ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಭೀತಿ: ತಪಾಸಣೆ ಹೆಚ್ಚಳ

ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕು: ಪೋಷಕರ ಆತಂಕ
Last Updated 6 ಡಿಸೆಂಬರ್ 2021, 4:58 IST
ಅಕ್ಷರ ಗಾತ್ರ

ಹಾಸನ: ಕೊರೊನಾ ವೈರಸ್‌ನ ರೂಪಾಂತರಿ ತಳಿ ರಾಜ್ಯಕ್ಕೆ ಓಮೈಕ್ರಾನ್‌ ವೈರಾಣು ಕಾಲಿಟ್ಟಿ ಹೊತ್ತಿನಲ್ಲೇ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಉಂಟು ಮಾಡಿದೆ.

ಜಿಲ್ಲಾಡಳಿತ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಸಮನ್ವಯ ಸಾಧಿಸಿದೆ. ಮೂರನೇ ಅಲೆ ಬಾಧಿಸಿದರೂ ಜೀವಕ್ಕೆ ಹಾನಿಯಾಗದಂತೆ ಸಕಲ ಮುನ್ನೆಚ್ಚರಿಕೆ ಜತೆಗೆ ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳ ಅನುಷ್ಠಾನಕ್ಕೂ ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಜಿಲ್ಲೆಯಲ್ಲಿ ಪ್ರಸ್ತುತ 91 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಸಂಖ್ಯೆ ನಿಧಾನ ಗತಿಯಲ್ಲಿ ಏರಿಕೆ ಆಗುತ್ತಲೇ ಇದೆ. ಕಟ್ಟುನಿಟ್ಟಿನ ಕ್ರಮದ ಜತೆ ತಪಾಸಣೆಯನ್ನು ಹೆಚ್ಚು ಮಾಡಲಾಗಿದೆ. ನಿತ್ಯ ಕೋವಿಡ್‌ ಪರೀಕ್ಷೆಯನ್ನು ಐದು ಸಾವಿರಕ್ಕೇರಿದೆ.

ಮಾರುಕಟ್ಟೆ, ಮದುವೆ, ಜಾತ್ರೆ, ಸಮಾರಂಭ, ಸಭೆ ಸೇರಿದಂತೆ ಎಲ್ಲಾ ಕಡೆಯೂ ಜನರು ಹೆಚ್ಚಿನ ಸಂಖ್ಯೆಯಲ್ಲೇ ಭಾಗವಹಿಸುತ್ತಿದ್ದಾರೆ. ಬಹುತೇಕರು ಈಗ ಮಾಸ್ಕ್‌ ಧರಿಸುವುದನ್ನೇ ಮರೆತಿದ್ದಾರೆ.

ವಿದೇಶದಿಂದ ಜಿಲ್ಲೆಗೆ ಬರುವ ಪ್ರತಿಯೊಬ್ಬರು 72 ಗಂಟೆ ಮುಂಚಿನ ಕೋವಿಡ್‌ ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿಯ ಪ್ರಮಾಣ ಪತ್ರ ಹೊಂದಿರಬೇಕು. ಏಳು ದಿನ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಬಳಿಕ ಮತ್ತೊಮ್ಮೆ ತಪಾಸಣೆಗೆ ಒಳಗಾಗಬೇಕು. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಳೆದ 15 ದಿನಗಳಲ್ಲಿ ಶೇ 0.21, 7 ದಿನಗಳಲ್ಲಿ 0.20 ಇತ್ತು.

‘ಶಾಲಾ, ಕಾಲೇಜು, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ. ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ಚನ್ನರಾಯಪಟ್ಟಣದ ಶಾಲೆಯಲ್ಲಿ ಹದಿಮೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿತ್ತು. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದ ಮೇಲೆ ನಿತ್ಯವೂ ನಿಗಾ ವಹಿಸಲಾಗುವುದು. ರ‍್ಯಾಂಡಮ್‌ ತಪಾಸಣೆ ನಡೆಸಲಾಗುತ್ತಿದೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್ ತಿಳಿಸಿದರು.

‘ಮೂರನೇ ಅಲೆ ಎದುರಿಸಲು ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ಘಟಕಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಲೂರು ತಾಲ್ಲೂಕು ಹೊರತುಪಡಿಸಿ ಬೇರೆ ಎಲ್ಲಾ ತಾಲ್ಲೂಕುಗಳಲ್ಲಿ ಈಗಾಗಲೇ ಆಮ್ಲಜನಕ ಘಟಕಗಳು ಆರಂಭವಾಗಿವೆ. ಕೆಲವೇ ದಿನಗಳಲ್ಲಿ ಆಲೂರಿನಲ್ಲಿಯೂ ಆಮ್ಲಜನಕ ಘಟಕ ಪ್ರಾರಂಭವಾಲಿದೆ’ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾಹಿತಿ ನೀಡಿದರು.

ಸಕಲೇಶಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಶುಕ್ರವಾರ ಕೋವಿಡ್‌ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ 133 ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಗೂರಮಾರನಹಳ್ಳಿಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 14 ವಿದ್ಯಾರ್ಥಿಗಳಲ್ಲಿ ಏಕ ಕಾಲಕ್ಕೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಪ್ರಕರಣದಿಂದಾಗಿ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಪಟ್ಟಣದ ವೆಂಕಟೇಶ್ವರ ಬಡಾವಣೆಯ ಹಾಸ್ಟೆಲ್‍ನಲ್ಲಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನಗರದ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೂ ಸಾಮೂಹಿಕವಾಗಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು. ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿರುವ ಕಾರಣಕ್ಕೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಈ ವರ್ಷವೂ ಶಿಕ್ಷಣ ಸಿಗದಿದ್ದರೂ ಪರವಾಗಿಲ್ಲ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ಮಾಹಿತಿ ಇದ್ದರೂ ಶಾಲೆಗೆ ಮಕ್ಕಳನ್ನು ಕಳುಹಿಸಿ ತಪ್ಪು ಮಾಡಿದೆವು’ ಎಂದು ಪಾಲಕರು ಆತಂಕ ಹೊರ ಹಾಕುತ್ತಿದ್ದಾರೆ.

ಹಳೇಬೀಡಿನ ಸಮುದಾಯ ಆಸ್ಪತ್ರೆಯಲ್ಲಿ 30 ಹಾಸಿಗೆಯ ಸೌಲಭ್ಯವಿದೆ. ಪ್ರತಿ ಹಾಸಿಗೆಗೂ ಅಮ್ಲಜನಕದ ಪೈಪ್ ಲೈನ್ ಅಳವಡಿಸಲಾಗಿದೆ. ಪ್ರವಾಸಿ ತಾಣವಾಗಿರುವುದರಿಂದ 2 ವಾರ್ಡ್‌ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದೆ.

‘ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಿದ್ದಾಗ 300ಕ್ಕೂ ಹೆಚ್ಚು ಮಂದಿಗೆ ಸಿಬ್ಬಂದಿ ಪರೀಕ್ಷೆ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೈನಿಕರಂತೆ ಮುನ್ನುಗ್ಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಆರ್.ಅನಿಲ್ ಕುಮಾರ್ ತಿಳಿಸಿದರು.
‘ಅರಕಲಗೂಡಿನಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ನಡೆದಿದೆ’ ಎಂದು ಅರಕಲಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ ತಿಳಿಸಿದರು.

‘ಶಾಲೆಗಳಲ್ಲಿ ಮಕ್ಕಳು ಗುಂಪು ಸೇರದಂತೆ ನಿಗಾ ಇಡಲಾಗುತ್ತಿದೆ. ಆರೋಗ್ಯ ಇಲಾಖೆಯವರು ಮಕ್ಕಳ ತಪಾಸಣೆ ನಡೆಸಿ, ನೀಡುವ ವರದಿ ಆಧರಿಸಿ ಕ್ರಮಗಳನ್ನು ತೆಗೆದುಕೊಳ್ಳುವ ಜೊತೆಗೆ ಮಕ್ಕಳ ಪೋಷಕರ ಆರೋಗ್ಯ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಶಿಕ್ಷಣ ಇಲಾಖೆ ಹುಲಿಕಲ್ ಕ್ಲಸ್ಟರ್ ಸಿಆರ್‌ಪಿ ಡಿ.ಜೆ. ಶಾಂತ್ ರಾವ್ ತಿಳಿಸಿದರು.

‘ಜನರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸುವುದು. ಅಂತರ ಕಾಯ್ದುಕೊಳ್ಳಬೇಕು. ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವಂತೆ ಸಲಹಾ ಸಮಿತಿ ಸೂಚಿಸಿರುವುದು ಒಳ್ಳೆಯದು’ ಎಂದು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿ. ಮಹೇಶ್ ಹೇಳಿದರು.

ನಿತ್ಯ 20 ಸಾವಿರ ಮಂದಿಗೆ ಲಸಿಕೆ

ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ
ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಿದೆ.18 ವರ್ಷ ಮೇಲ್ಪಟ್ಟ 13,51,000 ಜನರ ಪೈಕಿ 12,58,410 ಮಂದಿಗೆ ಪ್ರಥಮ ಡೋಸ್ ಹಾಗೂ 8,60,792 ಮಂದಿಗೆ ದ್ವಿತೀಯ ಡೋಸ್ ಸೇರಿದಂತೆ ಒಟ್ಟು 20,64,863 ಲಕ್ಷ ಡೋಸ್ ಲಸಿಕೆ
ನೀಡಲಾಗಿದೆ. ಇನ್ನೂ 97 ಸಾವಿರಜನ 2ನೇ ಡೋಸ್
ಲಸಿಕೆ ಪಡೆಯಲು ಬಾಕಿ ಇದ್ದಾರೆ.
18 ವರ್ಷ ಮೇಲ್ಪಟ್ಟ ಶೇ .92ರಷ್ಟು ಜನರಿಗೆ ಮೊದಲ ಡೋಸ್‌ ನೀಡಲಾಗಿದ್ದು, ಎರಡನೇ ಡೋಸ್‌ ನೀಡಿಕೆಯಲ್ಲಿ ಶೇ 56ರಷ್ಟು ಪ್ರಗತಿ ಸಾಧಿಸಿದೆ. ನಿತ್ಯ 20 ಸಾವಿರ ಮಂದಿಗೆ ಈಗಲೂ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT