ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ನೆಲಕ್ಕೊರಗಿದ ಫಸಲು

ಅಡಿಕೆಗೆ ಕೊಳೆರೋಗ ಭೀತಿ, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ
Last Updated 25 ಅಕ್ಟೋಬರ್ 2021, 4:46 IST
ಅಕ್ಷರ ಗಾತ್ರ

ಹಾಸನ: ಮುಂಗಾರು ರೈತ ಸಮುದಾಯದಲ್ಲಿ ಹರ್ಷ ಉಂಟು ಮಾಡಿತ್ತು. ಆದರೆ, ಅಗತ್ಯಕ್ಕಿಂತ ಅಧಿಕ ಮಳೆ ಆಗುತ್ತಿರುವುದರಿಂದ ಬೆಳೆಗಳಿಗೆ ರೋಗದ ಕಾಟ ಉಂಟಾಗಿದೆ. ಬೆಳೆದು ನಿಂತ ಫಸಲು ನೆಲಕ್ಕೊರಗಿದೆ. ಅತಿಯಾದ ಮಳೆ ವರದ ಬದಲು ಶಾಪವಾಗಿ ಪರಿಣಮಿಸಿದೆ.

ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಹಾಸನ, ಅರಕಲಗೂಡು, ರಾಮನಾಥಪುರ, ಚನ್ನರಾಯಪಟ್ಟಣ, ಸಕಲೇಶಪುರ, ಹೆತ್ತೂರು ಭಾಗದಲ್ಲಿ ವಾಸದ ಮನೆಗಳಿಗೆ ನೀರು ನುಗ್ಗಿದ್ದು ಒಂದೆಡೆಯಾದರೆ, ಬೆಳೆಗಳು ಜಲಾವೃತಗೊಂಡು ಸಂಕಷ್ಟ ಉಂಟಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಅಚ್ಚುಕಟ್ಟು, ಬೆಳೆ ಜಮೀನುಗಳಿಗೆ ನೀರು ನುಗ್ಗಿದೆ. ಮಳೆ ನೀರಿನ ರಭಸಕ್ಕೆ ನಾಲೆಗಳು ಉಕ್ಕಿ ಹರಿ
ದಿದ್ದು, ಪಕ್ಕದ ಗದ್ದೆಗಳಿಗೆ ನೀರು ನುಗ್ಗಿದೆ.

ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ರಾಮನಾಥಪುರ ಹೋಬಳಿಯಲ್ಲಿ 30 ಮತ್ತು ಕೊಣನೂರು ಹೋಬಳಿಯಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ. ಆಲೂರು, ಹೊಳೆನರಸೀಪುರದಲ್ಲೂ ಮನೆ ಗೋಡೆಗಳು ಕುಸಿದಿವೆ. ಮುಚ್ಚಿದ್ದ ರಸ್ತೆ ಗುಂಡಿಗಳು ಮಳೆ ನೀರಿನ ಸೆಳೆತಕ್ಕೆ ಮತ್ತೆ ಬಾಯ್ದೆರೆದಿವೆ. ಅತಿಯಾದ ತೇವಾಂಶದಿಂದ ಮನೆಗಳು ಕುಸಿಯಲಾರಂಭಿಸಿದ್ದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಸಕಲೇಶಪುರ, ಅರಕಲಗೂಡು ತಾಲ್ಲೂಕುಗಳಲ್ಲಿ ಕಾಫಿ, ಮೆಣಸು, ಹೊಗೆಸೊಪ್ಪು, ಬಾಳೆ ಬೆಳೆಗಳಿಗೆ ಮಳೆ
ಕಂಟಕವಾಗಿದೆ. ತರಕಾರಿ ಬೆಳೆಗಳಿಗೂ ಹಾನಿಯಾಗಿದೆ. ಆಲೂರು ತಾಲ್ಲೂಕಿನಲ್ಲಿ ಸತತ ಮಳೆಯ ತೇವಾಂಶಕ್ಕೆ ಸಿಲುಕಿ ಶುಂಠಿ ಬೆಳೆ ಕೊಳೆಯುತ್ತಿದೆ.

ಈ ವರ್ಷ ಮುಂಗಾರು ತುಸು ಆಶಾದಾಯಕವಾಗಿತ್ತು. ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಭತ್ತ, ರಾಗಿ, ಜೋಳ
ಕಟಾವಿಗೆ ಬಂದಿದ್ದು, ಇನ್ನೇನು ಒಕ್ಕಣೆ ಕಾರ್ಯ ಆರಂಭವಾಗಬೇಕು.

ಕಾಫಿ, ಕಾಳು ಮೆಣಸು ಬೆಳೆ ಕೊಳೆಯಿಂದ ನಾಶವಾಗುತ್ತಿದ್ದರೆ, ತೆನೆ ಕಟ್ಟುವ ಹಂತದಲ್ಲಿರುವ ಭತ್ತದ ಪೈರು ಮಳೆ ಹನಿಗಳ ರಭಸಕ್ಕೆ ಜೊಳ್ಳಾಗುವ ಆತಂಕ ರೈತರಿಗೆ ಎದುರಾಗಿದೆ. ಬಹುತೇಕ ಭತ್ತ ನಾಟಿ ಮಾಡಿದ್ದ ದಿನಗಳ ಲೆಕ್ಕದಲ್ಲಿ ಅಕ್ಟೋಬರ್ ಎರಡನೇ ವಾರಕ್ಕೆ ತೆನೆ ಕಟ್ಟುವ ಹಂತ ತಲುಪುತ್ತದೆ.

ಜಿಲ್ಲೆಯಲ್ಲಿ ಅ.1 ರಿಂದ 21ರ ವರೆಗೆ ವಾಡಿಕೆ ಮಳೆ 11.2.0 ಸೆಂ.ಮೀ ಮಳೆ ಪೈಕಿ 15.45 ಸೆಂ.ಮೀ ಮಳೆ ಆಗಿದೆ. ಶೇ 38 ರಷ್ಟು ಹೆಚ್ಚು ಮಳೆಯಾಗಿದೆ. ಜ.1 ರಿಂದ ಅ. 21ರ ವರೆಗೆ ವಾಡಿಕೆ ಮಳೆ 103.41 ಸೆಂ.ಮೀ ಪೈಕಿ 104.94 ಸೆಂ.ಮೀ ಮಳೆಯಾಗಿದೆ.

ಮಲೆನಾಡಿನಲ್ಲಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಈಗಾಗಲೇ ಕೊಯ್ಲು ಮಾಡಿದ ಕಾಫಿಯನ್ನು ಮಳೆ
ಯಿಂದಾಗಿ ಒಣಗಿಸಲು ಸಾಧ್ಯವಾಗದೇ ಕಣದಲ್ಲಿ ರಾಶಿ ಮಾಡಿದ್ದು, ಕಾಫಿ ಕೊಳೆಯುವಂತಾಗಿದೆ. ಗಿಡದಲ್ಲಿ ಹಣ್ಣಾದ ಕಾಫಿಯನ್ನು ಕೊಯ್ಯದೇ ಬಿಟ್ಟರೆ ಕಾಫಿ ಉದುರ ತೊಡಗುತ್ತದೆ.

‘ನಿರಂತರ ಮಳೆಯಿಂದ ಕಾಳು ಮೆಣಸಿಗೆ ಬೆಳೆಗೆ ಕೋಳೆ ರೋಗ ಬಂದು ಸಾವಿರಾರು ರೂಪಾಯಿ ನಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು’ ಎಂದು ಹೆತ್ತೂರು ಹೋಬಳಿಯ ಹಳೆಕರೆ ರೈತ ಮಹಿಳೆ ಸುಂದ್ರಮ್ಮ ಮನವಿ ಮಾಡಿದರು.

‘ಮಳೆ –ಗಾಳಿಗೆ ಹೆತ್ತೂರು ಹೋಬಳಿ
ಯಲ್ಲಿ 30 ಮನೆ ಹಾನಿಯಾಗಿದೆ, ಸುಮಾರು 4 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ’ ಎಂದು ಗ್ರಾಮ ಲೆಕ್ಕಿಗ ವಿನಯ್ ಹೇಳಿದರು.

ಬಹುತೇಕ ಕಡೆಗಳಲ್ಲಿ ಮುಂಗಾರಿ
ನಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಕಟಾವಿನ ಹಂತಕ್ಕೆ ಬಂದಿದ್ದು, ಮಳೆ ಹೀಗೆ
ಮುಂದುವರೆದರೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತದೆ. ಅದ
ರಲ್ಲೂ ಮೆಕ್ಕೆಜೋಳ, ಈರುಳ್ಳಿ, ರಾಗಿ ಬೆಳೆದಿರುವ ರೈತರಿಗೆ ಆತಂಕ ಕಾಡುತ್ತಿದೆ.

ಹೊಳೆನರಸೀಪುರ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ದೇವಮ್ಮ ಅವರ ಮಣ್ಣಿನ ಗೋಡೆಗಳು ಕುಸಿದು ಬಿದ್ದು, ಕುಟುಂಬ ಸದಸ್ಯರು ಬೀದಿ ಪಾಲಾಗಿದ್ದಾರೆ. ಮನೆಯೂ ಬೀಳುವ ಹಂತದಲ್ಲಿದೆ. ಚಿಕ್ಕ ಮನೆಯಲ್ಲಿ ಮಗನ ಸಂಸಾರದೊಂದಿಗೆ ಮಹಿಳೆ ಇದ್ದು, ಮನೆ ಕುಸಿದಿರುವ ಕಾರಣದಿಂದ ಕುಟುಂಬದ ಸದಸ್ಯರು ಹೊರಗೆ ವಾಸ ಮಾಡಬೇಕಾಗಿದೆ. ನಿರಾಶ್ರಿತರು ನೆಂಟರಿಷ್ಟರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಅರಕಲಗೂಡು ತಾಲ್ಲೂಕಿನ ಕೊಣನೂರು ಮತ್ತು ರಾಮನಾಥಪುರ ಭಾಗದಲ್ಲಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಅಚ್ಚುಕಟ್ಟು, ಬೆಳೆ ಜಮೀನುಗಳಿಗೆ ನೀರು ನುಗ್ಗಿದೆ. ಸತತ ಮಳೆಯ ತೇವಾಂಶಕ್ಕೆ ಸಿಲುಕಿ ಶುಂಠಿ ಬೆಳೆ ಕೊಳೆಯುತ್ತಿದೆ.

ಮಳೆಯಿಂದ ಬೆಳೆ ಹಾನಿಗಿಂತ ಆಸ್ತಿ ಪಾಸ್ತಿಗಳಿಗೆ ಹೆಚ್ಚಿನ ಹಾನಿಯಾಗಿದೆ. ಈ ವರೆಗೆ 64 ಮನೆಗಳು ಭಾಗಶಃ ಹಾನಿಯಾಗಿದೆ. ಮೂರು ಜಾನುವಾರು
ಗಳು ಮೃತಪಟ್ಟಿವೆ. ಬಸವಾಪಟ್ಟಣ, ಕಾಳೇನಹಳ್ಳಿ ಕೊಣನೂರು ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದ.

‘ತೋಟಗಳಿಗೆ ನೀರು ನುಗ್ಗಿ ಅಡಿಕೆ, ಬಾಳೆ ಸೇರಿದಂತೆ 20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್ ತಿಳಿಸಿದರು.

"ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಬೆಳೆ ಹಾನಿ ಪ್ರಕರಣಗಳು ವರದಿಯಾಗಿಲ್ಲ. ಮುಸುಕಿನ ‘ಜೋಳಕ್ಕೆ ಉತ್ತಮ ಬೆಲೆ ಇದ್ದರೂ ಕಟಾವು ಮಾಡಿ ಮಾರಾಟ ಮಾಡಲು ಮಳೆ ಅಡ್ಡಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.

‘ಕೇರಳಾಪುರದಲ್ಲಿ 2 ಮನೆ, ಜಿಟ್ಟೇನಹಳ್ಳಿಯಲ್ಲಿ 2, ಬೋರೆಕೊಪ್ಪಲಿ
ನಲ್ಲಿ 1, ಬಸವಾಪಟ್ಟಣದಲ್ಲಿ 2, ಬೆಟ್ಟ
ಸೋಗೆಯಲ್ಲಿ 1, ರಾಮನಕೊಪ್ಪಲಿನಲ್ಲಿ 2, ರುದ್ರಪಟ್ಟಣದಲ್ಲಿ 5, ಆನಂದೂರಿ
ನಲ್ಲಿ 2, ಕಂಠಾಪುರದಲ್ಲಿ 1, ಮಧುರನ
ಹಳ್ಳಿಯಲ್ಲಿ 2 ಮನೆಗಳು, ಹನ್ಯಾಳು ಮತ್ತಿತರೆಡೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮನೆಗಳು ಬಿದ್ದಿವೆ’ ಎಂದು ಕಂದಾಯ ನಿರೀಕ್ಷಕ ಸಿ.ಸ್ವಾಮಿ ತಿಳಿಸಿದ್ದಾರೆ.

‘ಧಾರಾಕಾರ ಮಳೆಯಿಂದ ಕೊಚ್ಚಿ ಹೋದ ರಸ್ತೆ ಮತ್ತೆ ನಿರ್ಮಾಣ ಮಾಡಿದ್ದು, ಶಾಶ್ವತ ಸೇತುವೆ ಕಾಮಗಾರಿಯು ಟೆಂಡರ್ ಹಂತದಲ್ಲಿದೆ. ಕಾಳೇನಹಳ್ಳಿಯ ತೋಟಗಳಿಗೆ ಪರಿಹಾರ ನೀಡಲು ಕಡತ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಕೇರಳಾಪುರ ಮತ್ತು ಬಸವನ
ಹಳ್ಳಿಯ ನಡುವಿನ ಸಂಪರ್ಕ ಸೇತುವೆ ಕುಸಿದ ಪರಿಣಾಮ, ತಾತ್ಕಾಲಿಕ ರಸ್ತೆಯು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಮತ್ತೊಮ್ಮೆ ರಸ್ತೆಯನ್ನು ಪುನರ್ ನಿರ್ಮಿಸಲಾಗಿದೆ.

‘ಕೇರಳಾಪುರದ ಬಸವನಹಳ್ಳಿಯ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆ ಮತ್ತೆ ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣ ಆಗುವವರೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ’ ಎಂದು ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯರಾಮು ಹೇಳಿದರು.

ಆಲೂರು ತಾಲ್ಲೂಕಿನಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ 66, ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಗೆ 6 ಮನೆಗಳು ಸೇರಿ ಒಟ್ಟು 72 ಮನೆಗಳಿಗೆ ಹಾನಿಯಾಗಿದೆ. ಎರಡು ಹಸುಗಳು ಮೃತಪಟ್ಟಿವೆ. ಸುಮಾರು 66 ಮನೆಗಳಿಗೆ ಶೇ 25 ಕ್ಕಿಂತ ಹೆಚ್ಚು ಹಾನಿಯಾಗಿದೆ.

ಆಲೂಗಡ್ಡೆ ಕರಿಕಡ್ಡಿ, ಭತ್ತಕ್ಕೆ ಬೆಂಕಿ ರೋಗ ತಗುಲಿದೆ. ಮುಸುಕಿನ ಜೋಳ ಬೆಳೆಗೆ ಫಂಗಸ್ ಕಾಣಿಸಿಕೊಂಡಿದೆ. ಹೈಟೆಕ್ ಜೋಳದಲ್ಲಿ ಇಳುವರಿ ಕಡಿಮೆಯಾಗಿದೆ. ಕೆ.ಹೊಸಕೋಟೆ ಮತ್ತು ಕುಂದೂರು ಹೋಬಳಿಗಳಲ್ಲಿ ಕಾಫಿ, ಏಲಕ್ಕಿ ಮೆಣಸು ಬೆಳೆಗಳು ಉದುರುತ್ತಿದ್ದು, ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಆತಂಕ ಉಂಟಾಗಿದೆ.

‘ಶುಂಠಿ ಮತ್ತು ಆಲೂಗಡ್ಡೆ ಬೆಳೆಗೆ ಶೀತ ಜಾಸ್ತಿಯಾದ ಪರಿಣಾಮ ರೋಗ ಅಧಿಕವಾಗಿ, ಆಲೂಗಡ್ಡೆ ಬೆಳೆಗೆ ಕರಕಲು ರೋಗ ತಗುಲಿತು. ಶುಂಠಿ ಬೆಳೆ ಕೊಳೆಯಲು ಪ್ರಾರಂಭಿಸಿದೆ’ ಎಂದು ತಾಲ್ಲೂಕಿನ ಕುಂಬಾರಹಳ್ಳಿ ರೈತ ಆನಂದ್ ತಿಳಿಸಿದರು.

‘ಮಳೆಗೆ ಮೆಕ್ಕೆಜೋಳ ಹೊಲ
ದಲ್ಲಿಯೇ ಮೊಳಕೆಯೊಡೆಯುತ್ತಿದ್ದು, ಹೊಲದಿಂದ ತೆಗೆಯಲು ಸಾಧ್ಯವಾಗು
ತ್ತಿಲ್ಲ. ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು
ರೈತ ಧರ್ಮಪುರಿ ಜಯರಾಂ ಹೇಳಿದರು.

‘ಮಳೆಯಿಂದ ಯಾವ ಬೆಳೆಯೂ ರೈತರ ಕೈ ಸೇರುತ್ತಿಲ್ಲ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಬೆಳೆ
ಮಾರಾಟವಾಗದೆ ನಷ್ಟ ಅನುಭವಿಸಬೇಕಾಯಿತು. ಈ ವರ್ಷ ಮಳೆಯಿಂದ ಕಾಫಿ, ಏಲಕ್ಕಿ, ಮೆಕ್ಕೆಜೋಳ
ಸೇರಿದಂತೆ ಬಹುತೇಕ ಬೆಳೆಗಳು ನೆಲ ಕಚ್ಚಿವೆ’ ಎಂದು ಮಂಚೇನಹಳ್ಳಿ ರೈತ ಎಂ.ಡಿ. ಮಂಜುನಾಥ್ ಅಳಲು
ತೋಡಿಕೊಂಡರು..

‘ಪ್ರಜಾವಾಣಿ ತಂಡ: ಕೆ.ಎಸ್.ಸುನಿಲ್, ಜೆ.ಎಸ್‌.ಮಹೇಶ್‌, ಬಿ.ಪಿ.ಗಂಗೇಶ್‌, ಎಂ.ಪಿ.ಹರೀಶ್‌, ಜಗದೀಶ್‌, ಜಿ. ಚಂದ್ರಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT