ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಎತ್ತಿ ಹಿಡಿಯವವರಿಗೆ ಮತ ನೀಡಿ

ವಿದ್ಯಾರ್ಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಕಿವಿಮಾತು
Last Updated 21 ಮಾರ್ಚ್ 2019, 13:58 IST
ಅಕ್ಷರ ಗಾತ್ರ

ಹಾಸನ: ‘ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಶಕ್ತಿ ಇದ್ದವರಿಗೆ ಮತ ಹಾಕಬೇಕು. ಇಲ್ಲವಾದರೆ ನೋಟಾ ಒತ್ತಬೇಕು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು,

‘ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕಾದ ಶಾಸಕಾಂಗ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದೆ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಜನರ ತೆರಿಗೆ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಣ ಹಾಗೂ ತೋಳ್ಬಲ ಉಳ್ಳವರಿಗೆ ಮಾತ್ರ ಬದುಕು ಎಂಬ ವ್ಯವಸ್ಥೆ ನಿರ್ಮಾಣವಾಗುತ್ತಿದ್ದು, ಈ ಹಿಂದೆ ನಮ್ಮ ಹಿರಿಯರು ತೋರಿದ ಆದರ್ಶ ಕಣ್ಮರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯರು ಸಮಾಜಕ್ಕಾಗಿ ಪ್ರತಿಭಟಿಸಿ ಜೈಲು ಸೇರುತ್ತಿದ್ದರು. ಇಂದಿನವರು ತಮ್ಮ ಸ್ವಾರ್ಥ ಸಾಧನೆ ವಿಷಯಗಳಲ್ಲೆ ಹೆಚ್ಚು ಜೈಲು ಸೇರುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಗುತ್ತಿದೆ. ಎಂಥಹ ಕಾಲಘಟ್ಟದಲ್ಲಿ ಇದ್ದೇವೆ ಎಂಬುದನ್ನು ಯೋಚಿಸಬೇಕು ಎಂದು ನುಡಿದರು.

ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಕಾರ್ಯಾಂಗ ಕೂಡ ಶಾಸಕಾಂಗದ ಅಧೀನಕ್ಕೆ ಸಿಲುಕಿ ತನ್ನ ಮೌಲ್ಯ ಕಳೆದುಕೊಂಡಿದೆ. ಇದಕ್ಕೆ ದೇಶದಲ್ಲಿ ಹಲವಾರು ನಿದರ್ಶನಗಳು ಸಿಗುತ್ತಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳೇ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಜನಸೇವೆಗಾಗಿ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಗಳನ್ನು ಆಯ್ಕೆ ಮಾಡಬೇಕಾದ ಸರ್ಕಾರದ ಸಂಸ್ಥೆಯೇ ಹಣ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ತಲೆ ತಗ್ಗಿಸುವ ವಿಚಾರ ಎಂದರು.

‘ಇಂದಿನ ನ್ಯಾಯಾಂಗ ವ್ಯವಸ್ಥೆ ಹದಗೆಡುತ್ತಿದೆ ಎನ್ನಿಸುತ್ತಿದೆ. ಜನರ ವಿಶ್ವಾಸ ಕಳೆದುಕೊಂಡರೆ ಮುಂದೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ನಾಲ್ಕು ಗೋಡೆಯ ಮಧ್ಯೆ ‌ಇರಬೇಕಾದ ನ್ಯಾಯಾಧೀಶರು, ಶಿಷ್ಟಾಚಾರ ಉಲ್ಲಂಘಿಸಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸುವ ಮೂಲಕ ಮಾಧ್ಯಮ ಕ್ಷೇತ್ರವು ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ’ ಎಂದು ವಿಷಾದಿಸಿದರು.

ಪ್ರಾಂಶುಪಾಲ ಪ್ರೊ. ಮೋಹನ್ ಕುಮಾರ್ ಮಾತನಾಡಿ, ಗುರು ಹಿರಿಯರ ಮಾರ್ಗದರ್ಶನ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಅವರ ನಿರ್ದೇಶನದಂತೆ ಮುನ್ನಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತ ಮಹಿಳೆಯರಾದ ಶಾರದಮ್ಮ ಹಾಗೂ ಹೇಮ ಅನಂತ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪರೀಕ್ಷೆಯಲ್ಲಿ ಅಧಿಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಕಾಲೇಜು ಶಿಕ್ಷಣ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT