ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ

ಪಾಳ್ಯ ಹೋಬಳಿ ಕನ್ನಡ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪರಮೇಶ್ ಆತಂಕ
Last Updated 23 ಡಿಸೆಂಬರ್ 2018, 17:12 IST
ಅಕ್ಷರ ಗಾತ್ರ

ಆಲೂರು: ‘ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಸಮ್ಮೇಳನಾಧ್ಯಕ್ಷ ಪರಮೇಶ್ ಮಡಬಲು ಆತಂಕ ವ್ಯಕ್ತಪಡಿಸಿದರು.

ಪಾಳ್ಯದಲ್ಲಿ ಭಾನುವಾರ ನಡೆದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನೂರಾರು ಯೋಜನೆಗಳನ್ನು ರೂಪಿಸಿದ್ದರೂ ಸರ್ಕಾರಿ ಶಾಲೆ ಕಡೆ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಕನ್ನಡ ನಾಡು, ನುಡಿ ಸಂರಕ್ಷಿಸಲು ಪ್ರಯತ್ನಿಸಬೇಕು. ಕರುನಾಡಲ್ಲೇ ಜನ್ಮ ತಳೆದ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಪರಭಾಷೆ ಅಭಿಮಾನ ಇವೆಲ್ಲಾ ಮಾತೃಭಾಷೆ ಮೇಲೆ ಸವಾರಿ ಮಾಡುತ್ತಿರುವುದು ಶೋಚನೀಯ ಎಂದರು.

ಕನ್ನಡ ಭಾಷೆ ಉಳಿಸುವ ಜವಾಬ್ದಾರಿಯನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು. ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೆ ಸರ್ಕಾರಿ ನೌಕರಿಯಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಆಲೂರು ತಾಲ್ಲೂಕಿನಲ್ಲಿ ಮಾನವ ಮತ್ತು ಕಾಡಾನೆ ನಡುವೆ ನಿರಂತರ ಸಂಘರ್ಷ ನಡೆಯುತ್ತಿದ್ದು, ನೂರಾರು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು. ತಾಲ್ಲೂಕಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ರೈತರ ಬದುಕಿಗೆ ಆಶಾಕಿರಣವಾಗಬೇಕು ಎಂದು ಹೇಳಿದರು.

ಆಲೂರು ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದರ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು. ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು. ಶುದ್ಧ ಕುಡಿಯುವ ನೀರನ್ನು ನಗರ ಮತ್ತು ಗ್ರಾಮೀಣ ಭಾಗಗಳಿಗೆ ಒದಗಿಸಬೇಕು. ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು, ನಮ್ಮ ಕೆಲ ಮೂಲ ಸಂಸ್ಕೃತಿಯನ್ನು ನೆಲ, ಜಲ, ಭಾಷೆ, ಸಂಸ್ಕೃತಿಯ ಮಹತ್ವವನ್ನು ವಿವರಿಸುತ್ತವೆ ಎಂದು ತಿಳಿಸಿದರು.

ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಸ್ಥಳೀಯ ಸಾಹಿತಿ ಕೆಂಪೇಗೌಡರ ಚರಿತ್ರೆಯನ್ನು ಪ್ರಕಟಿಸಿರುವುದು ಶ್ಲಾಘನೀಯ. ಸಾಹಿತ್ಯ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಯುವಜನತೆ ಪ್ರಯತ್ನಿಸಬೇಕಾಗಿದೆ ಎಂದು ತಿಳಿಸಿದರು.

ಪಾಳ್ಯ ಪಿಡಿಒ ರಂಗನಾಥ್, ರಾಷ್ಟ್ರಧ್ವಜ, ಕಸಾಪ ಪಾಳ್ಯ ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್ ಮಂಜೇಗೌಡ ನಾಡಧ್ವಜ ಮತ್ತು ಕಸಾಪ ಧ್ವಜವನ್ನು ತಾಲ್ಲೂಕು ಘಟಕದ ಅಧ್ಯಕ್ಷ ಗಂಗರ ಶ್ರೀಕಾಂತ್ ನೆರವೇರಿಸಿದರು.

ಬೆಳ್ಳಿ ಮಾದರಿ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ ಪರಮೇಶ್ ಮಡಬಲು ಅವರನ್ನೊಳಗೊಂಡಂತೆ ತಾಲ್ಲೂಕು ಘಟಕದ ಅಧ್ಯಕ್ಷ ಗಂಗರ ಶ್ರೀಕಾಂತ್, ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ವಾದ್ಯವೃಂದ, ಕಂಸಾಳೆ ಹಾಘೂ ಹಲವು ಕಲಾ ತಂಡಗಳು ನೃತ್ಯ ತಂಡಗಳು ಮೆರವಣಿಗೆಗೆ ಮೆರುಗು ತಂದವು.

ಕ.ಸಾ.ಪ ಜಿಲ್ಲಾ ಘಟಕದ ಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜನೆ ಮಾಡುವುದರ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಇಂದಿನ ಜನತೆಗೆ ಪರಿಚಯಿಸುತ್ತಿರುವುದು ಉತ್ತಮ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಕಸಾಪ ಜಿಲ್ಲಾ ಘಟಕದ ಗೌರವಾಧ್ಯಕ್ಷ ರವಿ ನಾಕಲಗೂಡು, ಇಲ್ಲಿ ಆಯೋಜಿಸಿರುವ ಸಮ್ಮೇಳನ ಜಿಲ್ಲಾಮಟ್ಟದ ಸಮ್ಮೇಳನಕ್ಕಿಂತ ಸುಂದರವಾಗಿದೆ. ಗ್ರಾಮೀಣ ಭಾಗದ ಶಿಕ್ಷಕ ವೃತ್ತಿಯಲ್ಲಿರುವ ಸಾಹಿತಿಯನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಪ್ರಶಂಸನೀಯ, ಶಿಕ್ಷಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ಕೆ ಶಾರದಾಂಬಾ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮದನಗೌಡ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ್ ನಾಕಲಗೂಡು, ಸಣ್ಣ ಪತ್ರಿಕೆಯ ರಾಜ್ಯಾಧ್ಯಕ್ಷ ಜಿ.ಆರ್. ಕೆಂಚೇಗೌಡ, ತಾ.ಪಂ ಸದಸ್ಯರಾದ ಸಿ.ವಿ ಲಿಂಗರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಂದೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲೇಶಪ್ಪ, ಬಿಇಒ ಹೊನ್ನೇಶ್ ಕುಮಾರ್, ಪಾಳ್ಯ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಶಿಕ್ಷಕರಾದ ವೇದಾವತಿ, ಶೋಭಾ, ಮಧುರ, ಸೋಮನಾಯಕ್, ಫಾತೀಮಾ ಬೇಗಂ, ಕದಾಳು ರಾಜಪ್ಪಗೌಡ, ಅಜ್ಜೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT