ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ನಿರ್ಲಕ್ಷ್ಯದ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ಚಿಂತನೆ

ನೇರಲಕೆರೆ ಕೂಡಿಗೆ ಬಳಿ ಆಳ ಗುಂಡಿ: ವಾಹನಗಳ ಸಂಚಾರಕ್ಕೆ ಅಡಚಣೆ
Published 19 ಜುಲೈ 2023, 6:30 IST
Last Updated 19 ಜುಲೈ 2023, 6:30 IST
ಅಕ್ಷರ ಗಾತ್ರ

ಆಲೂರು: ರಾಷ್ಟ್ರೀಯ ಹೆದ್ದಾರಿಯಿಂದ ಆಲೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತಿರುವು ರಸ್ತೆಯಲ್ಲಿ, ನೇರಲಕೆರೆ ಕೂಡಿಗೆ ಬಳಿ ಆಳವಾದ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಸಂಬಂಧಿಸಿದ ಇಲಾಖೆ ಕೂಡಲೇ ಸರಿಪಡಿಸದಿದ್ದರೆ ಇಲಾಖೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಜನರು ಚಿಂತನೆ ನಡೆಸಿದ್ದಾರೆ.

ಬೇಲೂರು, ಬಿಕ್ಕೋಡು, ಸಕಲೇಶಪುರದ ಕಡೆಗೆ ಚಲಿಸುವ ಎಲ್ಲ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ಸಿಮೆಂಟ್ ರಸ್ತೆ ಮಾಡಲಾಗಿದೆ. ಆಲೂರಿನಿಂದ ರಾಷ್ಟ್ರೀಯ ಹೆದ್ದಾರಿ ಸಿಮೆಂಟ್ ರಸ್ತೆಗೆ ಹೋಗುವ ಮುನ್ನ ಹತ್ತಾರು ಗುಂಡಿಗಳನ್ನು ದಾಟಿ ಹೋಗಬೇಕು. ಅಡಿ ಆಳದ ಗುಂಡಿಗಳನ್ನು ದಾಟುವ ಸಂದರ್ಭದಲ್ಲಿ ಹಲವು ವಾಹನಗಳು ಪಂಕ್ಚರ್ ಆಗುವುದಲ್ಲದೇ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ದ್ವಿಚಕ್ರ ವಾಹನಗಳ ಪಾಡು ಹೇಳತೀರದಾಗಿದೆ.

ಹೆದ್ದಾರಿಯಿಂದ ಆಲೂರಿಗೆ ತಿರುವು ಪಡೆದುಕೊಳ್ಳಲು ಚಾಲಕರಿಗೆ ಸರಿಯಾಗಿ ಕಾಣುವಂತೆ ಯಾವುದೇ ಸೂಚನಾ ಫಲಕವಿಲ್ಲ. ವಾಹನಗಳು ಆಲೂರಿಗೆ ತಿರುವು ಪಡೆದುಕೊಳ್ಳುವ ಸಮಯದಲ್ಲಿ ಸಕಲೇಶಪುರ ಮತ್ತು ಹಾಸನ ಕಡೆಯಿಂದ ಓಡಾಡುವ ವಾಹನಗಳ ಚಾಲಕರಿಗೆ ಕಿರಿಕಿರಿ ಉಂಟಾಗಿ, ಕೆಲ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಮಳೆಗಾಲ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ದಿನದಿಂದ ದಿನಕ್ಕೆ ಗುಂಡಿಗಳು ಆಳ ಮತ್ತು ಅಗಲವಾಗುತ್ತಿವೆ.

ಕೇವಲ 100 ಮೀ. ಉದ್ದದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸರಿಪಡಿಸಿಲ್ಲ. ಈ ಮೂಲಕ ವಾಹನಗಳು ಮತ್ತು ಜನಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಪಘಾತಗಳು ಸಂಭವಿಸಿದಾಗ ಹೆದ್ದಾರಿ ಇಲಾಖೆ ವಿರುದ್ಧ ವಾಹನಗಳ ವಾರಸುದಾರರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಇಲಾಖೆ ಸಿಬ್ಬಂದಿ ಅಲೆದಾಡಿಸಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಕೂಡಲೇ ರಸ್ತೆಗಳ ಗುಂಡಿಗಳನ್ನು ಮುಚ್ಚಿ, ಡಾಂಬರೀಕರಣ ಮಾಡಿ ವಾಹನಗಳ ಸುರಕ್ಷತೆ ಕಾಪಾಡಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

‘ವಾಹನಗಳಿಗೆ ತೆರಿಗೆ ಕಟ್ಟದಿದ್ದರೆ ಸ್ಥಳದಲ್ಲಿ ದಂಡ ವಿಧಿಸುವುದಲ್ಲದೇ ಪ್ರಕರಣ ದಾಖಲಿಸುವ ಸರ್ಕಾರ, ವಾಹನಗಳ ಸುರಕ್ಷಿತ ಚಾಲನೆಗೆ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಹಲವು ತಿಂಗಳುಗಳಿಂದ ರಸ್ತೆ ಗುಂಡಿ ಬಿದ್ದಿದ್ದರೂ ಕಣ್ಣುಚ್ಚಿ ಕುಳಿತಿರುವುದು ನ್ಯಾಯಸಮ್ಮತವಲ್ಲ. ಕೂಡಲೇ ಗುಂಡಿಗಳನ್ನು ಮುಚ್ಚಿ ಡಾಂಬರು ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸದಿದ್ದರೆ ಇಲಾಖೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ವಕೀಲ ಕೆ.ಜಿ. ನಾಗರಾಜು ಎಚ್ಚರಿಸಿದ್ದಾರೆ.

ತೆರಿಗೆ ಕಟ್ಟದಿದ್ದರೆ ದಂಡ ವಿಧಿಸುವ ಸರ್ಕಾರ ಗುಂಡಿ ಮುಚ್ಚುತ್ತಿಲ್ಲ ಏಕೆ? ನಿತ್ಯ ಗುಂಡಿ ತಪ್ಪಿಸಿ ಓಡಾಡಲು ವಾಹನ ಸವಾರರ ಹರಸಾಹಸ ಮಳೆ ನೀರು ನಿಂತರೆ ಗುಂಡಿಗಳು ಕಾಣದೇ ಅಪಘಾತಕ್ಕೆ ಆಹ್ವಾನ

ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾಡಬೇಕು. ಲೋಕೋಪಯೋಗಿ ಇಲಾಖೆಗೆ ಇದು ಸಂಬಂಧಿಸಿಲ್ಲ.

-ಮಧು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT