ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಗುಂಡಿ ಮುಚ್ಚಿಸಲು ಆಗ್ರಹಿಸಿ ರಸ್ತೆ ಉಳುಮೆ ಮಾಡಿ ಜೋಳ ಬಿತ್ತನೆ

Last Updated 26 ಮೇ 2020, 16:46 IST
ಅಕ್ಷರ ಗಾತ್ರ

ಹಾಸನ: ನಗರ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚಿಸಲು ಆಗ್ರಹಿಸಿ ಜೆಡಿಎಸ್ ಮುಖಂಡ ಅಗಿಲೇಯೋಗೇಶ್‌ ನೇತೃತ್ವದಲ್ಲಿ ಮಂಗಳವಾರ ನಗರದ ಹೊಸಲೈನ್‌ ರಸ್ತೆಯನ್ನು ಉಳುಮೆ ಮಾಡಿ ಜೋಳ ಬಿತ್ತನೆ ಮಾಡುವ ಮೂಲಕ ನೂತನ ಪ್ರತಿಭಟನೆ ನಡೆಸಿದರು.

ಈ ವೇಳೆ ಸುದ್ದಿಗಾರರ ಜೊತೆ ಜೆಡಿಎ‌ಸ್‌ ಮುಖಂಡ ಅಗಿಲೇ ಯೋಗೇಶ್‌ ಮಾತನಾಡಿ, ‘ಕಟ್ಟಿನಕೆರೆ ಮಾರುಕಟ್ಟೆ ವಿಚಾರದಲ್ಲಿ ಶಾಸಕ ಪ್ರೀತಂ ಜೆ.ಗೌಡ ಅವರು ನಮ್ಮ ವಿರುದ್ಧ ಆರೋಪ ಮಾಡಿ ನಮ್ಮನ್ನು ನಿರುದ್ಯೋಗಿ ರಾಜಕಾರಣಿಗಳು ಎಂದು ಟೀಕಿಸಿದ್ದರು. ಹಾಗಾಗಿ ಇಂದು ಹಾಸನದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ಜೋಳ ಬಿತ್ತನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ’ ಎಂದರು.

‘ಅಮೃತ್‌ ಯೋಜನೆಗೆ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆದು ಎರಡು ವರ್ಷ ಆಗಿದೆ. ಮಳೆಗಾಲ ಆರಂಭವಾಗುತ್ತಿದ್ದು, ರಸ್ತೆಗಳು ಸಂಪೂರ್ಣ ಗುಂಡಿಬಿದ್ದಿವೆ. ಹೀಗಾಗಿ ಜನರು ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ರಸ್ತೆ ದುರಸ್ತಿಮಾಡಲು ಶಾಸಕರಿಗೆ ಭಾನುವಾರದವರೆಗೂ ಗಡುವು ನೀಡಲಾಗಿತ್ತು. ಆದರೆ ಈವರೆಗೂರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿಲ್ಲದ್ದರಿಂದ ಹೊಸ ಲೈನ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು’ ಎಂದು ಹೇಳಿದರು.

‘ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪಅವರು ₹ 40 ಕೋಟಿ ಅನುದಾನ ನೀಡಿದ್ದಾರೆ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಹೇಳಿದ್ದಾರೆ. ಇವರು ಯಾವಾಗ ಪ್ರಸ್ತಾವ ಸಲ್ಲಿಸಿದ್ದರು? ಅನುಮೋದನೆ ನೀಡಿದವರು ಯಾರು? ಯಾರು ಹಣ ಬಿಡುಗಡೆ ಮಾಡಿದ್ದಾರೆ? ಎಂಬುದನ್ನು ಬಹಿರಂಗ ಪಡಿಸಲಿ. ಶಾಸಕ ರೇವಣ್ಣ ಅವರು ತಂದಿರುವ ಅನುದಾನವನ್ನೇ ತಾವು ತಂದಿದ್ದು ಎಂದು ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

‘ಹಾಸನ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎನ್ನುತ್ತಾರೆ. ಶಾಸಕರಾದ ಬಳಿಕ ಕ್ಷೇತ್ರಕ್ಕೆ ಅವರ ಕೊಡುಗೆ ಏನು ತಿಳಿಸಲಿ’ ಎಂದು ಒತ್ತಾಯಿಸಿದರು.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಮುಖಂಡ ಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT