ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ವಶದಲ್ಲಿ ಅವಿನಾಶ್ ಸಾವು: ನ್ಯಾಯಾಧೀಶರಿಂದ ಖುದ್ದು ವಿಚಾರಣೆ

ಹಲವು ಅನುಮಾನ
Last Updated 27 ಏಪ್ರಿಲ್ 2019, 13:47 IST
ಅಕ್ಷರ ಗಾತ್ರ

ಹಾಸನ: ಕಳ್ಳತನದ ಆರೋಪದಡಿ ಪೊಲೀಸರ ವಶದಲ್ಲಿದ್ದ ಚನ್ನರಾಯಪಟ್ಟಣ ತಾಲ್ಲೂಕು ‌ಅಗ್ರಹಾರ ಬೆಳಗುಲಿ ಗ್ರಾಮದ ಯುವಕ ಅವಿನಾಶ್ (28) ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ಮೃತನ ಎದೆ ಭಾಗ ಹಾಗೂ ಇತರೆಡೆ ಥಳಿಸಿದ ರೀತಿಯ ಗುರುತುಗಳಿದ್ದು, ಯುವಕನ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಈ ಬಗ್ಗೆ ಖುದ್ದು ಚನ್ನರಾಯಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಾಗರ್‌ ಜಿ. ಪಾಟೀಲ್‌ ಅವರೇ ವಿಚಾರಣೆ ನಡೆಸಿದರು.

ಶನಿವಾರ ಬೆಳಿಗ್ಗೆನುಗ್ಗೇಹಳ್ಳಿ ಪೊಲೀಸ್ ಠಾಣೆ ಎದುರು ಗ್ರಾಮಸ್ಥರು ಹಾಗೂ ಮೃತ ಸಂಬಂಧಿಕರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಉಂಟಾಯಿತು. ಗ್ರಾಮಸ್ಥರ ಜತೆ ಡಿವೈಎಸ್‌ಪಿ ಶಶಿಧರ್‌ ಮಾತುಕತೆ ನಡೆಸಿ, ಘಟನೆ ಬಗ್ಗೆ ಮಾಹಿತಿ ನೀಡಿದರು.

‘ಪೊಲೀಸ್‌ ವಶದಲ್ಲಿದ್ದಾಗಲೇ ಅವಿನಾಶ್ ಮೃತಪಟ್ಟ’ ಎಂಬ ಪೋಷಕರ ಆರೋಪ ಒಂದಡೆಯಾದರೆ, ‘ಅವಿನಾಶ್‌ ಬೆವರುತ್ತಾ, ಬಾಯಲ್ಲಿ ಜೊಲ್ಲು ಸುರಿಸುತ್ತಾ ನಡುಗಲಾರಂಭಿಸಿದ. ಅದಾದ ಕೆಲವೇ ಹೊತ್ತಿನಲ್ಲಿ ಅಸುನೀಗಿದ’ ಎಂದು ನುಗ್ಗೇಹಳ್ಳಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮನೆ ಕಳ್ಳತನ ಆರೋಪದಡಿ ಅವಿನಾಶ್‌ ಪೊಲೀಸರಿಗೆ ಬೇಕಾಗಿದ್ದ. ಈತನ ಜೊತೆ ಪವನ್ ಎಂಬಾತ ಸೇರಿದ್ದರಿಂದ ಇಬ್ಬರಿಗೂ ಹಲವು ಬಾರಿ ವಾರೆಂಟ್ ಜಾರಿ ಮಾಡಿದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.

ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಈ ಇಬ್ಬರು ಏ. 26 ರಂದು ಚನ್ನರಾಯಪಟ್ಟಣಕ್ಕೆ ಬರುತ್ತಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ನುಗ್ಗೇಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ಬಳಿ ಮಫ್ತಿಯಲ್ಲಿ ಕಾಯುತ್ತಿದ್ದಾಗ, ಇಬ್ಬರೂ ಸಿಕ್ಕಿ ಬಿದ್ದಿದ್ದರು.

ಹೀಗೆ ಇಬ್ಬರು ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಅವಿನಾಶ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.

ಆರಂಭದಲ್ಲಿ ಮೃತನ ಸಂಬಂಧಿಕರು, ‘ಪೊಲೀಸರು ಚಿತ್ರ ಹಿಂಸೆ ನೀಡಿದ್ದಾರೆ. ಅದನ್ನು ತಾಳಲಾರದೆ ಮೃತಪಟ್ಟಿದ್ದಾನೆ. ಪ್ರಕರಣ ಮುಚ್ಚಿ ಹಾಕಲು ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ನುಗ್ಗೇಹಳ್ಳಿ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಧು ಅವರು, ‘ಅವಿನಾಶ್ ಪೊಲೀಸ್ ವಾಹನ ಏರುತ್ತಿದ್ದಂತೆಯೇ ಬೆವರಲಾರಂಭಿಸಿದ. ಅದಾದ ಕೆಲವೇ ಹೊತ್ತಿನಲ್ಲಿ ಬಾಯಲ್ಲಿ ಜೊಲ್ಲು ಸುರಿಯಲಾರಂಭಿಸಿ ನಡುಗುತ್ತಾ ಕುಸಿದು ಬಿದ್ದ. ಕೂಡಲೇ ಆತನನ್ನು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ಮೇಲಧಿಕಾರಿಗೆ ನೀಡಿರುವ ಲಿಖಿತ ದೂರಿನಲ್ಲಿ ವಿವರಿಸಿದ್ದಾರೆ.

ಅವಿನಾಶ್ ಮೃತದೇಹವನ್ನು ರಾತ್ರೋರಾತ್ರಿ ಹಾಸನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತರಲಾಯಿತು. ಈ ನಡುವೆ ಇದು ಲಾಕಪ್ ಡೆತ್ ಎಂಬ ಗಂಭೀರ ಆರೋಪ ಕೇಳಿ ಬಂದ ಕಾರಣ ನ್ಯಾಯಾಧೀಶರೇ ಶವಾಗಾರಕ್ಕೆ ಬಂದು ಮೃತ ಯುವಕನ ಸಂಬಂಧಿಕರನ್ನು ಪೊಲೀಸರ ಸಮಕ್ಷಮದಲ್ಲಿ ಸುಮಾರು 3 ತಾಸು ವಿಚಾರಣೆಗೆ ಒಳಪಡಿಸಿದರು.

ಮತ್ತೊಂದೆಡೆ, ‘ಯುವಕನ ಕಡೆಯವರಿಗೆ ಹಣಕಾಸಿನ ಆಮಿಷವೊಡ್ಡಿ ಸಾವಿನ ನಿಜ ಕಾರಣವನ್ನು ಮುಚ್ಚಿ ಹಾಕಲಾಗಿದೆ’ ಎಂಬ ಮಾತುಗಳೂ ಕೇಳಿ ಬರುತ್ತಿದೆ.

ಅವಿನಾಶ್ ಸಾವಿನ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್‌, ‘ಕಸ್ಟೋಡಿಯನ್ ಡೆತ್ ಎಂದು ಪ್ರಕರಣ ದಾಖಲಾಗಿದ್ದು, ಹೊಳೆನರಸೀಪುರ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಚನ್ನರಾಯಪಟ್ಟಣ ನ್ಯಾಯಾಧೀಶರ ಎದುರು ಮೃತನ ಸಂಬಂಧಿಕರು ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೂ ತನಿಖೆ ಮುಂದುವರಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT