ಮಂಗಳವಾರ, ಡಿಸೆಂಬರ್ 1, 2020
22 °C
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಪ್ರೀತಂ ಜೆ.ಗೌಡ ಸೂಚನೆ

ಮನೆ ಮಂಜೂರಾತಿಯಲ್ಲಿ ತಾರತಮ್ಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಸುತ್ತಮುತ್ತಲಿನ 16 ಗ್ರಾಮ ಪಂಚಾಯಿತಿಗಳು ನಗರಸಭೆಗೆ ಸೇರ್ಪಡೆ ಆಗುವ ಮೊದಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಾರತಮ್ಯ ಮಾಡದೇ ಅರ್ಹರಿಗೆ ಮನೆ ಮಂಜೂರು ಮಾಡಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಸೂಚಿಸಿದರು.

ಹಾಸನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಮಂಜೂರು ಮಾಡುವ ಮುನ್ನ ನಿವೇಶನ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರದಲ್ಲಿ ನಡೆಯಲಿದೆ. ಮನೆ ನೀಡುವಾಗ ಫಲಾನುಭವಿ ಕಾಂಗ್ರೆ‌ಸ್‌, ಬಿಜೆಪಿ ಅಥವಾ ಜೆಡಿಎಸ್‌ ಪಕ್ಷ ಎಂಬ ತಾರತಮ್ಯ ಮಾಡಬಾರದು. ಪಿಡಿಒ ಗಳಿಗೆ ಸದ್ಯದಲ್ಲೇ ಪಟ್ಟಿ ನೀಡುತ್ತೇನೆ. ಆ ಪಟ್ಟಿಯೇ ಅಂತಿಮವಲ್ಲ. ಅರ್ಹರನ್ನು ಸೇರಿಸಬಹುದು. ಈ ಎಲ್ಲಾ ಪ್ರಕ್ರಿಯೆ ಈ ತಿಂಗಳ ಅಂತ್ಯದ ಒಳಗೆ ಮುಗಿಯಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ 145 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ರೇಷ್ಮೆ ಗೂಡು ಕೆ.ಜಿಗೆ ₹450 ವರೆಗೆ
ಮಾರಾಟವಾಗುತ್ತಿದೆ. ಸಾಲಗಾಮೆ ಹೋಬಳಿಯಲ್ಲಿ 21 ಹಾಗೂ ಕಸಬಾ ಹೋಬಳಿಯಲ್ಲಿ 53 ಹೆಕ್ಟೇರ್‌ ಪ್ರದೇಶಲ್ಲಿ ಹಿಪ್ಪು
ನೇರಳೆ ಬೆಳೆಯಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 15 ಹೆಕ್ಟೇರ್‌ ಬೆಳೆ ಪ್ರದೇಶ ವಿಸ್ತರಣೆ ಆಗಿದೆ ಎಂದು ರೇಷ್ಮೆ
ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರೀತಂ, ರೇಷ್ಮೆ ಲಾಭದಾಯಕ ಬೆಳೆ. ರೈತರು ಕೋವಿಡ್‌ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟ
ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ಮಾಡಿ, ಪ್ರಮುಖ ರೈತರ ಜೊತೆ ಚರ್ಚಿಸಿ ಹಿಪ್ಪುನೇರಳೆ ಕೃಷಿ ಮಾಡುವಂತೆ ಮನವೊಲಿಸಬೇಕು ಎಂದರು.

ಕಡಿಮೆ ವಿಸ್ತೀರ್ಣದಲ್ಲಿ ಬೆಳೆ ಮಾಡುವುದಾದರೆ ಅದಕ್ಕಾಗಿ ಇಲಾಖೆ ಏಕೆ ಬೇಕು? ಅಧಿಕಾರಿಯಾಗಿ ನಿಮ್ಮ ಕೊಡುಗೆ ಏನು? ಸರ್ಕಾರ ನಿಗದಿ ಮಾಡುವ ಗುರಿ ಸಾಧನೆ ಒಂದೇ ಅಂತಿಮವಲ್ಲ. ಮುಂದಿನ ಸಭೆಗೆ ಬರುವ ವೇಳೆಗೆ ಕ್ಷೇತ್ರದಲ್ಲಿ ಕನಿಷ್ಠ 10 ಜನ ರೈತರು ರೇಷ್ಮೆಯಿಂದ ಲಾಭ ಪಡೆದಿರುವ ವಿಷಯ ತಿಳಿಸಬೇಕು ಎಂದರು.

ಬಿಸಿಎಂ ವಿದ್ಯಾರ್ಥಿ ನಿಲಯಗಳಿಗೆ ಕೃಷ್ಣ ನಗರದಲ್ಲಿ ಎರಡು ನಿವೇಶನ ನೀಡಲಾಗುವುದು. ಅಲ್ಲದೇ ಹಾಲಿ ಇರುವ ಹಾಸ್ಟೆಲ್‌ಗಳಿಗೆ ಮೂಲ ಸೌಲಭ್ಯಗಳ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಬೇಕು. ಪರಿಶೀಲನೆಗೆ ಬಂದಾಗ ವ್ಯವಸ್ಥೆಗಳು ಸರಿಯಾಗಿ ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಬಿಸಿಎಂ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಕಾರ್ಮಿಕ ಕಲ್ಯಾಣ ಇಲಾಖೆಗೆ ಈ ವರ್ಷ 606 ಜನ ಕಾರ್ಮಿಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಹಾಸನ ತಾಲ್ಲೂಕಿನಲ್ಲಿ ಅಜಿ ಸಲ್ಲಿಸಿದ 367 ಕ್ಷೌರಿಕರ ಪೈಕಿ 365 ಜನರಿಗೆ ₹18 ಲಕ್ಷ ಹಾಗೂ 440 ಅಗಸರ ಪೈಕಿ 439 ಮಂದಿಗೆ ₹ 29 ಲಕ್ಷ ಕೋವಿಡ್‌ ಲಾಕ್‌ಡೌನ್ ಪರಿಹಾರ ವಿತರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಚೀಕನಹಳ್ಳಿ, ಸಮುದ್ರವಳ್ಳಿ, ಹಂದಿನಕೆರೆ, ದೊಡ್ಡಕೊಂಡಗೊಳ, ಚಿಕ್ಕಕೊಂಡಗೊಳ ಗ್ರಾಮಗಳ ಸರ್ವೆ ನಂಬರ್‌ ದುರಸ್ತಿ ಮಾಡಿ ಈ ಗ್ರಾಮಗಳನ್ನು ಪೋಡಿ ಮುಕ್ತವನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ಕ್ಷೇತ್ರದಲ್ಲಿ 112 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. 11 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಇನ್ನು 50 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಆಗಬೇಕಿದೆ. 20 ಕಡೆ ಸರ್ಕಾರಿ ನಿವೇಶನ ಇದೆ. 30 ಕಡೆ ನಿವೇಶನಕ್ಕೆ ಶೀಘ್ರವೇ ಸ್ಥಳ ನಿಗದಿ ಮಾಡಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್‌ ಶಿವಶಂಕರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಲ್‌.ಯಶ್ವಂತ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.