ಕುಸಿಯುವ ಭೀತಿಯಲ್ಲಿ ಓವರ್‌ ಹೆಡ್ ಟ್ಯಾಂಕ್‌

7
ಮೂರು ದಶಕದ ಹಿಂದೆ ನಿರ್ಮಾಣ, ನಿವಾಸಿಗಳಿಗೆ ಆತಂಕ

ಕುಸಿಯುವ ಭೀತಿಯಲ್ಲಿ ಓವರ್‌ ಹೆಡ್ ಟ್ಯಾಂಕ್‌

Published:
Updated:
Deccan Herald

ಹಾಸನ: ನಗರದ ಸಾಲಗಾಮೆ ರಸ್ತೆಯ ಸಾಯಿಬಾಬಾ ದೇವಸ್ಥಾನ ಸಮೀಪದ ಉದ್ಯಾನದಲ್ಲಿರುವ ಎರಡು ಓವರ್ ಹೆಡ್ ಟ್ಯಾಂಕ್‌ಗಳು ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿಯಬಹುದು ಎಂಬ ಆತಂಕ ಎದುರಾಗಿದೆ.

ಕುಡಿಯುವ ನೀರು ಪೂರೈಕೆಗಾಗಿ ಈ ಎರಡು ಟ್ಯಾಂಕ್‌ಗಳನ್ನು ಮೂರು ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಸತತ ಮಳೆಯಿಂದಾಗಿ ಒಂದು ಟ್ಯಾಂಕ್‌ ಶಿಥಿಲಗೊಂಡಿದೆ.

ಸಿಮೆಂಟ್‌ ಪ್ಲಾಸ್ಟರ್‌ ಉದುರುತ್ತಿರುವ ಕಾರಣ ಸುತ್ತ ಮುತ್ತಲಿನ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಹೇಮಾವತಿ ನೀರನ್ನು ಟ್ಯಾಂಕ್‌ ಮೂಲಕ ಉತ್ತರ ಬಡಾವಣೆ, ರಂಗೋಲಿ ಹಳ್ಳ ಹಾಗೂ ಸುತ್ತ ಮುತ್ತಲ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ.

ನಗರಸಭೆ 14ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿರುವ ಉದ್ಯಾನದಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಜನರು ವಾಯು ವಿಹಾರಕ್ಕೆ ಬರುತ್ತಾರೆ. ಮಕ್ಕಳು ಸಹ ಆಟವಾಡುತ್ತಾರೆ.

ಈ ಭಾಗದಲ್ಲಿ ಕಾರ್ಮಿಕರು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇದರ ಬಳಿಯಿರುವ ಬನ್ನಿ ಮಂಟಪದಲ್ಲಿ ವಿಜಯ ದಶಮಿ ಸಂದರ್ಭದಲ್ಲಿ ನೂರಾರು ಭಕ್ತರು ಬನ್ನಿ ಕಡಿದು ಹಬ್ಬ ಆಚರಿಸುತ್ತಾರೆ.

‘ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂಬುದು ಸ್ಥಳೀಯರ ಆಗ್ರಹ.

ಟ್ಯಾಂಕ್‌ನಿಂದ ನೀರು ಹರಿಸುವ ಕಬ್ಬಿಣದ ಪೈಪ್‌ಗಳು ತುಕ್ಕು ಹಿಡಿದಿದ್ದು, ವಾಲ್ವ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಎಲ್ಲ ಕಂಬಗಳೂ ಶಿಥಿಲಗೊಂಡು, ಸಿಮೆಂಟ್‌ ಉದುರಿ ಹೋಗಿ ಒಳಗಿನ ಕಬ್ಬಿಣ ತುಕ್ಕು ಹಿಡಿದಿವೆ. ಒಂದು ಭಾಗದಲ್ಲಿ ರಂಧ್ರವಾಗಿದ್ದು, ನೀರು ಸೋರುತ್ತಲೇ ಇರುತ್ತದೆ.

‘ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್‌ ಅನ್ನು ನಗರಸಭೆ ವತಿಯಿಂದ ದುರಸ್ತಿ ಮಾಡಲಾಗಿದೆ. ಇದರ ಪಕ್ಕದಲ್ಲಿರುವ ಟ್ಯಾಂಕ್ ಶಿಥಿಲವಾಗಿದೆ. ತೀರಾ ಹಳೆಯದಾಗಿರುವ ಕಾರಣ ದುರಸ್ತಿ ಮಾಡುವ ಬದಲು ಕೆಡವಿ, ಹೊಸದಾಗಿ ನಿರ್ಮಿಸಬೇಕು. ಅಪಾಯ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜೇಗೌಡ.

‘ಟ್ಯಾಂಕ್‌ ನಿರ್ಮಿಸಿ ಮೂರು ದಶಕವಾಗಿದೆ. ಶಿಥಿಲವಾಗಿರುವುದು ಗಮನಕ್ಕೆ ಬಂದಿದ್ದು, ದುರಸ್ತಿ ಮಾಡುವ ಬದಲಾಗಿ ಹೊಸ ಟ್ಯಾಂಕ್‌ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿದೆ. ಚುನಾವಣೆ ಬಳಿಕ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ನಗರಸಭೆ ಸದಸ್ಯೆ ಬಿ.ಎಸ್‌.ಉಷಾ ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !