ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣಕ್ಕೆ ಬೇಸತ್ತ ಜನತೆ: ಸಚಿವೆ ಶೋಭಾ ಕರಂದ್ಲಾಜೆ

Last Updated 21 ನವೆಂಬರ್ 2021, 16:05 IST
ಅಕ್ಷರ ಗಾತ್ರ

ಹಾಸನ: ಕುಟುಂಬ ರಾಜಕಾರಣಕ್ಕೆ ಜನರು ಬೇಸತ್ತಿದ್ದಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಿಜೆಪಿ ಅಭ್ಯರ್ಥಿಗೆಲ್ಲಿಸಬೇಕು ಎಂದು ಕೇಂದ್ರಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜಾತಂತ್ರ ನೀತಿ ಜಾರಿಗೆ ಬರಬೇಕು. ವಿಧಾನಸಭೆಗೆ ಎಚ್.ಡಿ.ರೇವಣ್ಣ, ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸಾಕು. ಕುಟುಂಬದಿಂದ ಮತ್ತೊಬ್ಬರು ಬೇಡವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಅಣಕ ಮಾಡುವಂತೆ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ವಿಶ್ವನಾಥ್‌ ಗೆಲ್ಲಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಅಡಿಪಾಯ ಹಾಕಬೇಕು ಎಂದು ಕರೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಮುಲಾಯಂ ಸಿಂಗ್‌ ಯಾದವ್‌ ಕುಟುಂಬದಲ್ಲಿ ಐದು ಜನರು ರಾಜಕಾರಣದಲ್ಲಿದ್ದರೆ, ದೇವೇಗೌಡರ ಕುಟುಂಬದಲ್ಲಿ ಎಂಟು ಜನರು ರಾಜಕಾರಣದಲ್ಲಿದ್ದಾರೆ. ದೇಶದಲ್ಲಿ ಯಾವ ಕುಟಂಬದಲ್ಲೂ ಇಷ್ಟು ಮಂದಿ ರಾಜಕಾರಣ ಮಾಡುತ್ತಿಲ್ಲ.ಪಕ್ಷದಲ್ಲಿ ಕಾರ್ಯಕರ್ತರು ಇಲ್ಲವೇ ಎಂದು‍ಪ್ರಶ್ನಿಸಿದರು.

ಎಚ್.ಎಂ.ವಿಶ್ವನಾಥ್ ಅವರ ಬಳಿ ಹಣ ಇಲ್ಲ. ಕುಟುಂಬ ರಾಜಕಾರಣ ಪಕ್ಕಕ್ಕೆ ಸರಿಸಿ ಪಕ್ಷದ ಅಭ್ಯರ್ಥಿಯನ್ನು
ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಮಾತನಾಡಿ, ತುರ್ತು ಪರಿಸ್ಥಿತಿ ವೇಳೆ ಮಾಲೆಕಲ್ ತಿರುಪತಿ, ಮಂಜರಾಬಾದ್ ಕೋಟೆ, ಬೇಲೂರು ದೇವಸ್ಥಾನದಲ್ಲಿ ಸಾಕಷ್ಟು ಸಭೆ ನಡೆಸಿದ್ದೇವೆ. ಬಿ.ಬಿ.ಶಿವಪ್ಪ ಅವರು ನನ್ನ ರಾಜಕೀಯ ಗುರು. ನನ್ನ ಹಿರಿತನ ಪರಿಗಣಿಸಿ ಪಕ್ಷ ಟಿಕೆಟ್ ನೀಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಜೀವಂತವಾಗಿವೆ. ನನ್ನನ್ನು ಆಯ್ಕೆ ಮಾಡಿದರೆ, ಅವುಗಳನ್ನು ಪರಿಷತ್‌ನಲ್ಲಿ ಪ್ರಸ್ತಾಪಿಸಿ ಪರಿಹಾರ
ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಮಂಡಲದ ಅಧ್ಯಕ್ಷರು ಜವಾಬ್ದಾರಿ ತೆಗೆದುಕೊಂಡು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಕೊರೊನಾ ಸಂಕಷ್ಟದಲ್ಲಿ ಜನರ ಕಷ್ಟಗಳಿಗೆ ಸರ್ಕಾರ ಧಾವಿಸಿದೆ ಎಂದರು.

ಸಂಸದ ಡಿ.ವಿ.ಸದಾನಂದ ಗೌಡ ಮಾತನಾಡಿ, ದೇವೇಗೌಡರ ಕುಟುಂಬದವರನ್ನೇ ಆಯ್ಕೆ ಮಾಡಿದರೆ ಹಾಸನ ಸ್ಥಳೀಯ ಸಂಸ್ಥೆಗೆ ಅಪಕೀರ್ತಿ ಬರುತ್ತದೆ. ಜೆಡಿಎಸ್‌ಪಕ್ಷದಿಂದ ಸಾಕಷ್ಟು ಮಂದಿ ಹೊರ ಬರುತ್ತಿದ್ದಾರೆ. ಜಿ.ಟಿ.ದೇವೇಗೌಡ ಹೊರಗೆ ಬಂದಿದ್ದಾರೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಸದಸ್ಯರನ್ನು ಖರೀದಿ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.

ಮುಖಂಡ ಎ.ಮಂಜು ಮಾತನಾಡಿ, ಜೆಡಿಎಸ್‌ ಸೋಲಿಸಲು ತಂತ್ರಗಾರಿಕೆ ಬಳಸಬೇಕು. ಮೊದಲ ಮತವನ್ನು
ಪಕ್ಷದ ಅಭ್ಯರ್ಥಿಗೆ ನೀಡಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಸುರೇಶ್‌ ಸ್ವಾಗತಿಸಿದರು, ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್‌ನಿರೂಪಿಸಿದರು.

ಸಚಿವ ಎಸ್.ಅಂಗಾರ, ಮುಖಂಡ ರಾದ ಬಸವರಾಜ್, ರೇಣುಕುಮಾರ್, ನವಿಲೆ ಅಣ್ಣಪ್ಪ, ನಗರಸಭೆ ಅಧ್ಯಕ್ಷ
ಮೋಹನ್ ಕುಮಾರ್, ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಈಶ್ವರ್, ಹುಡಾ ಅಧ್ಯಕ್ಷ ಲಲಾಟ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT