ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ತೆರಳಿ ಅರಿವು ಮೂಡಿಸಿದ ಮಕ್ಕಳು

ಗವೇನಹಳ್ಳಿಯಲ್ಲಿ ‘ಪ್ಲಾಸ್ಟಿಕ್‌ ಬಂಧನ ಪರಿಸರ ಸ್ಪಂದನ’ ಜಾಥಾ
Last Updated 3 ಡಿಸೆಂಬರ್ 2022, 14:44 IST
ಅಕ್ಷರ ಗಾತ್ರ

ಹಾಸನ: ಭೂವನಹಳ್ಳಿ ಗ್ರಾಮ ಪಂಚಾಯಿತಿ, ಗವೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಗವೇನಹಳ್ಳಿ ಗ್ರಾಮದಲ್ಲಿ ‘ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ’ ಜಾಥಾ, ಪ್ಲಾಸ್ಟಿಕ್ ಸಂಗ್ರಹ, ವರ್ಗೀಕರಣ ಹಾಗೂ ಬಾಟಲಿ ಇಟ್ಟಿಗೆ ತಯಾರಿಕೆ ಚಟುವಟಿಕೆ ಶನಿವಾರ ನಡೆಯಿತು.

ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಟ್ಟಾಗಿ ಗವೇನಹಳ್ಳಿ ಗ್ರಾಮದ ಬೀದಿಗಳಿಗೆ ತೆರಳಿ ಮನೆಯವರಿಗೆ ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳನ್ನು ತಿಳಿಹೇಳಿ, ಪ್ಲಾಸ್ಟಿಕ್ ಸಂಗ್ರಹಿಸಿದರು.

9 ಗುಂಪುಗಳಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಕಸವನ್ನು ಊರಿನ ದೇವಸ್ಥಾನದ ಮುಂದೆ, ಸಾರ್ವಜನಿಕವಾಗಿ ಮರು ನವೀಕರಣಗೊಳ್ಳುವ ಹಾಗೂ ಮರು ನವೀಕರಣಗೊಳ್ಳಲಾರದ ಪ್ಲಾಸ್ಟಿಕ್ ಅನ್ನು ವರ್ಗೀಕರಿಸಲಾಯಿತು. ಮರು ನವೀಕರಣ ಮಾಡಲಾಗದ ಪ್ಲಾಸ್ಟಿಕ್ ಅನ್ನು ಬಾಟಲಿಗಳೊಳಗೆ ತುಂಬಿ ಪ್ಲಾಸ್ಟಿಕ್ ಇಟ್ಟಿಗೆಯನ್ನು ತಯಾರಿಸಲಾಯಿತು.

ಮರು ನವೀಕರಿಸಬಲ್ಲ ಪ್ಲಾಸ್ಟಿಕ್ ಅನ್ನು ಒಟ್ಟು ಮಾಡಿ ಚೀಲದಲ್ಲಿ ಪ್ರತ್ಯೇಕವಾಗಿ ತುಂಬಲಾಯಿತು. ಈ ಸಾಮೂಹಿಕ ಪ್ರಕ್ರಿಯೆಯಲ್ಲಿ ಸುಮಾರು 65 ಪ್ಲಾಸ್ಟಿಕ್ ಇಟ್ಟಿಗೆಗಳು ಹಾಗೂ ನಾಲ್ಕು ಚೀಲ ನವೀಕರಿಸಬಲ್ಲ ಪ್ಲಾಸ್ಟಿಕ್ ಸಂಗ್ರಹಿಸಿ ಶಾಲೆಯ ಗೋದಾಮಿನಲ್ಲಿ ಇಡಲಾಯಿತು.

ಭೂವನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಬಾಟಲಿಗೆ ಪ್ಲಾಸ್ಟಿಕ್ ಕಸ ತುಂಬುವುದರ ಮೂಲಕ ಉದ್ಘಾಟಿಸಿದರು. ಪ್ಲಾಸ್ಟಿಕ್ ಕಸವನ್ನು ಬಾಟಲಿನ ಒಳಗಡೆ ತುಂಬಿ ಅದನ್ನು ಇಟ್ಟಿಗೆಯ ರೂಪದಲ್ಲಿ ಬಳಸುವ ಯೋಜನೆ ಪರಿಸರಕ್ಕೆ ಪೂರಕ. ಇದನ್ನು ಪ್ರತಿ ಮನೆಯಲ್ಲಿ ಮಾಡಿದರೆ ಇಡೀ ವ್ಯವಸ್ಥೆಗೆ ತಲೆ ನೋವಾಗಿರುವ ಪ್ಲಾಸ್ಟಿಕ್ ಕಸವನ್ನು ನಿಯಂತ್ರಿಸುವ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಜ್ಞಾಪೂರ್ವಕ ಪರಿಹಾರವಾಗಲಿದೆ ಎಂದು ಹೇಳಿದರು.

ಸಮಾರೋಪದಲ್ಲಿ ಮಾತನಾಡಿದ ಎನ್.ಆರ್.ಎಲ್.ಎಂ ಸಹಾಯಕ ಯೋಜನಾಧಿಕಾರಿ ಎಚ್.ರವಿ, ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಚಟುವಟಿಕೆಯಿಂದ 65 ಇಟ್ಟಿಗೆಗಳು ಹಾಗೂ ನಾಲ್ಕು ಚೀಲ ನವೀಕರಿಸಬಲ್ಲ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಇದು ಕಸವನ್ನು ರಸ ಮಾಡುವ ಸರಳ ಮತ್ತು ಆಕರ್ಷಕ ಚಟುವಟಿಕೆ. ಪ್ರತಿ ಮನೆಯಲ್ಲೂ ಇಂತಹ ಚಟುವಟಿಕೆಯನ್ನು ಮಾಡಿದರೆ ಪ್ಲಾಸ್ಟಿಕ್ ಕಸದಿಂದ ಒಂದಿಷ್ಟು ಹಣ, ಸ್ವಚ್ಛತೆ, ಸಂತೃಪ್ತಿ ಮೂಡಲಿದೆ ಎಂದು ಹೇಳಿದರು.

ಕಸ ವಿಂಗಡಣೆ ಮಾಡುವ ವಿಧಾನವನ್ನು ಬಿಜಿವಿಎಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಹಮದ್ ಹಗರೆ, ಉಪಾಧ್ಯಕ್ಷ ಡಾ. ಮಂಜುನಾಥ್, ಸಹ ಕಾರ್ಯದರ್ಶಿ ನಾಗೇಶ್, ಜಿಲ್ಲಾ ಸಮಿತಿ ಸದಸ್ಯೆ ಮೋನಿಕಾ ಪ್ರಾಯೋಗಿಕವಾಗಿ ತಿಳಿಸಿದರು.

ಸರ್ಕಾರಿ ಪ್ರೌಢಶಾಲೆ ಇಕೋ ಕ್ಲಬ್ ಸಂಚಾಲಕಿ ಭಾರತಿ ಹಾಗೂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ವೇಣುಗೋಪಾಲ್ ಸಂಚಾಲನೆ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ಕ್ಲಿಯರ್ ಇನ್ ಸಂಸ್ಥೆಯ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಸ್ಥಳೀಯ ಸಹಾಯಕ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT