ಆಲೂರು: ಭರತವಳ್ಳಿ ಸಮೀಪ ಇರುವ ಸಾವಯವ ಪರಿಸರ ಪ್ರಿಯ ಕೃಷಿಕರ ಪುಣ್ಯಭೂಮಿ ಸಂಸ್ಥೆ, ಭೂಮಿಯನ್ನು ಹಸನು ಮಾಡುತ್ತಿದ್ದು ಸಾವಯವ ಕೃಷಿ ಮಾಡುವ ರೈತರ ಪಾಲಿಗೆ ವರದಾನವಾಗಿದೆ.
1996ರಲ್ಲಿ ಪ್ರಾರಂಭವಾದ ಈ ಸಂಸ್ಥೆ 550 ಸದಸ್ಯರನ್ನು ಹೊಂದಿದ್ದು, ಸರ್ಕಾರದ ಅನುದಾನ ಬಯಸದೇ ಸದಸ್ಯರ ಸ್ವಯಂ ಬಲದಿಂದ ಬಲವಾಗಿ ನೆಲೆಯೂರಿದೆ. ಸದಸ್ಯರ ಕೃಷಿ ಬೆಳವಣಿಗೆ ಬಗ್ಗೆ ಪರಸ್ಪರ ವಿಚಾರ ವಿನಿಮಯ, ಅನುಭವ ಹಂಚಿಕೆ ಮಾಡಿಕೊಳ್ಳುವುದು ಸಂಸ್ಥೆಯ ಮೂಲ ಉದ್ದೇಶ. 27 ವರ್ಷಗಳಿಂದ ಈವರೆಗೆ ಸಂಸ್ಥೆ ನೆರವಿನಿಂದ ಹಲವು ಸದಸ್ಯರು ಕೋಟ್ಯಂತರ ರೂಪಾಯಿ ಮೌಲ್ಯದ ಸಾವಯವ ಕೃಷಿ ಸಂಪತ್ತು ಹೊಂದಿದ್ದಾರೆ.
ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಕಡಿಮೆ ಖರ್ಚಿನಲ್ಲಿ ಸುಮಾರು 400 ಜಾತಿಯ ಹಣ್ಣು, ಗೆಡ್ಡೆ–ಗೆಣಸು, ಗಿಡಗಳನ್ನು ಸಂಸ್ಥೆ ಹೊಂದಿದೆ.
ವಿಶೇಷವೆಂದರೆ ಆರೋರೂಟ್ (ನಿಶ್ಯಕ್ತಿ ಇರುವ ಮಕ್ಕಳಿಗೆ ಬಳಸುವ ಆರೋರೂಟ್ ಪೌಡರ್), ಕಸ್ತೂರಿ ಅರಿಶಿಣ (ಔಷಧಿ ಗುಣ ಹೊಂದಿರುವ ಅತ್ಯಂತ ದುಬಾರಿ ಸಸ್ಯ. ಒಂದು ಕೆ.ಜಿ.ಗೆ ಒಂದೂವರೆಯಿಂದ ₹2 ಸಾವಿರ), ರುದ್ರಾಕ್ಷಿ ಹಲಸು (ಸುವಾಸನೆಭರಿತ ಅಪರೂಪದ ಹಣ್ಣು), ನಾಟಿ ತೊಂಡೆ, ಎಲೆ ಬೆಳ್ಳುಳ್ಳಿ, ಅಮೃತಬಳ್ಳಿ, ಚಕ್ರಮುನಿ (ಅಪರೂಪದ ಸಸ್ಯ), ಬಳ್ಳಿ ಆಲೂಗಡ್ಡೆ, ಬಳ್ಳಿ ಗೆಣಸು, ಹುತ್ತರಿ ಗೆಣಸು, ಮರಗೆಣಸು, ಸುವರ್ಣಗೆಡ್ಡೆ, ಸುಗಂಧ ದ್ರವ್ಯ ಹೊಂದಿರುವ ರಾಶಣಗೆಡ್ಡೆ, ನಿಂಬೆಹುಲ್ಲು, ನಾಟಿ ಅನಾನಸ್ (ಬರದ ಕಾಲದಲ್ಲೂ ಬೆಳೆಯುವ ಹಣ್ಣಿನ ಗಿಡ), ಕಾಫಿ, ಮೆಣಸು, ಏಲಕ್ಕಿ ಬೆಳೆಯಲಾಗಿದೆ.
ಬ್ರಯೋಫೈಲಮ್ (ಕಿಡ್ನಿಯಲ್ಲಿ ಕಲ್ಲು ಕರಗಿಸುವ ಸಸ್ಯ), ಪೆಪ್ಪರಮಿಂಟ್ (ಹೊಟ್ಟೆಗೆ ಸಂಬಂಧಿಸಿದ ಭೇದಿ, ವಾಂತಿ, ಹೊಟ್ಟೆ ತೊಳೆಸುವ ಕಾಯಿಲೆಗೆ ರಾಮಬಾಣ), ಜಮ್ಮನೇರಲೆಹಣ್ಣು, ಸೋಂಪುಗಿಡ, ಚರ್ಮರೋಗಕ್ಕೆ ಸ್ನೇಕ್‍ಪ್ಲಾಂಟ್, ಲೋಳೆಸರ ಸೇರಿದಂತೆ ಅನೇಕ ಸಸ್ಯ ಸಂಕುಲಗಳಿವೆ.
Quote - ಪುಣ್ಯಭೂಮಿ ಸಂಸ್ಥೆಯಿಂದ ದೊರಕುವ ಸಾವಯವ ಕೃಷಿ ಮಾರ್ಗದರ್ಶ ಅನುಸರಿಸಿ ಕೃಷಿ ಭೂಮಿ ಫಲವತ್ತ ಮಾಡಿಕೊಂಡು ರಾಸಾಯನಿಕ ರಹಿತ ಕೃಷಿ ಮಾಡುತ್ತಿದ್ದೇನೆ ಎ.ಎಚ್. ರಮೇಶ್ ಹಳೆ ಆಲೂರಿನ ಕೃಷಿಕ
Cut-off box - ಸೆ.29 ರಂದು ಕಾರ್ಯಾಗಾರ ಸೆ. 29 ರಂದು ಸಂಸ್ಥೆ ಆವರಣದಲ್ಲಿ ನಿತ್ಯದ ಬಳಕೆಗೆ ಮಳೆ ನೀರಿನ ಸಂರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ವಿಜಯ ಅಂಗಡಿ ತಿಳಿಸಿದ್ದಾರೆ. ಕೇವಲ 50 ಜನರಿಗೆ ಸೀಮಿತ ಮಾಡಿಕೊಂಡು ಭಾಗವಹಿಸುವ ಪ್ರತಿನಿಧಿಗಳಿಗೆ ತಲಾ ₹600 ಶುಲ್ಕ ನಿಗದಿಪಡಿಸಲಾಗಿದೆ. ವಿಶೇಷ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವ ಆಸಕ್ತರು ಹಗರೆ ಕುಮಾರಸ್ವಾಮಿ (ಮೊ.ಸಂ. 9480303667) ಅವರನ್ನು ಸಂಪರ್ಕಿಸಲು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.