ಶನಿವಾರ, ಜೂಲೈ 11, 2020
29 °C
ಏಳು ದಿನದ ಪರೀಕ್ಷೆಯಲ್ಲಿ ನೆಗೆಟಿವ್‌: ಜಿಲ್ಲೆಯಲ್ಲಿ 111 ಸಕ್ರಿಯ ಪ್ರಕರಣ

29 ಮಂದಿ ಗುಣಮುಖ: ಗುಲಾಬಿ ನೀಡಿ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ 19 ಸೋಂಕಿನಿಂದ ಗುಣಮುಖರಾದ 29 ಮಂದಿಗೆ ಗುಲಾಬಿ ಹೂವು, ಮಾಸ್ಕ್‌ ನೀಡಿ, ಚಪ್ಪಾಳೆಯೊಂದಿಗೆ ಗುರುವಾರ ಸಂಜೆ ಬೀಳ್ಕೊಡಲಾಯಿತು.

29 ಜನರು ಪೈಕಿ 11 ಮಹಿಳೆಯರು, 19 ಮಂದಿ ಪುರುಷರು 6 ಮಕ್ಕಳು ಇದ್ದರು. ಹೊಳೆನರಸೀಪುರ ತಾಲ್ಲೂಕಿನ 6 ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ 23 ಮಂದಿ, ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಆಸ್ಪತ್ರೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಸಾರಿಗೆ ಬಸ್‌ ಮೂಲಕ ಚನ್ನರಾಯಪಟ್ಟಣ ತಾಲ್ಲೂಕಿನ ಅವರ ಸ್ವಗ್ರಾಮಗಳಿಗೆ ಕಳುಹಿಸಲಾಯಿತು. ಎಲ್ಲರೂ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯರು ಸೂಚಿಸಿದರು.

ಜಿಲ್ಲಾ ಕೋವಿಡ್‌– 19 ಆಸ್ಪತ್ರೆಯಾಗಿರುವ ಹಿಮ್ಸ್‌ ಆಸ್ಪತ್ರೆಯಲ್ಲಿ ಇವರು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸಂಪೂರ್ಣ ಗುಣಮುಖರಾದ ಇವರನ್ನು ಹಿಮ್ಸ್‌ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಆಸ್ಪತ್ರೆ ಸಿಬ್ಬಂದಿ, ಜಿಲ್ಲಾಧಿಕಾರಿ ಆರ್.ಗಿರೀಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ಸುದ್ದಿಗಾರರ ಜತೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ‘ಜಿಲ್ಲೆಯಲ್ಲಿ ಈವರೆಗೆ 140 ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿವೆ. ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು 7 ದಿನಗಳ ನಂತರ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್‌ ವರದಿ ಬಂದರೆ ಬಿಡುಗಡೆ ಮಾಡಲಾಗುವುದು. ಅದರಂತೆಯೇ ಜಿಲ್ಲೆಯಲ್ಲಿ 29 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಮಟ್ಟಿಗೆ ಅತ್ಯಂತ ಸಂತೋಷದ ಸುದ್ದಿ. ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ಸೀಲ್ ಹಾಕಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಅವರ ಮೇಲೆಯೂ ನಿಗಾ ವಹಿಸಲಾಗುತ್ತದೆ’ ಎಂದು ವಿವರಿಸಿದರು.

‘ಜಿಲ್ಲಾ ಹಾಗೂ ರಾಜ್ಯಮಟ್ಟದ ತಜ್ಞ ವೈದ್ಯರ ಸಮಿತಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಸಲಹೆ, ಸೂಚನೆಗಳನ್ನು ಪಡೆಯಲಾಗುತ್ತಿದೆ. ಬಿಡುಗಡೆಯಾದವರು ಸ್ವಗ್ರಾಮಕ್ಕೆ ಮರಳುವರು. ಅವರ ಮನೆ ಮುಂದೆ ಕ್ವಾರಂಟೈನ್‌ ಪೋಸ್ಟರ್‌ ಅಂಟಿಸಿ, ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿ ಪಡೆಯಲಾಗುವುದು. ಕ್ವಾರಂಟೈನ್ ಆ್ಯಪ್‌ ಅನ್ನು ಮೊಬೈಲ್‌ಗೆ ಅಳವಡಿಸಿದ್ದು, ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಗಂಟೆಗೊಮ್ಮೆ ಅವರು ಮನೆಯಲ್ಲಿರುವ ವಿಡಿಯೊ ಹಾಕಬೇಕು. ಅದನ್ನು ಹೊರತಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಆಯಾ ತಾಲ್ಲೂಕು ವೈದ್ಯಾಧಿಕಾರಿಗಳ ಮೂಲಕ ಮಾಹಿತಿ ತರಿಸಿಕೊಳ್ಳುತ್ತಾರೆ’ ಎಂದು ವಿವರಿಸಿದರು.

ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ‘ಚನ್ನರಾಯಪಟ್ಟಣ ತಾಲ್ಲೂಕಿನ 23 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು 700ಕ್ಕೂ ಹೆಚ್ಚು ಜನರು ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದಾರೆ. ಅದರಲ್ಲಿ 350 ಜನರಿಗೆ ನೆಗೆಟಿವ್‌ ವರದಿ ಬಂದಿದೆ. ಇದೇ ರೀತಿ ಕೊರೊನಾ ಸೋಂಕಿತರು ಬೇಗ ಗುಣಮುಖರಾಗಲಿ’ ಎಂದು ಆಶಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು