ಶುಕ್ರವಾರ, ಮೇ 14, 2021
27 °C
ಕೊರೊನಾ ಸೋಂಕು ಸ್ಫೋಟವಾಗದಂತೆ ಸಹಕರಿಸಿ

ಆಮ್ಲಜನಕ, ಹಾಸಿಗೆ ಕೊರತೆಯಿಲ್ಲ: ಡಿ.ಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಹಾಸಿಗೆ, ಔಷಧ ಅಥವಾ ಆಮ್ಲಜನಕ ಪೂರೈಕೆಯಲ್ಲಿ ಯಾವುದೇ ಕೊರತೆ ಎದುರಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಚ್ಚು ಬೆಡ್‍ಗಳ ಅವಶ್ಯಕತೆ ಇದ್ದಲ್ಲಿ ಧರ್ಮಸ್ಥಳ ಮಂಜುನಾಥ ಆಯುರ್ವೇದಿಕ್ ಕಾಲೇಜು, ಜಿಲ್ಲಾ ತರಬೇತಿ ಸಂಸ್ಥೆ ಹಾಗೂ ಕೃಷಿ ಕಾಲೇಜಿನಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲಾಗುವುದು. ಸೋಂಕು ಸ್ಫೋಟವಾಗದಂತೆ ತಡೆಯಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಿಮ್ಸ್ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 309 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ 1,359 ಹಾಸಿಗೆಗಳನ್ನು ಇನ್ನೂ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಹಾಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಸರ್ಕಾರದ ಮಾರ್ಗಸೂಚಿ ದರಗಳ ಅನ್ವಯ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಅಗತ್ಯ ಲಸಿಕೆ ದಾಸ್ತಾನು ಇದ್ದು, 45 ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ  ತೀರ್ಮಾನಿಸಿದ್ದು, ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕೋರಿದರು.

‘ಹಿಮ್ಸ್ ಆಸ್ಪತ್ರೆಯಲ್ಲಿ 400 ಹಾಸಿಗೆ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಿದ್ದು, ಎಲ್ಲಾ ಹಾಸಿಗೆಗಳಿಗೂ ಆಮ್ಲಜನಕ ಪೂರೈಕೆ ಸೌಲಭ್ಯ ಕಲ್ಪಿಸಲಾಗಿದೆ. 60 ಐ.ಸಿ.ಯು ಹಾಸಿಗೆ ಹಾಗೂ 60 ವೆಂಟಿಲೇಟರ್‌ಗಳು ಲಭ್ಯವಿದೆ. ಹಿಮ್ಸ್‌ನಲ್ಲಿ 13 ಸಾವಿರ ಕಿಲೋ ಲೀಟರ್ ಸಾಮರ್ಥ್ಯದ ಆಮ್ಲಜನಕ ಪೂರೈಕೆ ಘಟಕ ಇದ್ದು, ನಿತ್ಯ 2,600 ಲೀಟರ್ ಆಮ್ಲಜನಕ ಖರ್ಚಾಗುತ್ತಿದೆ. ನಾಲ್ಕು ದಿನಗಳಿಗೊಮ್ಮೆ ದಾಬಾಸ್‍ಪೇಟೆಯಿಂದ ಆಮ್ಲಜನಕ ತಂದು ಹಿಮ್ಸ್ ಘಟಕಕ್ಕೆ ಭರ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ ತಿಳಿಸಿದರು.

ಪಿಪಿಐ ಕಿಟ್, ರೆಮ್‍ಡಿಸಿವಿರ್ ಚುಚ್ಚುಮದ್ದು ಹಾಗೂ ಔಷಧಿಗಳು ನಿರಂತರವಾಗಿ ಪೂರೈಕೆಯಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಸೋಂಕಿತರಿಗೆ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.

ರೋಗ ತೀವ್ರತರವಾಗಿ ಉಲ್ಬಣಗೊಂಡ ನಂತರ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಒಂದಕ್ಕಿಂತಲೂ ಹೆಚ್ಚು ಬಗೆಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಮುಂಜಾಗ್ರತ ಕ್ರಮವಹಿಸದೆ ಇರುವುದರಿಂದ ಇಂತಹ ಸಮಸ್ಯೆ ಹೆಚ್ಚಾಗುತ್ತಿದೆ. ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ತಪಾಸಣೆಗೆ ಒಳಪಟ್ಟು, ಸೂಕ್ತ ಚಿಕಿತ್ಸೆ ಪಡೆದರೆ ಪರಿಸ್ಥಿತಿ ಗಂಭೀರಗೊಳ್ಳುವುದನ್ನು ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು