ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ

ಹಾಸನ: ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಗುರಿಯೊಂದಿಗೆ ಪಕ್ಷ ಕಟ್ಟುವ ಕೆಲಸವನ್ನು ಕಾರ್ಯಕರ್ತರು ಹಾಗೂ ಮುಖಂಡರು ಪ್ರಾಮಾಣಿಕವಾಗಿ ಮಾಡಬೇಕು ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಎಚ್.ಎಂ.ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಹೆಚ್ಚು ಮಳೆ ಆಗಿದೆ. ಹಾಸನ ಜಿಲ್ಲೆಯ ಕೆಲ ಭಾಗದಲ್ಲಿ ಉತ್ತಮ ಫಸಲು ಬಂದಿದೆ. ಜೊತೆಗೆ ಮಳೆಯಿಂದ ಸಾಕಷ್ಟು ಹಾನಿ ಕೂಡ ಆಗಿದೆ. ಸಕಲೇಶಪುರ ಮತ್ತು ಬೇಲೂರು ಸುತ್ತ ಮುತ್ತ ಕಾಡಾನೆಗಳ ಹಾವಳಿಗೆ ಒಳಗಾಗಿರುವ ಆ ಭಾಗದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು. ಬಿಜೆಪಿ ಎಂದರೇ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಇತ್ತು. ಆದರೆ, ಇಂದು ಗ್ರಾಮಗಳಲ್ಲೂ ಪಕ್ಷದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚು ಮತಗಳು ಗ್ರಾಮಾಂತರ ಪ್ರದೇಶದಿಂದಲೇ ಬಂದಿದೆ ಎಂದು ಹೇಳಿದರು.
ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಪ್ರತಿ ಹಳ್ಳಿಯಲ್ಲೂ ಬಿಜೆಪಿ ಪರಿಚಯಿಸಿ, ಪಕ್ಷ ಕಟ್ಟಿದ ಬಿ.ಎಸ್. ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಆಗಿದ್ದಾರೆ. ಯಾವುದೇ ದುರುದ್ದೇಶ ಇಟ್ಟುಕೊಂಡು ಬಿಜೆಪಿ ರಾಜಕೀಯಕ್ಕೆ ಬಂದಿಲ್ಲ. ಅಧಿಕಾರ ಒಂದೇ ಮುಖ್ಯವಲ್ಲ, ತತ್ವ ಸಿದ್ಧಾಂತ ಮತ್ತು ಆದರ್ಶ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಸುರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಿಭಾಗ ಸಂಘಟನಾ ಕಾರ್ಯದರ್ಶಿ ಕೆ.ಟಿ. ಕುಮಾರಸ್ವಾಮಿ, ಪಕ್ಷದ ಮುಖಂಡ ನವೀಲೆ ಅಣ್ಣಪ್ಪ, ಕೆ.ಎಸ್.ಆರ್.ಟಿ.ಸಿ. ರಾಜ್ಯ ಉಪಾಧ್ಯಕ್ಷ ಈಶ್ವರ್ ಸೀಗೆ, ಮಾಜಿ ಶಾಸಕ ಬಿ.ಆರ್. ಗುರುದೇವ್, ಹುಡಾ ಅಧ್ಯಕ್ಷ ಲಲಾಟ ಮೂರ್ತಿ, ಎಚ್.ಎಂ. ವಿಶ್ವನಾಥ್
ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.