿ ಕೇಂದ್ರದಿಂದ 2 ಕಿ.ಮೀ. ದೂರದಲ್ಲಿರುವ ತೂಬಿನಕೆರೆ ಮತ್ತು ದಾಸಿನಕೆರೆ ಗ್ರಾಮಗಳ ಜನರು ಎಲ್ಲಿಯೂ ಹೋಗಲಾಗದ ಸಮಸ್ಯೆ ಎದುರಿಸುವಂತಾಗಿತ್ತು.

ಆ ದಿನಗಳಲ್ಲಿ ಹಿರೀಸಾವೆ ಮತ್ತಿತರ ಕಡೆಗೆ ಶಾಲಾ– ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು ಹಳ್ಳಿಯಲ್ಲಿಯೇ ಉಳಿಯುವಂತಾಯಿತು. ತೂಬಿನಕೆರೆಗೆ ರಾಷ್ಟ್ರೀಯ ಹೆದ್ದಾರಿ 75 ರಿಂದ ಮತ್ತು ಹಿರೀಸಾವೆಯಿಂದ ಸಂಪರ್ಕ ರಸ್ತೆಗಳು ಇವೆ. ಆದರೆ ಎರಡೂ ಕಡೆ ಸೇತುವೆ ಇಲ್ಲದೇ ರಸ್ತೆ ಮೇಲೆ ನೀರು ಹರಿಯುತ್ತದೆ. ಇಂತಹ ದಿನಗಳಲ್ಲಿ ಸುಮಾರು 8 ರಿಂದ 10 ಕಿ.ಮೀ ಸುತ್ತಿ ಹಿರೀಸಾವೆಗೆ ಬರಬೇಕಿದೆ.

‘ಬಾಳಗಂಚಿ ಕೆರೆ ಕೋಡಿ ನೀರು, ಹೆರಗನಹಳ್ಳಿ ಕೆರೆಗೆ ಹಳ್ಳದಲ್ಲಿ ಹರಿಯುವಾಗ, ತಿಮ್ಮಾಲಪುರ ಗ್ರಾಮದ 20ಕ್ಕೂ ಹೆಚ್ಚು ರೈತರು, ತೆಂಗಿನ ತೋಟ, ಹೊಲಕ್ಕೆ ಹೋಗಲು ಆಗುತ್ತಿಲ್ಲ. ಹರಿಯುವ ನೀರು ಕಡಿಮೆಯಾದ ದಿನಗಳಲ್ಲಿ ಹಳ್ಳದಾಟಿ, ಜಮೀನಿಗೆ ತೆರಳಬೇಕಿದೆ. ಇಲ್ಲಿಗೆ ಸೇತುವೆ ಬೇಕು’ ಎನ್ನುತ್ತಾರೆ ರೈತ ಬಾಬು.

ಹಿರೀಸಾವೆಯ ಸ್ಮಶಾನದ ಬಳಿ ಹಳ್ಳ ತುಂಬಿ ಹರಿಯುವುದರಿಂದ ಮಾರುಗದಮ್ಮ ದೇವಸ್ಥಾನ ಮತ್ತು ಜಮೀನಿಗೆ ರೈತರು ಹೋಗಲು ಆಗುತ್ತಿಲ್ಲ. ಸುತ್ತಿ ಬಳಸಿ ಹೋಗಬೇಕಿದೆ. ಕೊತ್ತನಹಳ್ಳಿ, ಕೊಳ್ಳೆನಹಳ್ಳಿ ಗ್ರಾಮಸ್ಥರು ಈ ಸಮಸ್ಯೆ ಎದುರಿಸುತ್ತಿದ್ದರು, ಈಗ ಸೇತುವೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT