ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ ಠಾಣೆ ಪಿಎಸ್ಐ ಆತ್ಮಹತ್ಯೆ

Last Updated 31 ಜುಲೈ 2020, 14:39 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ (ಹಾಸನ): ಚನ್ನರಾಯಪಟ್ಟಣ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಎಲ್‌.ಎನ್‌.ಕಿರಣ್‌ ಕುಮಾರ್ (37) ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ದಿನವಾದ್ದರಿಂದ ಅವರ ಪತ್ನಿ ತವರಿಗೆ ಹೋಗಿದ್ದರು. ಕಿರಣ್‌ ಸಹ ಮಾವನ ಮನೆಗೆ ಹೋಗಿ ಉಪಾಹಾರ ಸೇವಿಸಿ ಬಂದು ಕೆಲಸಕ್ಕೆ ಹಾಜರಾಗಿದ್ದರು. ಠಾಣೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಿರುವ ಅವರು, ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದಾರೆ.

ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಮನೆ ಬಳಿ ಬಂದು ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಿ ಮೃತಪಟ್ಟಿದ್ದರು.ಗಂಡಸಿ ಹ್ಯಾಂಡ್ ಪೋಸ್ಟ್ ಬಳಿ ಇರುವ ಲಾಳನಕೆರೆ ಗ್ರಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ‌

ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಕಳೆದ 48 ಗಂಟೆಯಲ್ಲಿ ಎರಡು ಕೊಲೆ ಪ್ರಕರಣಗಳು ವರದಿಯಾಗಿವೆ. ಕೊಲೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಕಿರಣ್ ಪರಿಶೀಲನೆ ನಡೆಸಿದ್ದರು. ಒಂದು ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನೂ ಬಂಧಿಸಿದ್ದರು. ಕೆಲಸದ ಒತ್ತಡದಿಂದ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ‘ಕಿರಣ್ ಕುಮಾರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅನಗತ್ಯ ವದಂತಿ ಹಬ್ಬಿಸುವುದು ತರವಲ್ಲ. ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಯನ್ನು ಕಳೆದುಕೊಂಡ ದುಃಖ ಇದೆ. ಘಟನೆಗೆ ಕಾರಣ ಏನು? ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ತನಿಖೆಯಿಂದ ತಿಳಿಯಲಿದೆ. ಪಟ್ಟಣದಲ್ಲಿ ಕಳೆದ ಎರಡು ದಿನಗಳಲ್ಲಿ ಎರಡು ಕೊಲೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳು ಭೇಟಿ ನೀಡಿ ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಾರೆ’ ಎಂದರು.

‘ಗುರುವಾರ ರಾತ್ರಿ 8.40ರ ವೇಳೆಗೆ ನನ್ನ ಜತೆ ನಗುತ್ತಲೇ ಮಾತನಾಡುತ್ತಾ, ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿದ್ದರು. ಆದರೆ, ಅವರು ಯಾವ ಮನಸ್ಥಿತಿಯಲ್ಲಿದ್ದರು ಎಂಬುದು ಗೊತ್ತಿಲ್ಲ. ಅವರ ಮೇಲೆ ಯಾವುದೇ ಶಿಸ್ತುಕ್ರಮದ ಪ್ರಸ್ತಾವ ಇರಲಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಸ್ಪಷ್ಟಪಡಿಸಿದರು.

ಮೇಲಧಿಕಾರಿಗಳ ಒತ್ತಡ ಕಾರಣ: ದೇವೇಗೌಡ

‘ಪಿಎಸ್ಐ ಆತ್ಮಹತ್ಯೆಗೆ ಮೇಲಧಿಕಾರಿಗಳ ಒತ್ತಡ ಇರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ಗೃಹ ಸಚಿವರು ಯಾವುದೇ ಒತ್ತಡಗಳಿಗೆ ಮಣಿಯಬಾರದು’ ಎಂದು ಆಗ್ರಹಿಸಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ನ್ಯಾಯ ದೊರಕದಿದ್ದರೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT