ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳು ಸಂಚಾರ ನಿಷೇಧ ಅಗತ್ಯವಿಲ್ಲ

ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್‌ ಶೆಟ್ಟಿ ಅಭಿಪ್ರಾಯ
Last Updated 22 ಆಗಸ್ಟ್ 2018, 17:20 IST
ಅಕ್ಷರ ಗಾತ್ರ

ಸಕಲೇಶಪುರ: ‘ಕರಾವಳಿ ಹಾಗೂ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿ 4 ತಿಂಗಳು ಸಂಚಾರ ನಿಷೇಧ ಮಾಡುವಷ್ಟು ಹದಗೆಟ್ಟಿಲ್ಲ’ ಎಂದು ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್‌ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಧ್ಯದ ಪರಿಸ್ಥಿತಿಯಲ್ಲಿ ಚಾರ್ಮುಡಿ ಘಾಟ್‌ ಮಾರ್ಗದ ಪ್ರಯಾಣಕ್ಕಿಂತಲೂ ಶಿರಾಡಿ ಘಾಟ್‌ ಮಾರ್ಗದ ಸಂಚಾರವೇ ಹೆಚ್ಚು ಸುರಕ್ಷಿತ. ದೋಣಿಗಾಲ್‌ನಿಂದ ಗುಂಡ್ಯಾವರೆಗೆ ಸಮಿತಿ ಸದಸ್ಯರೊಂದಿಗೆ ರಸ್ತೆಯನ್ನು ವೀಕ್ಷಣೆ ಮಾಡಿಕೊಂಡು ಬಂದಿದ್ದು, ಅಲ್ಲಲ್ಲಿ ರಸ್ತೆಗೆ ಸಣ್ಣಪುಟ್ಟ ಪ್ರಮಾಣದಲ್ಲಿ ಮಣ್ಣು ಕುಸಿತ ಉಂಟಾಗಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳಿಂದ ತ್ವರಿತವಾಗಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆದ್ದಾರಿಯಲ್ಲಿ ಕೆಂಪುಹೊಳೆ ಬದಿಯಲ್ಲಿ ಕೆಲವೆಡೆ ಭೂ ಕುಸಿತ ಉಂಟಾಗಿದ್ದು, ತುರ್ತು ಕ್ರಮಕೈಗೊಂಡು ಮರಳಿನ ಚೀಲಗಳಿಂದ ತಡೆಗೋಡೆ ನಿರ್ಮಿಸಿ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲದೇ, ಘಾಟ್‌ನಲ್ಲಿ ಮಳೆಯ ಪ್ರಮಾಣ ಸಹ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಇನ್ನೂ ನಾಲ್ಕು ತಿಂಗಳು ವಾಹನ ಸಂಚಾರ ಬಂದ್‌ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವರು ಹೇಳಿಕೆ ನೀಡಿರುವುದು ಈ ಮಾರ್ಗದಲ್ಲಿ ಪ್ರಯಾಣ ಮಾಡುವವರಿಗೆ ಸರಕು ಸಾಗಣೆ ಮಾಡುವವರಿಗೆ ಆತಂಕ ಉಂಟು ಮಾಡಿದೆ’ ಎಂದರು.

‘ಮಂಗಳೂರು–ಬೆಂಗಳೂರು ನಡುವೆ ಮಡಿಕೇರಿ ಮಾರ್ಗದ ಸಂಪಾಜೆ ಮಾರ್ಗ, ಬಿಸಿಲೆ ಘಾಟ್‌ ಮಾರ್ಗ ಎಲ್ಲವೂ ಬಂದ್‌ ಆಗಿರುವುದರಿಂದ ಉಂಟಾಗಿರುವ ಸಮಸ್ಯೆ ಹೇಳ ತೀರದಾಗಿದೆ. ಈ ಭಾಗದ ಸಾವಿರು ಮಕ್ಕಳು ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ವ್ಯಾಸಂಗ ಮಾಡುತ್ತಿದ್ದಾರೆ. ಮಂಗಳೂರು ಬಂದರು ಹಾಗೂ ಈ ಭಾಗಕ್ಕೆ ಸರಕು, ದಿನ ನಿತ್ಯದ ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗಿದೆ. ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಬಸ್ಸುಗಳು ಹಾಗೂ ಲಘು ವಾಹನಗಳ ಸಂಚಾರಕ್ಕೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಂಚಾರ ಆರಂಭ ಮಾಡಿದರೆ ಅಪಘಾತಗಳು ಉಂಟಾಗುತ್ತವೆ ಎಂಬ ಕಾರಣವನ್ನು ಜನಪ್ರತಿನಿಧಿಗಳು ಹೇಳುತ್ತಾರೆ. ಘಾಟ್‌ ಮಾರ್ಗದಲ್ಲಿ ವೇಗ ಮಿತಿಯನ್ನು ಅಳವಡಿಸಬೇಕು. ಸುರಕ್ಷಿತವಾಗಿ ಚಾಲನೆ ಮಾಡಿದರೆ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ. ಸುಮಾರು 26 ಕಿ.ಮೀ. ಕಾಂಕ್ರೀಟ್‌ ರಸ್ತೆ ವಿಶಾಲವಾಗಿದೆ ಆದ್ದರಿಂದ ಶೀಘವೇ ಸಂಚಾರ ಆರಂಭಿಸುವುದು ಉತ್ತಮ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT