ಬುಧವಾರ, ಸೆಪ್ಟೆಂಬರ್ 22, 2021
21 °C
ದೋಣಿಗಾಲ್‌ನಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ: ಸಾರ್ವಜನಿಕರ ಆರೋಪ

ಕೆರೆಯಾದ ತೋಟ: ಕೋಡಿ ಬಿದ್ದರೆ ಮತ್ತೆ ಸಮಸ್ಯೆ

ಜಾನೇಕೆರೆ ಆರ್. ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಎರಡು ವಾರಗಳ ಹಿಂದೆ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ದೋಣಿಗಾಲ್‌ ಬಳಿ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೂ ಕುಸಿತ ಉಂಟಾಗಿರುವ ಪಕ್ಕದಲ್ಲಿಯೇ, ಚತುಷ್ಪಥ ಕಾಮಗಾರಿಗಾಗಿ ತಡೆಗೋಡೆ ಇಲ್ಲದೆ ಮಣ್ಣು ಸುರಿದಿರುವ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು ಮತ್ತೊಂದು ಅನಾಹುತವಾಗುವ ಸಾಧ್ಯತೆ ಕಂಡು ಬಂದಿದೆ.

ಭೂ ಕುಸಿತವಾದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಡೆಗೋಡೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು ಮುಂದಿನ 15 ರಿಂದ 20 ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಮುನ್ಸೂಚನೆ ಇದೆ. ಆದರೆ, ಅದರ ಪಕ್ಕದಲ್ಲಿಯೇ ಸುಮಾರು ನೂರು ಅಡಿ ಆಳದ ಮೂಲಕವೇ ಚತುಷ್ಪಥ ಹಾದು ಹೋಗುವುದರಿಂದ, ಕಾಮಗಾರಿ ಗುತ್ತಿಗೆದಾರರು ತಡೆಗೋಡೆ ನಿರ್ಮಿಸದೆ ಸಾವಿರಾರು ಲೋಡ್‌ ಮಣ್ಣು ಸುರಿದು ಪ್ರಪಾತವನ್ನು ಮುಚ್ಚಿದ್ದಾರೆ.

ಗುಡ್ಡ ಹಾಗೂ ರಸ್ತೆಯಿಂದ ಹೊಳೆಯಂತೆ ಹರಿದು ಬರುವ ಮಳೆ ನೀರು ಕೆಳಭಾಗಕ್ಕೆ ಹೋಗುವುದಕ್ಕೆ ಪೈಪ್‌ಗಳನ್ನು ಅಳವಡಿಸದೆ ಮಣ್ಣು ಸುರಿಯಲಾಗಿದೆ. ಇದರಿಂದ ಕೆಳಭಾಗಕ್ಕೆ ನೀರು ಹರಿಯದೆ ಇಡೀ ತೋಟದಲ್ಲಿ ಭಾರಿ ನೀರು ನಿಂತು ಕೆರೆಯಂತಾಗಿದೆ. ಮಳೆ ಮುಂದುವರೆದರೆ ಚತುಷ್ಪಥಕ್ಕೆ ಹಾಕಿರುವ ಮಣ್ಣು ಕೋಡಿ ಬೀಳುವ ಸಂಭವವಿದೆ. ಕೋಡಿ ಬಿದ್ದರೆ, ಜಮೀನು, ಹೆದ್ದಾರಿಗೂ ಹಾನಿಯಾಗಲಿದೆ.

ಮುನ್ನೆಚ್ಚರಿಕೆ ಬೇಕು: ನೀರು ಒಮ್ಮೆಲೆ ನುಗ್ಗಿದರೆ ರಭಸಕ್ಕೆ ಪಕ್ಕದ ಹೆದ್ದಾರಿಯಲ್ಲಿ ಪುನಃ ಭೂ ಕುಸಿತದ ಆತಂಕ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಕೃತಕ ಕೋಡಿ ಮಾಡಿ ಖಾಲಿ ಮಾಡಬೇಕು. ಇಲ್ಲವಾದರೆ ಹೆದ್ದಾರಿಗೆ ಮತ್ತೆ ಕಂಟಕ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.

ಬೆಂಗಳೂರು– ಮಂಗಳೂರು ನಡುವಿನ ಸಂಪರ್ಕಕ್ಕೆ ಭಾರಿ ವಾಹನಗಳಿಗೆ ಶಿರಾಡಿ, ಚಾರ್ಮಾಡಿ, ಸಂಪಾಜೆ ಎಲ್ಲಾ ಮಾರ್ಗಗಳೂ ಸಹ ಬಂದ್ ಆಗಿ 20 ದಿನಗಳು ಕಳೆದಿವೆ. ಪ್ರಯಾಣಿಕರು, ಲಾರಿ ಮಾಲೀಕರು ದೋಣಿಗಾಲ್‌ ಭೂಕುಸಿತ ದುರಸ್ತಿ ಕಾಮಗಾರಿ ಮುಗಿಯುವುದನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಪುನಃ ಭೂ–ಕುಸಿತವಾದರೆ ಸಮಸ್ಯೆ ಮತ್ತೆ ಉಲ್ಬಣಿಸಲಿದೆ.

‘ಮಣ್ಣು ಹಾಕಿರುವ ಮೇಲ್ಭಾಗದ ತೋಟ ಕೆರೆಯಂತಾಗಿದೆ. ನೀರಿನ ಒತ್ತಡ ಹೆಚ್ಚಾದಂತೆ ಸಡಿಲವಾದ ಮಣ್ಣು ಕೋಡಿ ಬೀಳುವುದರಲ್ಲಿ ಅನುಮಾನ ಇಲ್ಲ’ ಎಂದು ಸಿವಿಲ್‌ ಎಂಜಿನಿಯರ್‌ ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.