ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾದಪೂಜೆ’ ಖಂಡಿಸಿ ಪೌರಕಾರ್ಮಿಕರ ಧರಣಿ

ಮಂಜು ವಿರುದ್ಧ ದೂರು ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯ
Last Updated 26 ಮಾರ್ಚ್ 2019, 12:14 IST
ಅಕ್ಷರ ಗಾತ್ರ

ಹಾಸನ: ‘ಹಾಸನ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಪೌರಕಾರ್ಮಿಕ ದಂಪತಿ ಪಾದ ತೊಳೆದು ನಾಟಕವಾಡಿದ್ದಾರೆ’ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಮಿಕರು, ‘ನಿಮ್ಮ ಕಳಂಕಿತ ಕೈಗಳಿಂದ ನಮ್ಮ ಪಾದಪೂಜೆ ಮಾಡಬೇಡಿ; ನಮ್ಮ ಕೆಲಸ ಕಾಯಂ ಮಾಡಿ’ ಎಂಬ ಘೋಷಣೆ ಕೂಗಿದರು.

ರಾಜಕಾರಣದ ಲಾಭಕ್ಕಾಗಿ ರಾಜಕಾರಣಿಗಳು ಪೌರಕಾರ್ಮಿಕರ ಪಾದಪೂಜೆ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅನುಸರಿಸಿದ್ದೇನೆ ಎಂದು ಮಂಜು ಹೇಳಿದ್ದಾರೆ. ಆದರೆ, ಅಧಿಕಾರದಲ್ಲಿದ್ದಾಗ ಒಂದು ದಿನವೂ ಪೌರಕಾರ್ಮಿಕರ ಕಾಲೋನಿಗಳಿಗೆ ಹೋಗಲಿಲ್ಲ. ಕೆಲಸ ಕಾಯಂ ಮಾಡಲಿಲ್ಲ, ಸುಪ್ರೀಂ ಕೋರ್ಟ್ ಆದೇಶದಂತೆ ಅವರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀತಿ ಜಾರಿ ಮಾಡಲಿಲ್ಲ, ವಾಸ ಮಾಡಲು ಉತ್ತಮ ವಸತಿ ನಿರ್ಮಿಸಲಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪೌರಕಾರ್ಮಿಕರಿಗೆ ಸ್ವಾಭಿಮಾನಿ ಹಾಗೂ ಘನತೆಯಕ್ತ ಬದುಕು ಕಲ್ಪಿಸುವ ಬದಲು, ಬೇಕೆಂದಾಗ ರಾಜಕೀಯದ ಆಟಕ್ಕೆ ಪಾದಪೂಜೆ ಮಾಡಿಸುವುದು ಬಿಜೆಪಿ ಮತ್ತು ಸಂಘ ಪರಿವಾರದ ಉದ್ದೇಶವಾಗಿದೆ ಎಂದು ಹೇಳಿದರು.

ಮುನಿಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ‘ನರೇಂದ್ರ ಮೋದಿ ಸರ್ಕಾರ ‘ಸ್ವಚ್ಛ ಭಾರತ ಅಭಿಯಾನ’ ಎಂಬ ಹೆಸರಿನಲ್ಲಿ ಸಾವಿರಾರು ಕೋಟಿ ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ. ಶೌಚಗೃಹ, ಶೌಚಾಲಯದ ಗುಂಡಿಗಳು, ಮ್ಯಾನ್‍ಹೋಲ್ ಮತ್ತು ಒಳಚರಂಡಿಗಳನ್ನು ಸ್ವಚ್ಛ ಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸದೆ ಇಂದಿಗೂ ಪೌರಕಾರ್ಮಿಕರ ಕೈಗಳಿಂದಲೇ ಸ್ವಚ್ಛಗೊಳಿಸಲಾಗುತ್ತಿದೆ. ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಕೆಲಸ ಕಾಯಂ ಮಾಡಿ, ನ್ಯಾಯಯುತ ವೇತನ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎ. ಮಂಜು ಮತ್ತು ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಕ್ರಮ ಕೈಗೊಳ್ಳಬೇಕು. ಇಂತಹ ಚುನಾವಣೆಯ ಆಟಗಳಿಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆಪಿಆರ್‍ಎಸ್‍ನ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‍ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್, ವಿವೇಕ್, ಮುನಿಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌, ಜಿಲ್ಲಾ ಖಜಾಂಚಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT