ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಪ್ರಜ್ವಲ್‌ ಉಮೇದುವಾರಿಕೆ ಸಲ್ಲಿಕೆ

ಕಾಂಗ್ರೆಸ್‌ ಮುಖಂಡರ ಮನೆಗೆ ಸಚಿವ ರೇವಣ್ಣ ಭೇಟಿ, ಸಹಕಾರ ಕೋರಿಕೆ
Last Updated 21 ಮಾರ್ಚ್ 2019, 13:39 IST
ಅಕ್ಷರ ಗಾತ್ರ

ಹಾಸನ: ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲು ಶುಭ ಮಹೂರ್ತ ಗೊತ್ತು ಮಾಡಿರುವ ತಂದೆ ಎಚ್.ಡಿ.ರೇವಣ್ಣ, ಶುಕ್ರವಾರ ಮಧ್ಯಾಹ್ನ 12.05 ರಿಂದ 1 ಗಂಟೆಯೊಳಗೆ ಉಮೇದುವಾರಿಕೆ ಸಲ್ಲಿಸಲಾಗುತ್ತದೆ.

ಬೆಳಗ್ಗೆ 6 ಗಂಟೆಯಿಂದ ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ಕುಲದೇವರು ಹರದನಹಳ್ಳಿ ದೇವೇಶ್ವರ ಹಾಗೂ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುವುದು.

ನಂತರ ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರು ಕ್ಷೇತ್ರ ಒಳಗೊಂಡಂತೆ 8 ವಿಧಾನಸಭಾ ಕ್ಷೇತ್ರಗಳಿಂದ ಸಹಸ್ರಾರು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.

‘ಈ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೂ ಹಾಜರಿರುವರು. ಹಲವರೊಂದಿಗೆ ಮಾತನಾಡಿದ್ದೇನೆ. ಕಡಿಮೆ ಸಮಯ ಇರುವ ಕಾರಣ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿ ಮಾಡಲು ಆಗುವುದಿಲ್ಲ. ಇದನ್ನೇ ಆಹ್ವಾನವೆಂದು ತಿಳಿದು ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬೇಕು. ನಾಮಪತ್ರ ಸಲ್ಲಿಕೆ ಬಳಿಕ ಸಭೆ ನಡೆಸಲಾಗುವುದು. ಶೀಘ್ರವೇ ಕಾಂಗ್ರೆಸ್‌-ಜೆಡಿಎಸ್ ನಾಯಕರು, ಕಾರ್ಯಕರ್ತರ ಜಂಟಿ ಸಭೆ ನಡೆಸಲಾಗುವುದು. ಮಾರ್ಚ್‌ 25ರಂದು ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವರು’ ಎಂದು ಸಚಿವ ಎಚ್‌.ಡಿ. ರೇವಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‌‌
ಇನ್ನು ಬೆಂಬಲ ಸಂಬಂಧ ಹಾಸನ ಜಿಲ್ಲೆಯ ಕಾಂಗ್ರೆಸ್‌ ನಾಯಕರ ಮನೆಗೆ ಭೇಟಿ ನೀಡಿ ಮನವೊಲಿಸುವುದನ್ನು ಮುಂದುವರಿಸಿರುವ ಸಚಿವ ರೇವಣ್ಣ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಆನಂದ್ ಹಾಗೂ ಹುಡಾ ಮಾಜಿ ಅಧ್ಯಕ್ಷ ಬಿ.ಕೆ.ರಂಗಸ್ವಾಮಿ ಅವರ ಮನೆಗೆ ಭೇಟಿ ನೀಡಿ ಸಹಕಾರ ನೀಡುವಂತೆ ವಿನಂತಿ ಮಾಡಿದರು.

ರೇವಣ್ಣ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖಂಡರು, ‘ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೈತ್ರಿ ಧರ್ಮ ಪಾಲನೆಯಂತೆ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ನಾವು, ನಮ್ಮ ಹಾಗೂ ಕಾರ್ಯಕರ್ತರನ್ನು ರೇವಣ್ಣ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ಕಾರದ ಕೆಲಸ-ಕಾರ್ಯಗಳಲ್ಲಿ ಪಾಲುದಾರಿಕೆ ನೀಡಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದೇವೆ ಎಂದರು.

ಒಟ್ಟಿನಲ್ಲಿ ನಮ್ಮ ನಾಯಕರ ಸೂಚನೆಯಂತೆ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ನೀಡುತ್ತೇವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲೂ ಭಾಗಿಯಾಗುತ್ತೇವೆ ಎಂದು ಎಸ್.ಎಂ.ಆನಂದ್ ಅಭಯ ನೀಡಿದರು. ಈ ಬಗ್ಗೆ ಶನಿವಾರ ಸಿದ್ಧರಾಮಯ್ಯ-ಸಚಿವ ರೇವಣ್ಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆ ನಿಗದಿಯಾಗಿದ್ದು, ಅಂದು ಅಸಮಾಧಾನಕ್ಕೆ ತೆರೆ ಬೀಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT