ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಶಿಕ್ಷಣ ಜಾರಿಯಾಗಲಿ- ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

Last Updated 30 ಮಾರ್ಚ್ 2022, 16:14 IST
ಅಕ್ಷರ ಗಾತ್ರ

ಬೂವನಹಳ್ಳಿ (ಚನ್ನವೀರ ಕಣವಿ ವೇದಿಕೆ): ‘ಶಿಕ್ಷಣ ಪದ್ಧತಿ ಸಮಾಜವನ್ನು ಒಡೆಯುತ್ತಿದೆ. ಬಡವ–ಶ್ರೀಮಂತ, ಕೆಳಜಾತಿ–ಮೇಲ್ಜಾತಿ, ಹಳ್ಳಿಯವ–ನಗರದವ ಹೀಗೆ ವರ್ಗಭೇದಗಳನ್ನು ಸೃಷ್ಟಿಸುತ್ತಾ ಎಳೆಯ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಏಕರೂಪ ಶಿಕ್ಷಣ ಜಾರಿಮಾಡುವುದು ಇದಕ್ಕೆ ಪರಿಹಾರ’ ಎಂದು ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಬೂವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಅವರು ಲಿಖಿತ ಭಾಷಣದಲ್ಲಿ ವಿವರಿಸಿದರು.

‘ಭಾರತೀಯ ಶಿಕ್ಷಣ ಪದ್ಧತಿಯು ಹಲವಾರು ಜ್ವಲಂತ ಸಮಸ್ಯೆ ಎದುರಿಸುತ್ತಿದೆ. ಅದರಲ್ಲಿ ಮಾತೃಭಾಷಾ ಶಿಕ್ಷಣದ ಅಸ್ತಿತ್ವಕ್ಕೆ ಸಂಬಂಧಿಸಿದ್ದು ಪ್ರಮುಖವಾಗಿದೆ. ಎಲ್ಲರೂ ಒಂದೆಡೆ ಕುಳಿತು ಭೇದಭಾವವಿಲ್ಲದೆ ಕಲಿಯುವ ವಾತಾವರಣ ಸೃಷ್ಟಿಯಾಗಬೇಕು’ ಎಂದು ಸಲಹೆ ನೀಡಿದರು.

ಇಂದು ಶಿಕ್ಷಣ ವ್ಯಾಪಾರೀಕರಣವಾಗಿದೆ. ಶಾಲಾ–ಕಾಲೇಜುಗಳು ತಾರಾ ಹೋಟೆಲ್‌ಗಳಂತೆ ಪೈಪೋಟಿ ನಡೆಸುತ್ತಿವೆ. ಶಿಕ್ಷಣ ಸಂಸ್ಥೆಗಳು ಉದ್ಯಮಗಳಾಗಿವೆ. ಈ ಕಾರಣದಿಂದಲೇ ಶೇ 97ರಷ್ಟು ಅಂಕ ಪಡೆದರೂ ವೈದ್ಯಕೀಯ ಶಿಕ್ಷಣ ದೇಶದಲ್ಲಿ ದೊರಕದೆ ವಿದೇಶದಲ್ಲಿ ಹೋಗಿ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮನುಕುಲದ ವಿನಾಶಕಾರಿ ನಡೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮೂರನೇ ಮಹಾಯುದ್ಧ ನಡೆದರೂ ಆಶ್ಚರ್ಯವಿಲ್ಲ. ಗಾಂಧೀಜಿ ಅಹಿಂಸಾವಾದದಲ್ಲಿ ನಂಬಿಕೆ ಇಟ್ಟು ಶಾಂತಿ, ಸಹನೆಯಿಂದ ಬದುಕಲು ಕಲಿಯಬೇಕು. ಯುದ್ಧ ಅಳಿಯಲಿ, ಮನುಕುಲ ಉಳಿಯಲಿ’ ಎಂದು ನುಡಿದರು.

‘ಇಂಗ್ಲಿಷ್‌ ಮಾತ್ರ ಬದುಕು ರೂಪಿಸುತ್ತದೆ ಎಂಬ ಭ್ರಮೆಯನ್ನು ತೊಡೆದು ಹಾಕಿ ಕನ್ನಡವೂ ಬದುಕು ರೂಪಿಸುತ್ತದೆ ಎಂಬ ಭರವಸೆ ಮೂಡಿಸುವುದು ಅವಶ್ಯಕವಾಗಿದೆ. ಕನ್ನಡ ಅನ್ನದ ಭಾಷೆಯಾಗುವಂತೆ ಮಾಡಬೇಕು. ಕನ್ನಡವನ್ನು ಶೈಕ್ಷಣಿಕ, ಔದ್ಯಮಿಕ, ಬದುಕಿನ ಭಾಷೆಯನ್ನಾಗಿ ಮಾಡಬೇಕು’ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ, ‘ವಿಶ್ವಮಾನವ ತತ್ವವನ್ನು ಕನ್ನಡಿಗರು ಚಾಚೂ ತಪ್ಪದೇ ಅನುಸರಿಸುತ್ತಿದ್ದಾರೆ. ಪಂಪನಿಂದ ಕುವೆಂಪುವರೆಗೂ ವಿಶ್ವಮಾನವ ತತ್ವವನ್ನು ಎಲ್ಲೆಡೆ ಸಾರುತ್ತಿದ್ದೇವೆ. ಆದರೆ, ನಮ್ಮತನವನ್ನು ಯಾವ ರೀತಿಯಲ್ಲಿ ಕಾಪಾಡಿಕೊಂಡಿದ್ದೇವೆ ಎಂಬುದು ಮುಖ್ಯ’ ಎಂದು ಎಚ್ಚರಿಸಿದರು.

‘ಪ್ರತಿಯೊಬ್ಬರು ಯಂತ್ರದ ದಾಸರಾಗಿದ್ದೇವೆ. ನೆನಪುಗಳನ್ನು ಅಳಿಸಿ ಹಾಕುತ್ತಿರುವ ಯಾಂತ್ರಿಕ ಬದುಕಿನ ಮಧ್ಯೆ ಭಾಷೆಯನ್ನು ಹೇಗೆ ಇಟ್ಟುಕೊಳ್ಳಲು ಸಾಧ್ಯ? ಆ ಮೊಬೈಲ್‌ನಲ್ಲಿಯೇಕನ್ನಡ ತಂತ್ರಾಂಶ, ಅಂಕಿ ಮತ್ತು ಕನ್ನಡ ಭಾಷೆ ಬಳಸುವ ಮೂಲಕ ಅದನ್ನು ಮೀರಿ ನಿಲ್ಲಬೇಕು’ ಎಂದರು.

‘ಕನ್ನಡದೊಂದಿಗೆ ಕಲೆ, ಸಂಗೀತ, ಸಿನಿಮಾ ಸೇರಿದಂತೆ ಇತರೆ ಭಾಷೆಗಳನ್ನೂ ಅಂತರ್ ಸಂಬಂಧಗೊಳಿಸುವ ಕೆಲಸ ಇಂದು ತುರ್ತಾಗಿ ಆಗಬೇಕಿದೆ. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆ ಕನ್ನಡವನ್ನೂ ಸೇರಿಸಿ ಸಮನ್ವಯತೆ ಸೇರಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಎಲ್ಲವುಗಳೊಂದಿಗೆ ಕನ್ನಡವನ್ನೂ ಬೆಸೆಯುವ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ’ ಎಂದು ತಿಳಿಸಿದರು

‘ಕನ್ನಡ ಕೆಲಸವನ್ನು ಅಭಿವೃದ್ಧಿ ಪ್ರಾಧಿಕಾರ, ಸರ್ಕಾರ ಮಾಡಲಿದೆ ಎಂದು ಸುಮ್ಮನೆ ಕೂರುವುದು ತರವಲ್ಲ. ಇದು ಸಮುದಾಯದ ಕೆಲಸ. ಈ ನಿಟ್ಟಿನಲ್ಲಿ ಸಮುದಾಯವನ್ನು ಎಚ್ಚರಿಸುವ ಸಮ್ಮೇಳನ ಇದಾಗಲಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಆಶಯ ನುಡಿಗಳಾನ್ನಾಡಿದರು. ಸಾಹಿತಿ ಮೇಟಿಕೆರೆ ಹಿರಿಯಣ್ಣ, ಮುಖಂಡ ಬಿ.ವಿ.ಕರೀಗೌಡ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಜಿ.ವಿ.ಬಸವರಾಜು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT