ಶುಕ್ರವಾರ, ಜೂನ್ 18, 2021
24 °C
ರೋಗಿಗಳಿಂದ ಅಧಿಕ ಹಣ ಪಡೆದ ಅರೋಪ

ರೋಗಿಗಳಿಂದ ಅಧಿಕ ಹಣ ಪಡೆದ ಅರೋಪ: ಹಾಸನದ 4 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸಿ.ಟಿ ಸ್ಕ್ಯಾನ್‌ಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕು ಖಾಸಗಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ನೋಟಿಸ್ ಜಾರಿ ಮಾಡಿದ್ದಾರೆ.

ಹಾಸನ ನಗರದ ಯುನಿಟಿ ಸ್ಕ್ಯಾನ್ ಸೆಂಟರ್, ಜನಪ್ರಿಯ ಆಸ್ಪತ್ರೆಯ ಸಿ.ಟಿ ಸ್ಕ್ಯಾನ್, ಎಸ್‌.ಎಸ್‌.ಎಂ ಆಸ್ಪತ್ರೆ ಸಿ.ಟಿ ಸ್ಕ್ಯಾನ್, ಚನ್ನರಾಯಪಟ್ಟಣ ನಗರದ ಹೈಟೆಕ್ ಸ್ಕ್ಯಾನಿಂಗ್‌ ಸೆಂಟರ್‌ಗೆ ನೋಟಿಸ್ ನೀಡಲಾಗಿದೆ.

ಕೋವಿಡ್‌ ರೋಗಿಗಳಲ್ಲಿ ಶ್ವಾಸಕೋಶದ ಪ್ರಮಾಣ ತಿಳಿಯಲು ಹೆಚ್ಚಿನ ರೋಗಿಗಳಿಗೆ ಸಿ.ಟಿ ಸ್ಕ್ಯಾನ್‌ ಮತ್ತು ಎಕ್ಸ್‌ರೇ ಮಾಡಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳು ಜರನ್ನು ಶೋಷಣೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ರಾಜ್ಯ ಸರ್ಕಾರ ಕೋವಿಡ್ ಸಂಬಂಧಿತ ಸಿ.ಟಿ ಸ್ಕ್ಯಾನಿಂಗ್‌ಗೆ ಬಿಪಿಎಲ್ ಕಾರ್ಡ್‌ದಾರರಿಗೆ ₹1,500 ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ₹ 2,500 ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಹಾಸನ ತಹಶೀಲ್ದಾರ್ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡ ಹಾಸನ ಮತ್ತು ಚನ್ನರಾಯಪಟ್ಟಣ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ನಡೆಸಿ, ದಾಖಲೆಗಳ ಪರೀಶಿಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು. ದರ ಪಟ್ಟಿ ಪ್ರದರ್ಶನ ಮಾಡದಿರುವುದು, ನಿಗದಿತ ದರಕ್ಕಿಂತ ಹೆಚ್ಚು ಪಟ್ಟು ಹಣ ಪಡೆದಿರುವುದು, ರಶೀದಿ ಪುಸ್ತಕ ಹಾಜರು ಪಡಿಸದಿರುವುದು ಮತ್ತು ರಶೀದಿ ಪುಸ್ತಕದಲ್ಲಿರುವ ಬಗ್ಗೆ ರೋಗಿ ಹೆಸರು ಮಾತ್ರ ನಮೂದಿಸಿ ವಿಳಾಸ ಅಥವಾ ದೂರವಾಣಿ ಸಂಖ್ಯೆ ನಮೂದಿಸದಿರುವುದನ್ನು ವರದಿಯಲ್ಲಿ ಉಲ್ಲೇಖಿಸಿತ್ತು.

‘ಈ ವರದಿ ಅನ್ವಯ ಈ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸದೆ ಹಾಗೂ ಕೋವಿಡ್-19 ಸಂಕಷ್ಟ ಕಾಲದಲ್ಲಿ ಸಾರ್ವಜನಿಕರು, ರೋಗಿಗಳಿಂದ ಹೆಚ್ಚು ಹಣ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನೋಟಿಸ್‌ ಜಾರಿ ಮಾಡಿ, ನೋಟಿಸ್‌ ತಲುಪಿದ 24 ಗಂಟೆಯೊಳಗೆ ಖುದ್ದು ಹಾಜರಾಗಿ ಉತ್ತರವನ್ನು ನೀಡಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಹಾಗೂ ಕರ್ನಾಟಕ ಪ್ರೈವೆಟ್‌ ಮೆಡಿಕಲ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆ 2007ರ ಪ್ರಕಾರ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಪ್ರಕರಣಗಳಲ್ಲಿ ಎಚ್.ಆರ್.ಸಿಟಿ ಹಾಗೂ ಡಿಜಿಟಲ್ ಎಕ್ಸ್‌ರೇಗಳನ್ನು ರೋಗ ನಿರ್ಣಯ ಸಾಧನವಾಗಿ ಬಳಸಲಾಗುತ್ತಿದೆ. ರಾಜ್ಯದ ಎಲ್ಲಾ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್, ಖಾಸಗಿ ವೈದ್ಯಕೀಯ ಸಂಸ್ಥೆಗಳು, ಸ್ಕ್ಯಾನಿಂಗ್ ಸೆಂಟರ್ ಇತ್ಯಾದಿಗಳಲ್ಲಿ ಕೋವಿಡ್ ಪ್ರಕರಣಗಳಿಗೆ ನಡೆಸುವ ಎಚ್.ಆರ್.ಸಿಟಿ ಹಾಗೂ ಡಿಜಿಟಲ್ ಎಕ್ಸ್‌ರೇಗೆ ಸರ್ಕಾರ ನಿಗದಿ
ಪಡಿಸಿರುವ ದರ ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.