ಭಾನುವಾರ, ಫೆಬ್ರವರಿ 23, 2020
19 °C
ವಿವಿಧ ಮಠಗಳ ಸ್ವಾಮೀಜಿಗಳು ಭಾಗಿ, ಕೆರೆಗೆ ನೀರು ಹರಿಸುವ ಯೋಜನೆ ಜಾರಿಗೆ ಆಗ್ರಹ

‘ನಮ್ಮ ನಡೆ ದ್ವಾರಸಮುದ್ರದ ಕಡೆಗೆ’ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಇಲ್ಲಿಯ ಚನ್ನಮ್ಮ ನಂಜೇಗೌಡ ಕಲ್ಯಾಣ ಮಂಟಪದಿಂದ ದ್ವಾರಸಮುದ್ರ ಕೆರೆಯವರೆಗೆ ಮಠಾಧೀಶರ ಪಾದಯಾತ್ರೆ ನಡೆಯಿತು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ರಣಘಟ್ಟ ಒಡ್ಡಿನಿಂದ ಹೊಯ್ಸಳರ ಕಾಲದ ನಾಲೆ ಮುಖಾಂತರ ದ್ವಾರಸಮುದ್ರ ಕೆರೆಗೆ ನೀರು ಹರಿಸುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸರ್ಕಾರದ ಗಮನ ಸೆಳೆಯುವುದು ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಮುಖ ಗುರಿ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದರು. ಈ ನಿಟ್ಟಿನಲ್ಲಿ ‘ನಮ್ಮ ನಡಿಗೆ ದ್ವಾರಸಮುದ್ರ ಕೆರೆ ಕಡೆಗೆ‌’ ಎಂದು ಸ್ವಾಮೀಜಿಗಳು 3 ಕಿ.ಮೀ ಪಾದಯಾತ್ರೆ ಮಾಡಿದರು.

ಬೆಳವಾಡಿಯ ಬಸವೇಶ್ವರ ಭಜನೆ ಸಂಘದವರು ತಾಳ, ದಮರಿ, ತಂಬೂರಿ ನುಡಿಸುತ್ತಾ ವಚನ ಗಾಯನದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಕಿಕ್ಕೇರಿಯ ನಿಂಗರಾಜು ತಂಡದ ಸ್ಯಾಕ್ಸೋಫೋನ್‌ ಹಾಗೂ ಡೊಳ್ಳು ವಾದನ ಮೆರವಣಿಗೆಗೆ ಮೆರುಗು ನೀಡಿತು.

ಕಳೆದ ವರ್ಷ ಹಳೇಬೀಡಿನಲ್ಲಿಯೇ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಬೇಕಾಗಿತ್ತು. ತೀವ್ರ ಬರಗಾಲ ಎದುರಾಗಿದ್ದರಿಂದ ದ್ವಾರಸಮುದ್ರ ಕೆರೆಗೆ ನೀರು ಬಂದ ನಂತರ ಹಳೇಬೀಡಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸುವುದಾಗಿ ಹೇಳಿ ಸಿರಿಗೆರೆಯಲ್ಲೇ ಸರಳವಾಗಿ ಸಮಾರಂಭ ನಡೆಸಿದ್ದರು. ಈ ವರ್ಷ ಸಮೃದ್ಧ ಮಳೆ ಸುರಿದಿದ್ದಲ್ಲದೆ, ಯಗಚಿ ಏತ ನೀರಾವರಿಯಿಂದಲೂ ನೀರು ಹರಿಸಿದ್ದರಿಂದ ಕೆರೆ ಭರ್ತಿಯಾಗಿದೆ. ಹೀಗಾಗಿ, ಈ ವರ್ಷ ಹಳೇಬೀಡಿನಲ್ಲಿ ಶ್ರೀಗಳು ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸುತ್ತಿದ್ದಾರೆ.

ಶಾಸಕ ಕೆ.ಎಸ್‌.ಲಿಂಗೇಶ್‌, ಮುಖಂಡರಾದ ಹುಲ್ಲಳ್ಳಿ ಸುರೇಶ್‌, ಕೊರಟಗೆರೆ ಪ್ರಕಾಶ್‌, ಎಚ್‌.ಆರ್‌.ಕಾಂತರಾಜು, ಡಾ.ವಿನಾಯಕ್‌, ಹೆಬ್ಬಾಳು ಭುವನೇಶ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು