ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ಹನಿ ಕುಣಿವ ಖುಷಿ ದನಿ

Last Updated 15 ಜೂನ್ 2018, 12:26 IST
ಅಕ್ಷರ ಗಾತ್ರ

ಕ್ಷಣ ಮಾತ್ರದಲ್ಲೇ ಬೆಳಕೆಂಬೋ ಬೆಳಕನ್ನು ಮರೆ ಮಾಡಿ ಹಗಲಿನಲ್ಲೇ ರಾತ್ರಿಯಾಗಿದೆಯೆಂಬ ಭಾವವನ್ನು ಹುಟ್ಟಿಸುವ ಕಾರ್ಮುಗಿಲ ಕರಾಮತ್ತು. ಕೋಪಗೊಂಡ ಮದ್ದಾನೆಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡು ಘೀಳಿಡುತ್ತಿವೆಯೆಂದೆನಿಸುವಂತೆ ಆಗಾಗ ಗುಡುಗುಡು ಸದ್ದು. ರೋಷಗೊಂಡ ಹಿರಿಯಾನೆ ಬಿದಿರು ಹಿಂಡಿಗೆ ನುಗ್ಗಿತೆಂಬಂತೆ ಛಟಿಚಟಿಲ್ ಸಿಡಿಲು. ಹೌದು, ಮುಂಗಾರಿನ ಮೆರವಣಿಗೆಯೆಂದರೆ ಅದು ಅತ್ಯಪೂರ್ವವಾದ ಗಜಕೇಳಿಯೇ ಸರಿ.

ಚಿಗುರುಗಂಗಳ ಮೋಹಕ ಚೈತ್ರದ ನಂತರ ಬಿರುಬಿಸಿಲಿನ ವೈಶಾಖ ಕಾಲಿಟ್ಟು ತನ್ನ ಬಿಸಿಬಿಸಿ ಕಾವನ್ನು ಎಲ್ಲಡೆ ಹಬ್ಬಿಸಿದಾಗ ಆಕಾಶವೆಂದರೆ ಧಗಧಗ ಸೂರ್ಯ ಹಚ್ಚಿಟ್ಟ ಸುಡು–ಒಲೆಯಂತೆಯೇ ಆಗಿಹೋಗಿತ್ತು. ಹಿಂಡುಗಟ್ಟಲೆ ಜನರಿಗೆ ನಿರಂತರವಾಗಿ ಅನ್ನದಾಸೋಹ ನಡೆಸುವ ಸಮಾರಾಧನೆ ಒಲೆಯೊಂದನ್ನು ಹಚ್ಚಿಡಲಾಗಿದೆಯೇನೋ ಎಂದು ಭಾಸವಾಗುವಂತೆ ಮುಗಿಲ ತುಂಬ ಬಿಸಿಬಿಸಿ ಕಾವು ತುಂಬಿತ್ತು. ಜ್ಯೇಷ್ಠ ಕಾಲಿಟ್ಟಿದ್ದೇ ತಡ ಆಕಾಶವೆಂಬೋ ಆಕಾಶ ಕಾರ್ಮೋಡದ ಆಟದ ಬಯಲಾಗಿ ಹೋಯಿತು. ಮದ್ದಾನೆಯ ಹಿಂಡೊಂದು ಘೀಳಿಡುತ್ತ ಧಾವಿಸುತ್ತಿದೆಯೇನೋ ಎಂಬ ಭಾಸ.

ಹಿರಿಯಾನೆ, ಹಿಂದೆಯೇ ಕಿರಿಯಾನೆ, ಜೊತೆಗೊಂದು ಮರಿಯಾನೆ, ಓಡೋಡುತ್ತ ಬರುವ ಧೀರ ಆನೆ, ಅದನ್ನು ಬೆನ್ನಟ್ಟಿ ಬಂದು ಢಿಕ್ಕಿ ಹೊಡೆಯುವ ತುಂಟ ಆನೆ, ಎಲ್ಲ ಆನೆಗಳನ್ನು ರಕ್ಷಿಸಲೆಂಬಂತೆ ಗಂಭೀರವಾಗಿ ಹೆಜ್ಜೆಯಿಡುವ ಒಡೆಯ ಆನೆ, ಗುಂಪಿನೊಂದಿಗೆ ಮುನಿಸಿಕೊಂಡು ಬೇರೆ ಬೇರೆಯಾಗಿ ಓಡುವ ತುಡುಗ ಆನೆ, ಒಂದೇ ಎರಡೇ, ಹಿಂಡು ಹಿಂಡಾಗಿ ಬಂದು ಅಪ್ಪಳಿಸುವ ಕರಿಮೋಡಗಳು.

ಕ್ಷಣ ಮಾತ್ರದಲ್ಲೇ ಬೆಳಕೆಂಬೋ ಬೆಳಕನ್ನು ಮರೆ ಮಾಡಿ ಹಗಲಿನಲ್ಲೇ ರಾತ್ರಿಯಾಗಿದೆಯೆಂಬ ಭಾವವನ್ನು ಹುಟ್ಟಿಸುವ ಕಾರ್ಮುಗಿಲ ಕರಾಮತ್ತು. ಕೋಪಗೊಂಡ ಮದ್ದಾನೆಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡು ಘೀಳಿಡುತ್ತಿವೆಯೆಂದೆನಿಸುವಂತೆ ಆಗಾಗ ಗುಡುಗುಡು ಸದ್ದು. ರೋಷಗೊಂಡ ಹಿರಿಯಾನೆ ಬಿದಿರು ಹಿಂಡಿಗೆ ನುಗ್ಗಿತೆಂಬಂತೆ ಛಟಿಚಟಿಲ್ ಸಿಡಿಲು. ಹೌದು, ಮುಂಗಾರಿನ ಮೆರವಣಿಗೆಯೆಂದರೆ ಅದು ಅತ್ಯಪೂರ್ವವಾದ ಗಜಕೇಳಿಯೇ ಸರಿ.

‘ಧೋ ಧೋ’ ಎಂಬ ಶ್ರುತಿಯೊಂದಿಗೆ ಎಡಬಿಡದೇ ಸುರಿಯುವ ಮಲೆನಾಡಿನ ಮಳೆಯನ್ನು ನೋಡಿದರೆ ವರಕವಿ ದ.ರಾ. ಬೇಂದ್ರೆಯವರ ಗಂಗಾವತರಣ ಪದ್ಯ ನೆನಪಾಗುತ್ತದೆ. ಇಷ್ಟೊಂದು ರಭಸವಾಗಿ ಬೀಳುತ್ತಿರುವ ಈ ಸಲಿಲ ಧಾರೆ ಹರನ ಮುಡಿಯಿಂದಲೋ ಅಥವಾ ಹರಿಯ ತೊಡೆಯಿಂದಲೋ ಬೀಳುತ್ತಿರಬಹುದು ಅಂತಲೇ ಅನ್ನಿಸುತ್ತದೆ. ಪ್ರಾಥಮಿಕಶಾಲೆಯ ಪಠ್ಯಪುಸ್ತಕದಲ್ಲಿ ಓದಿದ್ದ ಪದ್ಯ ನೆನಪಾಗುತ್ತದೆ.

ಮೋಡಗಳ ಜಡೆ ಬಿಚ್ಚಿ ಮೈತೊಳೆದುಕೊಳುತಿಹಳು ಬಯಲ ಭಾಮಿನಿ ಜಗದ ಮಣೆಯ ಮೇಲೆ ಕೇಶ ರಾಶಿಯ ನೀರು ತೊಟ್ಟಿಕ್ಕಿ ಸುರಿಯುತ್ತಿದೆ. ಅದಕ್ಕೇ ಜನವೆನ್ನುವುದು ಮಳೆಯ ಲೀಲೆ ಎಷ್ಟು ಚೆಂದದ ಕವಿಕಲ್ಪನೆಯಿದು! ಸೊಂಪಾದ ಕೇಶಸಂಪತ್ತುಳ್ಳ ಸುಂದರಿಯೊಬ್ಬಳು ಕೂದಲನ್ನು ತೊಳೆದುಕೊಳ್ಳಬೇಕೆಂದು ನಿರ್ಧರಿಸಿ ಮಣೆಯ ಮೇಲೆ ಕೂತು ಅಭ್ಯಂಗವನ್ನು ಆರಂಭಿಸಿದರೆ ಹೇಗಿರುತ್ತದೆ ಎಂದು ಕಲ್ಪನೆ ಮಾಡಿಕೊಳ್ಳೋಣ.

ಅವಳ ಅಗಾಧ ಕೂದಲರಾಶಿ ತೊಳೆಯಬೇಕೆಂದರೆ ಗಂಟೆಗಟ್ಟಲೆ ಸಮಯಬೇಕು ಅದಕ್ಕಿಂತಲೂ ಮುಖ್ಯವಾಗಿ ಹಂಡೆ ಗಟ್ಟಲೆ ನೀರು ಹೊಯ್ದುಕೊಳ್ಳುತ್ತಲೇ ಇರಬೇಕಾಗುತ್ತದೆ. ಆಗ ಬಚ್ಚಲೆಂಬ ವಿಶ್ವದಲ್ಲಿ ಮಳೆಯೋ ಮಳೆ.

ಮಲೆನಾಡಿನ ಮಳೆಯದು ಧೋ ಧೋ ಎಂಬ ಅಬ್ಬರದ ಶ್ರುತಿಯಾದರೆ ಅರೆಮಲೆನಾಡಿನ ಬಯಲುಸೀಮೆಯ ಮಳೆಯ ಧಾಟಿಯೇ ಬೇರೆ. ಇದ್ದಕಿದ್ದಂತೆ ರಪರಪ ರಾಚುವ ಹನಿಗಳೊಂದಿಗೆ ಒಂದು ಅರ್ಧ ಗಂಟೆಯ ಹೊತ್ತು ಸುರಿದು ಭರ್‍ರೆಂದು ಬೀಸುವ ಗಾಳಿಯ ಜೊತೆಗೆ ಸುಯ್ಯನೆ ಹಾರಿ ಹೋಗಿ ಮಾಯವಾಗಿಬಿಡುವ ಮಳೆಯನ್ನು ನೋಡಿದರೆ ಹತ್ತೆಂಟು ಮನೆಗಳಲ್ಲಿ ಕೆಲಸ ಹಿಡಿದುಕೊಂಡ ಹೆಣ್ಣಿನ ನೆನಪಾಗುತ್ತದೆ. ಹೀಗೆ ಬಂದು ರಪರಪ ಬಟ್ಟೆ ಒಗೆದು, ಗಸಗಸ ಪಾತ್ರೆ ತಿಕ್ಕಿ, ಭರಭರ ಕಸಗುಡಿಸಿ ಸರ್‍ರಂತ ಮತ್ತೊಂದು ಮನೆಗೋಡುವ ಅವಸರದಲ್ಲಿದ್ದಾಳೇನೋ ಅನ್ನಿಸುತ್ತದೆ.

ಧಗಧಗ ಬಿಸಿಲೂರುಗಳ ಪೂರ್ತಿ ಬಯಲುನಾಡಿನ ಮಳೆಯೆಂದರೆ ಅಪರೂಪಕ್ಕೆ ದಯಮಾಡಿಸುವ ನೆಂಟರ ದೊಡ್ಡಮ್ಮನಂತೆ. ಊರುತುಂಬ ನೆಂಟರ ಮನೆಗಳಿದ್ದು, ಎಲ್ಲರೂ ‘ನೀ ಬಾ, ನಾ ಬಾ’ ಎಂದು ಕರೆಯುತ್ತಿದ್ದರೆ ಎಲ್ಲೆಂತ ಹೋಗಲಿ, ಎಷ್ಟೆಂತ ಹೋಗಲಿ ಎನ್ನುತ್ತಲೇ ಅಪರೂಪಕ್ಕೆ ಬಂದು ತುಸು ಹೊತ್ತು ಗುಳಿತು ಗಲಗಲ ಮಾತಾಡುವಾಗಲೇ ಇನ್ನೊಂದು ಮನೆ ನೆನಪಾಗಿ ಓಡುವ ಆಕೆಗೆ ಪುರುಸೊತ್ತಾದರು ಎಲ್ಲಿದೆ ಪಾಪ. ಅಲ್ಲೊಬ್ಬರು ಕಾಯುತ್ತಿದ್ದರೆ ಇಲ್ಲೊಬ್ಬರು ಕರೆಯುತ್ತಾರೆ. ಕೂತಲ್ಲಿಗೊಂದು ಫೋನು, ನಿಂತಲ್ಲಿಗೊಂದು ಫೋನು. ದೊಡ್ಡಮ್ಮ ಇಷ್ಟು ಗಡಿಬಿಡಿಯಲ್ಲಿರುವುದರಿಂಲೇ ನೆಟ್ಟಗೆ ನಾಲ್ಕು ಹನಿಯ ಸುರಿಸಿದ್ದೇ ಓಡಿಬಿಡುತ್ತಾಳೆ.

ಇನ್ನು ಕಡಲತಡಿಯಲಿರುವ ಕರಾವಳಿಯ ಮಳೆಯದು ಇದೆಲ್ಲಕ್ಕಿಂತ ವಿಭಿನ್ನವಾದ ರಾಗ. ಒದಿಷ್ಟೂ ಕರುಣೆಯಿಲ್ಲದೆ ಟೀಚರಮ್ಮ ಸಿಟ್ಟಿಗೆದ್ದು ಕೈಯ ಬೆತ್ತವನ್ನು ಬೆನ್ನ ಮೇಲೆ ಝಳಪಿಸಿದಂತೆ ರಪರಪನೆ ರಾಚುವ ಹನಿಗಳು ಮುಖದ ಮೇಲೆ ಬಿದ್ದರೆ ಉರಿಯುವಷ್ಟು ರಭಸವಾಗಿರುತ್ತವೆ. ಆದರೆ ಮಳೆ ನಿಲ್ಲುವುದೇ ತಡ ಮತ್ತೆ ಖಣಖಣ ಸೆಕೆ ಶುರುವಾಗಿಬಿಡುತ್ತದೆ. ಮಳೆಯೊಂದಿಗೇ ಬರುವ ತಂಪು ಅಥವಾ ಛಳಿ ಇಲ್ಲಿ ನಾಪತ್ತೆ. ಪಿರಿಯಡ್ಡು ಮುಗಿದ ಘಂಟೆಯಾದೊಡನೆ ಹೋಗಿಬಿಡುವ ಟೀಚರಂತೆ ಮಳೆ ನಿಂತೊಡನೆ ರುಮುರುಮು ಉಪ್ಪುಗಾಳಿ ಬೀಸಿ ಎಲ್ಲವನ್ನು ಒಣಗಿಸುತ್ತದೆ.

ಮಳೆಸುಂದರಿಯ ನಿಜವೈಭವ ನೋಡಬೇಕೆಂದರೆ ಗುಡ್ಡಬೆಟ್ಟಗಳಿಂದಾವರಿಸಿದ ನಿತ್ಯಹರಿದ್ವರ್ಣ ಕಾಡಿನ ಇಳಿಜಾರುಗಳ ತಪ್ಪಲುಗಳಿಗೆ ಹೋಗಬೇಕು. ‘ರೊಯ್ಯೊ’ ಎಂಬ ಬಗೆಬಗೆ ಸ್ವರಗಳಿಂದ ಕೂಡಿದ ಏರಿಳಿತದ ಸದ್ದುಗದ್ದಲದ ನಡುವೆ ಕಾಲಿಡುವ ಮಳೆರಾಣಿ ತನ್ನ ಮೆರವಣಿಗೆಯಲ್ಲಿ ಗುಡುಗು-ಸಿಡಿಲು-ಮಿಂಚುಗಳ ಹಿಮ್ಮೇಳವನ್ನೂ ತಂದಿರುತ್ತಾಳೆ. ಹಗಲಿರುಳುಗಳ ಎಲ್ಲಾ ಝಾವಗಳಲ್ಲೂ ಬೇರೆಬೇರೆ ರಭಸದೊಂದಿಗೆ ಇಳೆಗೆ ರಾಚುವ ಹನಿಗಳು ದೂರ ದೂರಕ್ಕೂ ಸಿಂಚನಗೈಯಲೆಂದು ಗಾಳಿರಾಯ ಜೋರಾಗಿ ಬೀಸಿ ತನ್ನ ನೆರವಿನ ಹಸ್ತವನ್ನು ಚಾಚುತ್ತಾನೆ. ಬಾನಿನಿಂದ ಸುರಿವ ಮಳೆಗೆ ಸಹಸ್ಪಂದನವೇನೋ ಎನ್ನುವಂತೆ ಭೂಮಿಯಿಂದ ಹೊಗೆಯಂತಹ ಮಂಜು ಮೇಲೇಳುತ್ತದೆ. ಮಳೆ-ಮಂಜುಗಳ ಜಂಟಿ ರಾಗದಲ್ಲಿ ಹಸಿರು ಭೂರಮೆ ಧೂಮಾವೃತ ದೂಕೂಲ ತೊಟ್ಟ ತುಂತುರಿನ ತೇರನೇರಿ ಹೊರಟಂತೆ ಕಾಣುತ್ತಾಳೆ. ಅವಳ ತೇರಿನ ಇಕ್ಕೆಲದಲ್ಲಿ ಉಘೇ ಉಘೇ ಎನ್ನಲಿಕ್ಕೆ ಅನೇಕಾನೇಕ ಝರಿಗಳು ಅಲ್ಲಲ್ಲಿಯೇ ಸೃಷ್ಟಿಯಾಗಿ ಜುಳುಜುಳು ಧುಮುಕುತ್ತವೆ. ಝೀಂ ಝೀಂ, ವಟರ್ ವಟರ್ ಎಂಬ ಬಗೆಬಗೆಯ ಸದ್ದುಗಳೊಂದಿಗೆ ಕಾಡಿನ ಕ್ರಿಮಿಕೀಟಗಳು, ಕಪ್ಪೆಗಳು ತಮ್ಮ ವರ್ಷಾಗಾನದಲ್ಲಿ ತಲ್ಲೀನವಾಗಿರುತ್ತವೆ.

ಮಳೆಯೆಂದರೆ ಅದು ಜೀವಕಾರುಣ್ಯದ ಧಾರೆ. ಎಲ್ಲ ಹುಟ್ಟಿಗೂ ಮೂಲಳಾದ ಆದಿಶಕ್ತಿ ತನ್ನ ಮಕ್ಕಳ ಪ್ರಾಣ-ತ್ರಾಣಗಳಿಗೆ ಶಕ್ತಿಯೊದಗಿಸುವುದಕ್ಕಾಗಿ ಮಮತೆಯಿಂದ ಕಳಿಸುವ ವಾತ್ಸಲ್ಯದೊಸಗೆಯದು. ತಪ್ಪು ಮಾಡಿದ ಮಗುವಿಗೆ ರಪರಪ ಎರಡೇಟು ಬಿಗಿದರೂ ಅವರಿಂದ ಒಳಿತನ್ನೇ ಮಾಡಿಸುವ ಅಮ್ಮನಂತೆ ಮಳೆ ರಪರಪ ಸುರಿದು ನೆಲದಾಳದ ಕಸುವನ್ನು ಜಿಗಿಜಿಗಿ ಮೊಳಕೆಯುಕ್ಕಿಸುತ್ತಾಳೆ. ಹೂ-ಹಸಿರಿನ ಕಿಲಕಿಲ ನಗೆಯರಳಿಸುತ್ತಾಳೆ.


ಚಿತ್ರ: ಅನೂಪ್‌ ಆರ್‌.ತಿಪ್ಪೇಸ್ವಾಮಿ

ಮಳೆಯೆಂದರೆ ಇಳೆಯ ಭೂರೂಪಕ್ಕಷ್ಟೇ ಕಳೆ ಹುಟ್ಟಿಸುವುದಿಲ್ಲ ಅದು ಜೀವರಾಶಿಗಳ ತನು-ಮನದಲ್ಲಿಯೂ ಸೃಷ್ಟಿಶೀಲಚಲನೆಯ ತರಂಗಗಳನ್ನು ಸೃಜಿಸುತ್ತದೆ. ಬೇಸಿಗೆಯಲ್ಲಿ ಹಪ್ಪಳ-ಸಂಡಿಗೆ-ಬಾಳಕ ಅಂತೆಲ್ಲ ಓಡಾಡಿ ಕೆಲಸ ಮಾಡಿ, ಆ ಊರಿನ ಮದುವೆ, ಈ ಊರಿನ ಮುಂಜಿ ಅಂತ ತಿರುಗಾಡಿ, ಮಕ್ಕಳ ರಜೆ ಗದ್ದಲ-ಗೌಜುಗಳನ್ನು ಅನುಭವಿಸಿದ ಅಮ್ಮಂದಿರು ಮೋಡಗಟ್ಟಲಾರಂಭಿಸಿದ್ದೇ ಅಂತರ್ಮುಖಿಗಳಾಗುತ್ತಾರೆ. ಮಳೆಯೆಂದರೆ ನೆನಪು. ಮರೆವಿನ ಮಹಾನದಿಯೊಂದು ತೇಲಿಸಿಕೊಂಡು ಹೋಗಿದ್ದ ನೆನಪನ್ನು ಮೋಡದ ಬೊಗಸೆ ಇಷ್ಟಿಷ್ಟೇ ಸುರಿಸುತ್ತಾ ಹೋದಂತೆ ಮನಸ್ಸು ಒದ್ದೆಯಾಗುತ್ತಹೋಗುತ್ತದೆ. ರುಮ್ಮನೆ ಬೀಸಿದ ಗಾಳಿಗೆ ಥರಥರ ಕಂಪಿಸುವ ಕಣ್ಣೆವೆ ಮೇಲೆ ಹಳೆಯ ರಾಗದ ಸುಳಿ ಸುರುಳಿ ಸುರುಳಿಯಾಗಿ ಬಂದು ಕೂರುತ್ತದೆ. ಎಲ್ಲ ಕಟ್ಟುಪಾಡುಗಳನ್ನು ಹರಿದುಕೊಂಡ ಅಂತರ್ಜೀವ ಚಂಗನೆ ನೆಗೆಯುತ್ತ ಅಂಗಳದ ತುಂಬ ಕುಣಿಯುತ್ತದೆ. ಆ ಗಿಡ ಈ ಗಿಡ ಎನ್ನದೇ ಎಲ್ಲ ಕಡೆಯೂ ಅದರ ಚಂಗೂಲಿ ಕುಣಿತ. ಇನ್ನಿದನ್ನು ಕಟ್ಟುವುದು ಕಷ್ಟ. ಹತ್ತಿರ ಹೋದಷ್ಟೂ ದೂರ ನೆಗೆಯುತ್ತದೆ.

ಧಾರೆಧಾರೆಯಾಗಿ ಸುರಿಯುವ ಮಳೆ ನೆನಪಲ್ಲಿ ಬಾಲ್ಯದ ಸ್ಮೃತಿದೋಣಿಗಳು ತೇಲಿಕೊಂಡು ಬರುತ್ತವೆ. ಕಿರುಗಾಲುವೆಗಳಲ್ಲಿ ಕಾಗದದ ದೋಣಿ ತೇಲಿಬಿಟ್ಟಿದ್ದು, ಗಾಳಿಯ ಹೊಡೆತಕ್ಕೆ ಉಲ್ಟಾ ಹೊಡೆದ ಕೊಡೆಯನ್ನು ಸರಿಪಡಿಸಿಕೊಳ್ಳಲಾರದೇ ತೊಯ್ದು ತೊಪ್ಪಡಿಯಾಗಿದ್ದು, ಒಣಗದ ಚಡ್ಡಿಗಳನ್ನು ಬಿಸಿ ಬಾಣಲೆಯಲ್ಲಿ ಅಮ್ಮ ಹುರಿದುಕೊಟ್ಟಾಗ ಬಿರುಸುಗೊಂಡ ಇಲ್ಯಾಸ್ಟಿಕ್ ಚುಚ್ಚಿದರೂ ಆ ಚಡ್ಡಿ ಫ್ರೈಗಳನ್ನು ಹಾಕಿಕೊಳ್ಳಲೇಬೇಕಾದ ಅನಿವಾರ್ಯತೆಗಾಗಿ ಇಡೀ ಮಳೆಗಾಲ ಮನೆ ಮಂದಿಯೆಲ್ಲ ಬಿಸಿ ಕುಕ್ಕರ್ ಗಳ ಮೇಲೆ ತಮ್ಮ ಚಡ್ಡಿಯೊಣಗಿಸುವ ಸರದಿಗಾಗಿ ಕಾಯಬೇಕಾದದ್ದು, ಕಣ್ಮರೆಯಾಗುವ ಕರೆಂಟಿನಿಂದ ಕತ್ತಲು ಕೂಪವಾಗಿದ್ದ ಕ್ಲಾಸುಗಳಲ್ಲಿ ತಮ್ಮ ದೊಡ್ಡ ಕಂಠದಿಂದ ಮಾತ್ರ ತಮ್ಮ ಇರುವಿಕೆಯನ್ನು ನಿರೂಪಿಸುತ್ತಿದ್ದ ಟೀಚರ್, ಸುತ್ತಲೂ ಬಿಡಿಸಿಟ್ಟ ಕೊಡೆಗಳು ತುಂಬಿದ ಜಾತ್ರೆಯಲ್ಲಿ ಧೋ ಎನ್ನುವ ಮಳೆ ಸದ್ದನ್ನು ಮೀರಿಸುವಂತೆ ಹೋ ಎಂದು ಹುಯಿಲಿಡುತ್ತಿದ್ದ ಹುಡುಗರು ಒಂದೇ ಎರಡೇ ರಾಶಿರಾಶಿ ನೆನಪುಗಳು ಧುಮ್ಮಿಕ್ಕಿ ಹರಿಯುತ್ತವೆ.

ಹರಿದು ಬರುವ ಸ್ಮೃತಿಧಾರೆಯಲ್ಲಿ ಕೊಚ್ಚಿಕೊಂಡು ಬರುವುದು ತಾರುಣ್ಯದ ಹಸಿಬಿಸಿ ನೆನಪುಗಳು. ತಡವಾದ ತರಗತಿಗಳಿಗೆ ತೊಯ್ದ ಲಂಗವನ್ನು ತೊಡರುವಂತೆ ನಡೆದುಕೊಂಡು ಹೋಗುವಾಗ ಕ್ಲಾಸಿನೊಳಗೆ ಹೋಗದೇ ಕಾಯುತ್ತ ಹೊರಗೆ ನಿಂತಿರುತ್ತಿದ್ದ ಆರಾಧಕ ಹುಡುಗರು. ಉಪನ್ಯಾಸಕರು ಕಾರಣ ಕೇಳುವ ಮೊದಲೇ ಮಳೆಯ ಅನಾಹುತವನ್ನು ಬಣ್ಣಿಸುತ್ತ ತಮ್ಮ ಹುಡುಗಿಯರನ್ನು ರಕ್ಷಿಸಿಕೊಳ್ಳುವ ಭಕ್ತವೃಂದ. ಕ್ಲಾಸು ಬಿಟ್ಟ ಮೇಲೆ ಜಡಿಮಳೆಯನ್ನೂ ಲೆಕ್ಕಿಸದೆ ತಮ್ಮ ತಮ್ಮ ದೇವಿಯರು ಮನೆ ಸೇರಿಕೊಳ್ಳುವ ತನಕವೂ ಹಿಂದಿಂದೇ ಹಿಂಬಾಲಿಸುವ ಭಕ್ತಮಂಡಳಿಯ ನಿಷ್ಠೆ. ಮಳೆ ಜೋರಾದಾಗ ತಮಗೆ ಪಾಠ ಕೇಳುತ್ತಲೇ ಎಂದು ಬೇಕು ಬೇಕೆಂದೇ ಕೂಗಿ ಗದ್ದಲವೆಬ್ಬಿಸಿ ರಜೆ ಕೊಡಿಸುವ ಉಢಾಳ ಠೋಳಿ. ತುಂಬಿದ ರಸ್ತೆಗಳಲ್ಲಿ ಜಿಲ್ಲನೆ ನೀರು ಹಾರಿಸುತ್ತ ಬೈಕು ಓಡಿಸಿ ಹುಡುಗಿಯರ ಲಕ್ಷ ಸೆಳೆಯಲೆತ್ನಿಸುವ ಪಡ್ಡೆಗಳು, ಕೇಳುತ್ತಿರುವ ಪಾಠವನ್ನು ಮೀರಿ ಘಮ್ಮನೆ ಮೂಗಿಗೆ ಅಡರುತ್ತಿದ್ದ ಕ್ಯಾಂಟೀನ ಬೋಂಡಾದ ವಾಸನೆ, ಮುಂದಿನ ಪಿರಿಯಡ್ಡು ಚಕ್ಕರ್ ಹೊಡೆದು ತಿಂದು ಬರಲೇಬೇಕೆಂದು ಒತ್ತಡ ತರುತ್ತಿದ್ದ ಅದರ ರುಚಿಯ ಘಮಲು ಆಹಾ ಮಳೆಯ ಸೊಗಸಿನ ಆಸ್ವಾದನೆಗೆ ಗೆಳೆಯರ ಬಳಗದ ಸಹವಾಸವಿದ್ದರೆ ಅದು ಸ್ವರ್ಗದ ಹೆಬ್ಬಾಗಿಲಿನ ಪ್ರವೇಶಕ್ಕೆ ಪಾಸ್ ಸಿಕ್ಕಂತೆಯೇ ಸರಿ.

ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತ್ದೆತಿ. ಮನದ ಕಿಡಕಿಯ ಸರಳುಗಳ ಮೇಲೆ ಹಳೆಯ ನೆನಪಿನ ಧಾರೆ ಸುರಿಯುತ್ತಿದೆ. ಹಳೆಯ ಬೇಸರಗಳು ಕೊಚ್ಚಿ ಹೋಗುವಂತೆ ಮತ್ತು ಹೊಸ ಹುಮ್ಮಸ್ಸಿನ ಹನಿಗಳು ಉಕ್ಕುಕ್ಕಿ ಜೀವಚೇತನವು ಹಸಿರಾಗಿ ಸೊಕ್ಕುವಂತೆ ಮಾಡುವುದೇ ಮಳೆಯ ಅಂತಃಶಕ್ತಿ. ಕಣ್ಣು ಹರಿದಷ್ಟೂ ದೂರ ಹಸಿರ ಮೆರಣಿಗೆ. ಕಲ್ಲಿನ ಪಾಗಾರವೂ ಚಿಗರುಕ್ಕಿಸಿ ಹಸಿರಾಗಿ ಅದಮ್ಯ ಜೀವಪ್ರೀತಿಯ ಸಂಕೇತವಾಗಿ ನಿಂತಿದೆ. ನೀಲಿಮೋಡಗಳ ದಂಡನ್ನು ಎದೆಯಂಗಳದಲ್ಲಿ ಆಡಿಕೊಳ್ಳಲು ಬಿಟ್ಟ ಮುಗಿಲಮ್ಮ ಬೆಟ್ಟದ ಮುಡಿಬಿಚ್ಚಿ ಬಾಚುತ್ತಿದ್ದಾಳೆ. ಬೆಳಗಾದರೂ ಏಳಲು ಬೇಜಾರೆನ್ನುವ ಸೊಂಬೇರಿ ಸೂರ್ಯನ ದುಪ್ಪಟಿ ಕಿತ್ತೆಸೆಯಲಿಕ್ಕೆ ಭಲೇ ಸರ್ಕಸ್ ಮಾಡುವ ಗಾಳಿಗೆ ಏದುಬ್ಬುಸವೇ ಬರುತ್ತಿದೆ. ಸೊರಸೊರ ಮೂಗೇರಿಸುವ ಚಂದ್ರನ ಮೇಲೆ ಕರುಣೆಯುಕ್ಕಿ ಕಷಾಯಕ್ಕಿಟ್ಟಿದ್ದೇನೆ. ಕುದಿಯುತ್ತಿದೆ ನೀರು ಸಳಮಳ. ಹೊರಗೆ ಮಳೆಯ ಸದ್ದು ದಳದಳ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT