ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಂಗಾ ಗಾಡಿಗಳ ಮೆರವಣಿಗೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
Last Updated 23 ಫೆಬ್ರುವರಿ 2021, 14:44 IST
ಅಕ್ಷರ ಗಾತ್ರ

ಹಾಸನ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ
ನಗರದಲ್ಲಿ ಟಾಂಗಾ ಗಾಡಿಗಳ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್‌ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು
ಬಿ.ಎಂ.ರಸ್ತೆ, ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆ ಮಾರ್ಗವಾಗಿ ಎನ್‌.ಆರ್‌.ವೃತ್ತಕ್ಕೆ ಬಂದು ಕೆಲ ಕಾಲ
ಮಾನವ ಸರಪಳಿ ರಚಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆಯಲ್ಲಿಯೇ
ಅಡುಗೆ ಮಾಡಿದರು.

ಎಚ್‌.ಕೆ.ಮಹೇಶ್‌ ಮಾತನಾಡಿ, ‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ಬಿಜೆಪಿ
ನಾಯಕರು ಈಗ ಮೌನವಾಗಿದ್ದಾರೆ. ದೇಶದ ಹಲವೆಡೆ ಪೆಟ್ರೋಲ್ ಬೆಲೆ ಲೀಟರ್‌ ₹100 ತಲುಪಿದೆ.
ಆದರೂ ಮೋದಿ ಸರ್ಕಾರ ಜನರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆಗೂ ಮುನ್ನ ಮೋದಿ ನೀಡಿದ್ದ ಭರವಸೆಗಳನ್ನು ಮುರಿಯುತ್ತಿದ್ದಾರೆ’ ಎಂದುಆರೋಪಿಸಿದರು.

‘ಪ್ರಧಾನಿ ಮೋದಿ ಅವರ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ದೇಶದ ಜನ ಪರಿತಪಿಸುವಂತಾಗಿದೆ. ಗರಿಷ್ಠ ಮೌಲ್ಯದ ನೋಟುಗಳ ರದ್ಧತಿ, ಜಿಎಸ್‌ಟಿ ಜಾರಿ ಮೂಲಕ ಅರ್ಥ ವ್ಯವಸ್ಥೆಯನ್ನು ಹಾಳುಗೆಡವಿದ ಸರ್ಕಾರ ಈಗ ಬೆಲೆ ಏರಿಕೆ ಮೂಲಕ ಸಂಕಷ್ಟ ತಂದೊಡ್ಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೆ ದೇಶದ ಮಾರುಕಟ್ಟೆಯಲ್ಲಿ ಇಂಧನ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಡುಗೆ ಎಣ್ಣೆ ಲೀಟರ್‌ ₹160 ತಲುಪಿದೆ. ಇಂತಹ ಕೆಟ್ಟ ಪರಿಸ್ಥಿತಿ ಗೆ ದೇಶವನ್ನು ದೂಡಿದ ಹಿರಿಮೆ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಆಕ್ರೋಶ ಹೊರಹಾಕಿದರು.

ಎನ್‌.ಆರ್.ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಸುಮಾರು ಅರ್ಧ ತಾಸು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮುಖಂಡರಾದ ಎಚ್.ಪಿ.
ಪುಟ್ಟರಾಜು, ಚಂದ್ರಶೇಖರ್, ಆರೀಫ್, ಲೋಕೇಶ್, ವಿನೋದ್, ರಾಘವೇಂದ್ರ, ತಾರ ಚಂದನ್,
ಚಂದ್ರಶೇಖರ್, ಹೇಮಂತ್ ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT