ಪ್ರತ್ಯೇಕ ಸಂವಿಧಾನ, ರಾಜ್ಯ ಕುರಿತು ಮಾತು ಸಲ್ಲದು: ಎಚ್.ಎಸ್.ದೊರೆಸ್ವಾಮಿ

7
‘ಹಸ್ತ ಪ್ರತಿಗಳಲ್ಲಿ ಶಾಂತಿಯ ಸಂದೇಶ’ ವಿಚಾರ ಸಂಕಿರಣ

ಪ್ರತ್ಯೇಕ ಸಂವಿಧಾನ, ರಾಜ್ಯ ಕುರಿತು ಮಾತು ಸಲ್ಲದು: ಎಚ್.ಎಸ್.ದೊರೆಸ್ವಾಮಿ

Published:
Updated:
Deccan Herald

ಹಾಸನ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತ್ಯೇಕ ಸಂವಿಧಾನ ಹಾಗೂ ರಾಜ್ಯದ ಕುರಿತು ಮಾತನಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದ ಸಂತ ಫಿಲೋಮಿನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಒರಿಯಂಟಲ್ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ‘ಹಸ್ತ ಪ್ರತಿಗಳಲ್ಲಿ ಶಾಂತಿಯ ಸಂದೇಶ’ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿಶ್ವಕ್ಕೆ ಮಾದರಿಯಾದ ಭಾರತ ಸಂವಿಧಾನವನ್ನು ಬದಲಿಸಬೇಕು, ಭೌಗೋಳಿಕವಾಗಿ ರಚನೆಯಾಗಿರುವ ರಾಜ್ಯವನ್ನು ಪ್ರತ್ಯೇಕ ಮಾಡಬೇಕೆಂಬ ಜನಪ್ರತಿನಿಧಿಗಳ ಹೇಳಿಕೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಬೆಳವಣಿಗೆಯಾಗಿದೆ. ದೇಶದಲ್ಲಿ ಬಡತನ ಹೋಗಲಾಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಗಳು ಬಡತನ ನಿರ್ಮೂಲನೆಗೆ ಈವರೆಗೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕೃಷಿ ಯೋಜನೆಗಳ ಹೆಸರಲ್ಲಿ ಸರ್ಕಾರಗಳು ಕೈಗಾರಿಕೋದ್ಯಮಿಗಳಿಗೆ ಹಣ ಮಾಡಿಕೊಡುತ್ತಿವೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಿರುವುದು ಸಮಾಜದ ಅಧಃಪತನಕ್ಕೆ ರಹದಾರಿಯಾಗಲಿದೆ. ದೇಶದಲ್ಲಿ ಮಾನವೀಯತೆ ಮರೆಯಾಗುತ್ತಿದ್ದು, ಮಕ್ಕಳ ಮೇಲೆ ಅತ್ಯಾಚಾರ ಮಾಡುವಷ್ಟು ಮನುಷ್ಯ ಕ್ರೂರಿಯಾಗಿದ್ದಾನೆ. ಕೊಲೆ, ಸುಲಿಗೆ, ಅತ್ಯಾಚಾರದಂತ ಅಮಾನವೀಯ ಘಟನೆಗಳನ್ನು ಮಾಡಲು ಹಣವೇ ಪ್ರಮುಖ ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

ದೇಶ, ದೇಶಗಳ ನಡುವೆ ಅಶಾಂತಿ ಉಂಟಾಗುತ್ತಿದ್ದು, ಯಾವ ಕ್ಷಣದಲ್ಲಾದರೂ ಯುದ್ಧ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದೇಶವೂ ನಿರೀಕ್ಷೆಗೂ ಮೀರಿದ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿಕೊಂಡಿದ್ದು, ಯಾವ ಕ್ಷಣದಲ್ಲಾದರೂ ಮಾನವ ಸಂಕುಲ ನಾಶವಾಗುವ ಭೀತಿ ಕಾಡುತ್ತಿದೆ. ಹೆಣ್ಣು ಮಕ್ಕಳು ಶಾಂತಿಯ ಹೋರಾಟಕ್ಕೆ ಮುಂದಾಗಬೇಕಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದೇ ಭಾವನೆಯಿಂದ ಜೀವಿಸಬೇಕಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಒರಿಯಂಟಲ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಸ್.ಶಿವರಾಜಪ್ಪ ಮಾತನಾಡಿ, ಹಸ್ತಪ್ರತಿಗಳ ಸಂಗ್ರಹದಲ್ಲಿ ಭಾರತ ವಿಶ್ವಕ್ಕೆ ಮಾದರಿ ಹಾಗೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಸ್ತಪ್ರತಿಗಳಲ್ಲಿ ಅಡಕವಾಗಿರುವ ಅಂಶ ಮನುಷ್ಯನ ಜೀವನದ ಪ್ರತಿನಿತ್ಯ ಬದುಕಿನಲ್ಲಿ ಬರುವಂತಹದು ಎಂದರು.

ಮಧುರೈ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಕಾಲೇಜಿನ ಪ್ರಾಂಶುಪಾಲರಾದ ಜಸಿಂತಾ ಕೋರಿಯಾ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಗರದ ಹೇಮಾವತಿ ಪ್ರತಿಮೆಯಿಂದ ಸಂತ ಫಿಲೋಮಿನಾ ಕಾಲೇಜಿನ ವರೆಗೆ ಶಾಂತಿ ಜಾಥ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕಿ ಪ್ರಮೀಳಾ ಡಿಸೋಜಾ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಆರ್.ವಿ.ಎಸ್. ಸುಂದರಮ್, ಸಂಸ್ಕೃತ ಪ್ರಾಧ್ಯಾಪಕ ರಾಮಶೇಷು, ಪ್ರಾಧ್ಯಾಪಕ ಕೆ. ಶಿವಚಿತ್ತಪ್ಪ, ಉಪ ಪ್ರಾಂಶುಪಾಲ ಡಿ.ಎಚ್.ರಾಘವ್, ಅಧ್ಯಾಪಕರಾದ ಕೆ.ವಿ.ರಾಮಪ್ರಿಯ, ತೇಜಸ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !