ಶುಕ್ರವಾರ, ಸೆಪ್ಟೆಂಬರ್ 20, 2019
25 °C
ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸಿ; ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್‌

ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಇಂದಿನಿಂದ

Published:
Updated:

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳು, ಆಲೂಗೆಡ್ಡೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ರೈತರು ಮತ್ತು ವರ್ತಕರೊಂದಿಗೆ ಚರ್ಚಿಸಿ ಮೇ 16ರಿಂದ ಎಪಿಎಂಸಿಯಲ್ಲಿ ರೈತರಿಗೆ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಆರಂಭಿಸಲು ತೀರ್ಮಾನಿಸಲಾಯಿತು.

ಜಿಲ್ಲೆಯಲ್ಲಿ ಬಿತ್ತನೆಗೆ ಸೂಕ್ತ ಮಳೆಯಾಗುತ್ತಿರುವುದರ ಬಗ್ಗೆ ವಿವಿಧ ತಾಲ್ಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದು, ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ ಶೇ 50ರಷ್ಟು ಸಬ್ಸಿಡಿ ನೀಡಲಾಗುವುದು. ಈ ಬಗ್ಗೆ ರೈತರಿಗೆ ಕರಪತ್ರಗಳನ್ನು ವಿತರಿಸುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ ಮೂಲಕ ಪ್ರಚಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಪಿಎಂಸಿಯಲ್ಲಿ ಆಲೂಗೆಡ್ಡೆ ಬಿತ್ತನೆ ಬೀಜವನ್ನು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮಾರಾಟ ಮಾಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದ್ದು, ತೆರೆದ ಮಾರುಕಟ್ಟೆಗಳ ಮೂಲಕ ಬಿತ್ತನೆ ಬೀಜ ವಿತರಿಸಲು ಯೋಜನೆ ರೂಪಿಸಲಾಗಿದೆ. ವಿತರಣಾ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆಗೆ ಆಸ್ಪದ ನೀಡದಂತೆ ಎಚ್ಚರವಹಿಸಲು ಅಧಿಕಾರಿಗಳ ಗಮನಕ್ಕೆ ತಂದರು.

ದರ ನಿಗದಿಗೆ ಸಂಬಂಧಿಸಿದಂತೆ ರೈತರು ಮತ್ತು ವರ್ತಕರ ಜೊತೆ ಚರ್ಚಿಸಿ ಮಾತನಾಡಿದ ಅವರು, ರೈತರಿಗೆ ಹೊರೆಯಾಗದ ರೀತಿಯಲ್ಲಿ ದರ ನಿಗದಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವರ್ತಕರು ಸಹಕರಿಸಬೇಕು. ರೈತರಿಂದ ಯಾವುದೇ ದೂರು ಬಾರದಂತೆ ಬಿತ್ತನೆ ಬೀಜ ನೀಡಲು ವರ್ತಕರಿಗೆ ಸೂಚಿಸಿದರು.

ಆಲೂಗೆಡ್ಡೆ ಬೆಳೆ ಪ್ರೋತ್ಸಾಹಧನ ಪಡೆಯಲು ರೈತರು ಎಪಿಎಂಸಿಗೆ ಆಲೂಗೆಡ್ಡೆ ಖರೀದಿಗೆ ಬರುವ ಸಮಯದಲ್ಲಿ ಅರ್ಜಿ ನಮೂನೆ, ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ (ಪಾಸ್ ಪುಸ್ತಕದ ನಕಲು), ಪರಿಶಿಷ್ಟ ಜಾತಿ, ವರ್ಗದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ನಕಲು ತರಬೇಕು.

ಆಲೂಗೆಡ್ಡೆ ಬೆಳೆಗೆ ಅಗತ್ಯ ಇರುವ ಸಸ್ಯ ಸಂರಕ್ಷಣಾ ಔಷಧಿಗಳು ಹಾಗೂ ರಾಸಾಯನಿಕ ಗೊಬ್ಬರಗಳು ಎಪಿಎಂಸಿ ಆವರಣದಲ್ಲಿ ರೈತರಿಗೆ ದೊರೆಯುವಂತೆ ಮಾಡಲು ಅನುಕೂಲ ಕಲ್ಪಿಸಲಾಗುತ್ತದೆ. ಎಪಿಎಂಸಿ ಆವರಣದಲ್ಲಿ ಕಂದಾಯ ಇಲಾಖೆಯಿಂದ ಸಂಬಂಧಪಟ್ಟ ವೃತ್ತದ ಅಧಿಕಾರಿಗಳ ಮೂಲಕ ರೈತರಿಗೆ ಪಹಣಿ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ಶ್ರೀನಿವಾಸಯ್ಯ, ವಿಜ್ಞಾನಿಗಳಾದ ಸಂಧ್ಯಾ, ಸೌಮ್ಯಾ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ವರ್ತಕರು ಹಾಗು ರೈತರು ಸಭೆಯಲ್ಲಿ ಹಾಜರಿದ್ದರು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ವತಿಯಿಂದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಮಾಹಿತಿ, ಸಲಹಾ ಕೇಂದ್ರದ ಅಧಿಕಾರಿಗಳು, ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.

Post Comments (+)