ಮಂಗಳವಾರ, ಸೆಪ್ಟೆಂಬರ್ 28, 2021
21 °C
ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಕಡೆ ಗಮನ

ಸಿ.ಎಂ ಭೇಟಿಯಿಂದ ಸಂತೃಪ್ತನಾಗಿರುವೆ: ಶಾಸಕ ಪ್ರೀತಂ ಜೆ.ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಯಾವುದೇ ಷರತ್ತಿನೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಲು ಹೋಗಿರಲಿಲ್ಲ. ನಾನು ಕೇಳಿದ ವಿಚಾರಗಳಿಗೆ ಸಮಾಧಾನ ತರುವ ಹಾಗೂ ಶಕ್ತಿ ತುಂಬುವ ರೀತಿಯಲ್ಲಿ ಉತ್ತರಿಸಿರುವುದರಿಂದ ಸಂತೃಪ್ತನಾಗಿದ್ದೇನೆ’ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ಸಿ.ಎಂ ಬಸವರಾಜ ಬೊಮ್ಮಾಯಿ– ದೇವೇಗೌಡರ ಭೇಟಿ ವಿಚಾರದ ಬಗ್ಗೆ ಲಕ್ಷಾಂತರ ಕಾರ್ಯಕರ್ತರ ಪರವಾಗಿ ಮಾತನಾಡಿದ್ದೆ. ರಾಜ್ಯದ ಕಾರ್ಯಕರ್ತರು ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಸಿ.ಎಂ ಸಹಕಾರ ನೀಡುತ್ತಾರೆ ಎಂಬ ನಂಬಿಕೆ ಇದೆ. ಅದನ್ನು ಮುಂದುವರೆಸಲು ಹೋಗುವುದಿಲ್ಲ. ಹಾಸನ ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಕಡೆ ಗಮನ ಹರಿಸುತ್ತಿದ್ದೇನೆ ಎಂದು ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಸಚಿವ ಸ್ಥಾನ ನೀಡುವಂತೆ ನಾಯಕರನ್ನು ಕೇಳಿಲ್ಲ. ಪ್ರೀತಂ ಅವರನ್ನು ಮಂತ್ರಿ ಮಾಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ಸಚಿವ ಸ್ಥಾನಕ್ಕಾಗಿ ಯಾವತ್ತು ಯಾರನ್ನು ಹೋಗಿ ಕೇಳಿಲ್ಲ, ಮುಂದೆಯೂ ಕೇಳುವುದಿಲ್ಲ. ಅರ್ಹತೆ, ಯೋಗ್ಯತೆ ಇದ್ದರೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಅಲ್ಲಿವರೆಗೂ ಪಕ್ಷದ ಕೆಲಸ ಹಾಗೂ ಆಡಳಿತದಲ್ಲಿ ಅನುಭವ ಸಂಪಾದನೆ ಮಾಡುವ ಕಡೆ ಗಮನ ಹರಿಸುತ್ತೇನೆ’ ಎಂದು ಹೇಳಿದರು.

‘ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆ ಮನುಕುಲಕ್ಕೆ ಗಾಬರಿ ಉಂಟು ಮಾಡುತ್ತಿದೆ. ಅಫ್ಗಾನಿಸ್ತಾನದಲ್ಲಿ ಆಗಿರುವುದು ಬೇರೆ ದೇಶಗಳಲ್ಲೂ ಆಗುವ ಸಾಧ್ಯತೆ ಇದೆ. ಆದರೆ, ನಮಗೆ ಧೈರ್ಯ ಮತ್ತು ಹೆಮ್ಮೆ ಇದೆ. ಏಕೆಂದರೆ ಭಾರತ ಸದೃಢ ನಾಯಕನ ಕೈಯಲ್ಲಿ ಇದೆ. ವಿರೋಧ ಪಕ್ಷದವರು ಇಂಧನ ದರ ಏರಿಕೆ ವಿರುದ್ಧ ಬೊಂಬಡಿ ಹೊಡೆಯುತ್ತಿದ್ದಾರೆ. ದೇಶ ಸುಭದ್ರವಾಗಿ ಇರಬೇಕಾದರೆ ಸಮರ್ಥ ನಾಯಕತ್ವ ಬೇಕು. ಬೆಲೆ ಏರಿಕೆಗೆ ಬೇರೆ ಕಾರಣಗಳಿರುತ್ತದೆ. ದೇಶ ಮುಖ್ಯ’ ಎಂದರು.

ಜಿಲ್ಲೆಯಲ್ಲಿ ಆಲೂಗಡ್ಡೆ ಎಷ್ಟೇ ಬೆಳೆದರೂ ಕೆ.ಜಿ.ಗೆ ₹10 ಕ್ಕೆ ಮಾರಾಟ ಮಾಡುತ್ತೇವೆ. ಆದರೆ, 100 ಗ್ರಾಂ ಚಿಪ್ಸ್‌ಗೆ ₹25 ಕೊಡುತ್ತೇವೆ. ಈ ಲಾಭ ರೈತರಿಗೆ ಆಗಬೇಕು. ರೈತರ ಸಮಸ್ಯೆಗಳನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗಮನಕ್ಕೆ ತರಲಾಗಿದೆ. ಕೃಷಿ ಇಲಾಖೆಗೆ ಹೊಸ ಆಯಾಮ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಕೊರೊನಾ ಸೋಂಕು ಕಡಿಮೆ ಆಗಿದೆ ಹೊರತು ಮಾಯವಾಗಿಲ್ಲ. ಹಾಗಾಗಿ ಜಿಲ್ಲೆಯ ಜನರು ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲನೆ ಮಾಡಬೇಕು. ಹೆಚ್ಚು ಜನ ಗುಂಪಾಗಿ ಸೇರದೆ ಅಂತರ ಪಾಲನೆ ಮಾಡಬೇಕು. ಸಭೆ, ಸಮಾರಂಭಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ. ಹಾಸನ ಕ್ಷೇತ್ರದಲ್ಲಿ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ಇದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ಧೆನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು