ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸದಿರಿ

ಹಾಸನ : ಮಕ್ಕಳ ಭವಿಷ್ಯ ನಿರ್ಧಾರದಲ್ಲಿ ತಾಯಿ ಮತ್ತು ಗುರುವಿನ ಪಾತ್ರ ಅತ್ಯಂತ ಮುಖ್ಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಆವರಣದಲ್ಲಿ ನರಸೀಪುರ ದೊಡ್ಡಮನೆ ಸುಜನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ ಸಿ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ಸಮರ್ಥಿಸಿಕೊಳ್ಳದೆ ತಿದ್ದಿ ಬುದ್ದಿವಾದ ಹೇಳಬೇಕು. ಆಗ ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯ. ಪರೀಕ್ಷೆಗಳಲ್ಲಿ ಮಕ್ಕಳಿಗೆ ನಕಲು ಮಾಡಲು ಶಿಕ್ಷಕರು ಸಹಕರಿಸಬಾರದು. ಇದು ಮಕ್ಕಳಿಗೆ ಮಾಡುವ ದೊಡ್ಡ ಅನ್ಯಾಯ ಎಂದು ಎಚ್ಚರಿಸಿದರು.
ಮನೆಯಲ್ಲಿ ಪೋಷಕರ ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅವರ ಸಣ್ಣ ತಪ್ಪುಗಳನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ಅದೇ ದೊಡ್ಡದಾಗಿ ಸಮಾಜಕ್ಕೆ ಕಂಟಕ ವ್ಯಕ್ತಿಯಾಗಿ ಬೆಳೆಯುವ ಸಾಧ್ಯತೆ ಇರುತ್ತದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ನೀಡಿದರೆ ಶಾಲೆಗಳು ಮುಚ್ಚುವುದಿಲ್ಲ. ಈ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಇದು ತಂತ್ರಜ್ಞಾನ ಯುಗ. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ನಂತರ ಸಾಕಷ್ಟು ಆಯ್ಕೆಗಳು ವಿದ್ಯಾರ್ಥಿಗಳ ಮುಂದೆ ಇರುತ್ತವೆ. ಆ ಸಂದರ್ಭದಲ್ಲಿ ಅಂತರ್ಜಾಲ ಮತ್ತಿತರ ಸೌಲಭ್ಯ ಬಳಸಿಕೊಂಡು ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಕೆರಿಯರ್ ಗೈಡೆನ್ಸ್ ಶಿಬಿರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
2017–18ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಜಿಲ್ಲಾಧಿಕಾರಿ ಬಹುಮಾನ ವಿತರಿಸಿದರು. ಡಯೆಟ್ ಪ್ರಾಂಶುಪಾಲ ನಾಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್. ಮಂಜುನಾಥ್, ಸುಜನಾ ಚಾರಿಟೆಬಲ್ ಟ್ರಸ್ಟ್ ವ್ಯವಸ್ಥಾಪಕ ಎನ್.ಎಸ್. ಶ್ರೀನಿವಾಸ್, ಸದಸ್ಯರಾದ ಎನ್.ಎಸ್. ರಾಮಚಂದ್ರ, ಎಚ್.ಆರ್. ಸುಬ್ಬರಾವ್, ಪ್ರಾಂಶುಪಾಲ ಲೋಕೇಶ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.