ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಪರಿಹಾರ: ಹೋರಾಟಕ್ಕೆ ಸಜ್ಜು

ಹೆಬ್ಬನಹಳ್ಳಿಯಲ್ಲಿ ದುರಸ್ತು ಆಗದ ಭೂಮಿಯಲ್ಲಿ ಎತ್ತಿನಹೊಳೆ ಸುರಂಗ ಕಾಮಗಾರಿ
Last Updated 12 ಫೆಬ್ರುವರಿ 2021, 2:50 IST
ಅಕ್ಷರ ಗಾತ್ರ

ಸಕಲೇಶಪುರ: ‘ಹೇಗೋ ಕೂಲಿ ನಾಲಿ ಮಾಡಿ, ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡ್ತಾ ಇದ್ವಿ, ಎತ್ತಿನಹೊಳೆ ಯೋಜನೆಯಿಂದ ಬದುಕೇ ಅತಂತ್ರ ವಾಗಿದೆ’ ಎಂದು ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದ ಹುಚ್ಚಯ್ಯ, ಚಂದ್ರು, ಸದಾಶಿವ ಸೇರಿದಂತೆ ಅನೇಕ ಕೂಲಿ ಕಾರ್ಮಿಕರು ‌ತಮ್ಮ ಸಂಕಟ ಹೇಳಿಕೊಂಡರು.

ಯೋಜನೆಯಿಂದಾಗಿ ಇದ್ದ ಭೂಮಿ ಕಳೆದುಕೊಂಡು ಪರಿಹಾರವೂ ಇಲ್ಲದಂತಾಗಿದೆ. ಈ ಗ್ರಾಮದ ಸರ್ವೆ ನಂಬರ್ 86ರಲ್ಲಿ ಎತ್ತಿನಹೊಳೆ ಯೋಜನೆ ನೀರು ಸರಬರಾಜು ಮಾಡುವ ಸುರಂಗ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 80 ಎಕರೆ ಸರ್ಕಾರಿ ಗೋಮಾಳ ಇದ್ದು, 45 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ಈ ಹಿಂದೆಯೇ ಮಂಜೂರಾತಿ ನೀಡಿ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಹಕ್ಕು ಪತ್ರ ಪಡೆದವರೆಲ್ಲರೂ ಮನೆ ಕಟ್ಟಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಅವರವರ ಹೆಸರಿಗೆ ದುರಸ್ತು ಆಗಿಲ್ಲ. ದುರಸ್ತು ಆಗದೆ ಇರುವುದರಿಂದ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಗಗನಕುಸುಮವಾಗಿದೆ.

ಟ್ರೈಪಾರ್ಟಿಯೇಟ್ ಒಪ್ಪಂದವೇ ಮುಳುವಾಗಿದೆ: ಸುರಂಗ ಕಾ‌ಮಗಾರಿ ಮಾಡುವ ಮುನ್ನ ವಿಶ್ವೇಶ್ವರಯ್ಯ ಜಲ ನಿಗಮ, ಶಂಕರ್ ನಾರಾಯಣ ಕನ್‌ಸ್ಟ್ರಕ್ಷನ್‌ ಹಾಗೂ ಭೂಮಿಯ ಮಾಲೀಕರ ನಡುವೆ ಟ್ರೈಪಾರ್ಟಿಯೇಟ್ ಒಪ್ಪಂದ ಆಗಿದೆ. ಈ ಒಪ್ಪಂದದಲ್ಲಿ ಭೂ ಮಾಲೀಕರಿಗೆ ₹ 50 ಸಾವಿರ, ₹ 1 ಲಕ್ಷ ಗುಡ್‌ವಿಲ್‌ ನೀಡಿ, ಸರ್ಕಾರದಿಂದ ಪರಿಹಾರ ಬರುವವರೆಗೂ ಯೋಜನೆಯ ಕಾಮಗಾರಿ ನಡೆಸುವುದಕ್ಕೆ ಯಾವುದೇ ರೀತಿ ಅಡ್ಡಿ ಮಾಡುವುದಿಲ್ಲ ಎಂದು ಒಪ್ಪಂದ ಪತ್ರಕ್ಕೆ ರೈತರಿಂದ ಸಹಿ ಪಡೆದಿದ್ದಾರೆ.

‘ಸರ್ಕಾರದ ಪರಿಹಾರ ದೊರೆಯಬೇಕಾದರೆ, ನಿಮ್ಮದು ಇದೇ ಜಾಗ ಎಂಬುದಕ್ಕೆ ದುರಸ್ತು ಆಗಿರುವ ದಾಖಲೆ ಕೊಡಿ ಎನ್ನುತ್ತಿದ್ದಾರೆ. ಈ ಸರ್ವೇ ನಂಬರ್‌ನಲ್ಲಿ ಹಕ್ಕುಪತ್ರ ಪಡೆದಿರುವ ಎಲ್ಲರೂ ಒಟ್ಟಿಗೆ ದುರಸ್ತಿಗೆ ಅರ್ಜಿ ಸಲ್ಲಿಸಬೇಕು. ತೋಟ, ಗದ್ದೆಯಲ್ಲಿ ಕೂಲಿ ಮಾಡಿಕೊಂಡು ಸರಿಯಾದ ಸೂರು ಇಲ್ಲದೆ ಬದುಕುತ್ತಿರುವ ಕೆಲವರು ಮೂಲ ದಾಖಲೆಗಳನ್ನು ಕಳೆದುಕೊಂಡಿ ದ್ದಾರೆ. ದುರಸ್ತುಗಾಗಿ ಕಂದಾಯ ಹಾಗೂ ಸರ್ವೇ ಇಲಾಖೆಗೆ ವರ್ಷದಿಂದ ಅಲೆಯುತ್ತಿದ್ದೇವೆ. ಇತ್ತ ದಾಖಲೆ ಹೊಂದಿಸುವುದಕ್ಕೂ ಆಗುತ್ತಿಲ್ಲ, ಅತ್ತ ಕಳೆದುಕೊಂಡ ಭೂಮಿಗೆ ಪರಿಹಾರವೂ ದೊರೆಯುತ್ತಿಲ್ಲ ಏನು ಮಾಡಬೇಕು ಎಂದು ದಿಕ್ಕೇ ತೋಚದಾಗಿದೆ’ ಎಂದು ಹುಚ್ಚಯ್ಯ ‘ಪ್ರಜಾವಾಣಿ’ಗೆ ಹೇಳುತ್ತಾರೆ.

ಮಧ್ಯಸ್ಥಿಕೆ ವಹಿಸಿದ್ದ ಬೆಳೆಗಾರ ಸಂಘವೂ ನೆರವಿಗಿಲ್ಲ: ‘ಕಾಮಗಾರಿಗೆ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಒಪ್ಪಂದಕ್ಕೆ ಸಹಿ ಮಾಡಿರಲಿಲ್ಲ. ಆದರೆ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕೆಲ ಮುಖಂಡರು, ಅಧಿಕಾರಿಗಳು ಹಾಗೂ ಗುತ್ತಿಗೆದಾರ ರೊಂದಿಗೆ ಬಂದು ಕಾಮಗಾರಿಗೆ ಅಡ್ಡಿ ಮಾಡಬೇಡಿ, ಸರ್ಕಾರದಿಂದ ಒಳ್ಳೆಯ ಪರಿಹಾರ ದೊರೆಯುತ್ತೆ ಎಂದು ತಲೆ ಸವರಿ ಸಹಿ ಹಾಕಿಸಿದ್ರು, ಈಗ ಅವರು ನೆರವಿಗೆ ಬರುತ್ತಿಲ್ಲ’ ಎಂದು ಕುಮಾರ್ ಆರೋಪಿಸುತ್ತಾರೆ.

‘ಹೆಬ್ಬನಹಳ್ಳಿ ಸರ್ವೆ ನಂ. 86ರಲ್ಲಿ ಸರ್ಕಾರದಿಂದ ಭೂಮಿ ಮಂಜೂರಾಗಿ ರುವವರು, ದುರಸ್ತಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಮಂಜೂರಿದಾರರ ದಾಖಲೆಗಳು ಕಾಣೆಯಾದ ಪ್ರಕರಣ ಇರುವುದರಿಂದ ಶೀಘ್ರ ವಿಲೇವಾರಿಗೆ ಸಾಧ್ಯವಾಗುತ್ತಿಲ್ಲ. ಕಾನೂನು ವ್ಯಾಪ್ತಿಯೊಳಗೆ ಒಂದಲ್ಲಾ ಒಂದು ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು’ ಎಂದು ತಹಶೀಲ್ದಾರ್ ಎಚ್‌.ಬಿ. ಜೈಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT